200 ಕೋಟಿ ಹಣದ ಆಸೆ ತೋರಿಸಿ 11.5 ಕೋಟಿ ಪಂಗನಾಮ ಹಾಕಿದ ನಟಿ ; ಸ್ವೀಟ್ ತರುವುದಾಗಿ ಹೇಳಿ ಎಸ್ಕೇಪ್- ದೂರು ದಾಖಲು
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತಕ್ಕೆ ಬೀಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಣ್ಣ ಬಣ್ಣದ ಮಾತುಗಳಿಂದ ನಂಬಿಸುವ ಇವರು ಎದುರಗಡೆ ಇರುವ ವ್ಯಕ್ತಿ ಚೂರು ಯಾಮಾರಿದರೂ ಸಾಕು ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. . ಇದಕ್ಕೆ ಕೈಗನ್ನಡಿ ಎಂಬಂತೆ ಈಗೀಗ ಚಿತ್ರರಂಗದವರ ಮೇಲೆ ವಂಚನೆ, ನಂಬಿಕೆ ದ್ರೋಹ, ಚೆಕ್ ಬೌನ್ಸ್, ಸೇರಿ ಹಲವರು ಆರೋಪಗಳು... ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೇಳಿ ಬರುತ್ತಲೇ ಇವೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಉದಾಹರಣೆಗೆ ಆಕಾಂಕ್ಷಾ ಅವಸ್ಥಿ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ.

ಹೌದು, ಆಕಾಂಕ್ಷಾ ಅವಸ್ಥಿ.. ಭೋಜ್‌ಪುರಿಯ ಖ್ಯಾತ ನಾಯಕಿ. ''ಘರ್ ಕೀ ಲಕ್ಷ್ಮೀ ಬೇಟಿಯಾ'' ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಆಕಾಂಕ್ಷಾ ಭೋಜ್‌ಪುರಿಯ ಸೂಪರ್ ಸ್ಟಾರ್ ಕೇಸರಿ ಲಾಲ್ ಯಾದವ್ ಅವರ ಜೊತೆ ''ದಬಾಂಗ್ ಸರ್ಕಾರ್'' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಬೆಳ್ಳಿತೆರೆಗೆ ಬಂದರು. ''ರಾಕಿ ಹ್ಯಾಂಡ್ಸಮ್''.. ''ವಿವಾಹ್''.. ''ಜೈಹಿಂದ್'' ಇವರು ಅಭಿನಯಿಸಿರುವ ಕೆಲ ಪ್ರಮುಖ ಚಿತ್ರಗಳು.
ಇಂಥಾ ಆಕಾಂಕ್ಷಾ ಮತ್ತು ಅವರ ಪತಿ ವಿವೇಕ್ ಕುಮಾರ್ ವಿರುದ್ಧ 11.5 ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಮುಂಬೈನ ಪಂತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮುಂಬೈ ಮೂಲದ ಕಸ್ಟಮ್ಸ್ ಕ್ಲಿಯರೆನ್ಸ್ ಏಜೆಂಟ್ ಹಿತೇಶ್ ಕಾಂತಿಲಾಲ್ ಅಜ್ಮೇರಾ ಗೋವಾದಲ್ಲಿ ಭೂ ವ್ಯವಹಾರ ಮಾಡುತ್ತಿದ್ದರು. ಇದೇ ಸಮಯದಲ್ಲಿ ಇವರಿಗೆ ಪರಿಚಯವಾದ ಶಾಂತಿಲಾಲ್ ಪಟೇಲ್ ಎಂಬ ವ್ಯಕ್ತಿ ಇವರನ್ನು ಆಕಾಂಕ್ಷಾ ಅವಸ್ಥಿ ಮತ್ತು ಅವರ ಪತಿ ವಿವೇಕ್ ಸಿನ್ಹಾಗೆ ಪರಿಚಯ ಮಾಡಿಸಿದ್ದರು. ಚಿತ್ರಂಗದಲ್ಲಿ ಇವರಿಬ್ಬರದ್ದು ತುಂಬಾ ದೊಡ್ಡ ಹೆಸರಿದೆ, ಮುಂಬೈನಲ್ಲಿ ಬಹುದೊಡ್ಡ ಸ್ಟುಡಿಯೋ ಕೂಡ ಇದೆ ಎಂದು ನಂಬಿಸಿದ್ದರು.
ಹೀಗೆ ಶುರುವಾದ ಮಾತುಕತೆಯ ನಂತರ ಆಕಾಂಕ್ಷಾ ಅವರ ಪತಿ ವಿವೇಕ್ ತಮ್ಮ ಬಳಿ ₹300 ಕೋಟಿ ಹಣ ಇರುವುದಾಗಿ ಹಿತೇಶ್ ಕಾಂತಿಲಾಲ್ ಅಜ್ಮೇರಾ ಅವರಿಗೆ ಹೇಳಿದ್ದರು. ಬಿಹಾರದ ಚಂಪಾರಣ್‌ನಲ್ಲಿರುವ ಗೋದಾಮಿನಲ್ಲಿ ಆ ಹಣ ಇರುವುದಾಗಿ ಹೇಳಿದ ವಿವೇಕ್ ಆ ಗೋದಾಮಿನ ಬಾಡಿಗೆ ನೀಡಬೇಕು ಆದರೆ ಅದಕ್ಕೆ ತನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದರು. ಗೋದಾಮಿನ ಬಾಡಿಗೆ ಹಣವಾದ ₹11.50 ಕೋಟಿ ಹಣ ನೀವು ನೀಡಿದರೆ ಆ ₹300 ಕೋಟಿಯಲ್ಲಿ ₹200 ಕೋಟಿಯನ್ನು ಬಡ್ಡಿರಹಿತವಾಗಿ ನೀಡುವುದಾಗಿ ಆಮಿಷವೊಡ್ಡಿದ್ದರು.

ಆರಂಭದಲ್ಲಿ ಹಿತೇಶ್ ಕಾಂತಿಲಾಲ್ ಅಜ್ಮೇರಾ ಹಿಂದೇಟು ಹಾಕಿದರಾದರೂ ಬಡ್ಡಿರಹಿತ ₹200 ಕೋಟಿ ಸಿಗುತ್ತೆ ಎನ್ನುವ ಆಸೆಯಲ್ಲಿ ಗೋದಾಮಿನ ಮಾಲೀಕರನ್ನು ಭೇಟಿಯಾದರು. ಅವರು ತೋರಿಸಿದ ಬಾಡಿಗೆ ಹಾಗೂ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ ಆಕಾಂಕ್ಷಾ ಅವರ ಪತಿ ವಿವೇಕ್ ಕುಮಾರ್ ಅವರಿಗೆ ಮೂರು ಕಂತುಗಳಲ್ಲಿ ಒಟ್ಟು ₹11.50 ಕೋಟಿ ವರ್ಗಾಯಿಸಿದರು.
ಹಣ ವರ್ಗಾವಣೆಯ ಬಳಿಕ, ಗೋದಾಮ್ ಕಡೆಗೆ ಪ್ರಯಾಣಿಸುವಾಗ ವಿವೇಕ್ ಕುಮಾರ್ ಅಷ್ಟೊಂದು ಹಣ ನಿಮಗೆ ಸಿಗಲಿದೆ, ಈ ಹಿನ್ನೆಲೆ ಸ್ವೀಟ್ ತರುವುದಾಗಿ ಹೇಳಿ ಕಾರಿನಿಂದ ಇಳಿದರು. ಈ ಕಡೆ ಅಜ್ಮೇರಾ ಹಣದ ಆಸೆಯಲ್ಲಿ ಕಾರಿನಲ್ಲಿ ಕಾಯುತ್ತಿದ್ದರೆ ಅತ್ತ ₹11.50 ಕೋಟಿ ಹಣದ ಜೊತೆ ವಿವೇಕ್ ಕುಮಾರ್ ಪರಾರಿಯಾಗಿದ್ದರು.
ಆದರೂ ಕೂಡ ಕಂಗೆಡದ ಹಿತೇಶ್ ಕಾಂತಿಲಾಲ್ ಅಜ್ಮೇರಾ, ಕಾದು ಕಾದು ಕೊನೆಗೆ ತಮಗೆ ತೋರಿಸಲಾಗಿದ್ದ ಗೋದಾಮಿಗೆ ಹೋದರು. ಆದರೆ ಅಲ್ಲಿ ಗೋದಾಮಿನ ಮಾಲೀಕರು ಸಿಗಲಿಲ್ಲ. ವಿವೇಕ್ ಕುಮಾರ್ ಮತ್ತು ಅವರ ಸಹಾಯಕರು ಇರಲಿಲ್ಲ. ₹300 ಕೋಟಿ ಹಣ ಕೂಡ ಇರಲಿಲ್ಲ.
ಆಗ ತಾನು ವಂಚನೆಗೊಳಗಾದೆ ಎನ್ನುವುದನ್ನು ಅರಿತ ಅಜ್ಮೇರಾ ಸದ್ಯ ದೂರು ದಾಖಲಿಸಿದ್ದಾರೆ. ಆಕಾಂಕ್ಷಾ ಮತ್ತು ಅವರ ಪತಿ ವಿವೇಕ್ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದು ಬ್ಯಾಂಕ್ ವ್ಯವಹಾರಗಳನ್ನು, ದಾಖಲೆಗಳನ್ನು ಹಾಗೂ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.


Click it and Unblock the Notifications











