ಹಾಸ್ಯ ಚತುರನ ಮೊಗದಲ್ಲಿ ಕೊನೆಗೂ ಮೂಡಿದ ನಗು ; ಜೈಲಿಂದ ಹೊರ ಬಂದ ರಾಜ್‌ಪಾಲ್ ಯಾದವ್
ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಬದುಕಿನ ಈ ರಂಗಭೂಮಿಯಲ್ಲಿ ಕಾಲವೇ ಪರಮೋಚ್ಛ ನ್ಯಾಯಾಧೀಶ.
ಸಮಯ ಅನ್ನೋದು ಯಾರಿಗೂ ಕಾಯಲ್ಲ. ಯಾರನ್ನೂ ಒಂದೇ ಸ್ಥಾನದಲ್ಲಿ ಶಾಶ್ವತವಾಗಿ ಕೂರಿಸುವುದು ಇಲ್ಲ. ಇದಕ್ಕೆ ರಾಜ್‌ಪಾಲ್ ಯಾದವ್ ಸದ್ಯದ ಅತ್ಯುತ್ತಮ ಉದಾಹರಣೆ.

ಹೌದು, ರಾಜ್‌ಪಾಲ್ ಯಾದವ್..ಬಾಲಿವುಡ್‌ನ ಒನ್ ಆಫ್ ದಿ ಬೆಸ್ಟ್ ಕಾಮೆಡಿಯನ್. '' ಜಂಗಲ್''.. ''ಹಂಗಾಮಾ''.. ''ಫಿರ್ ಹೇರಾ ಪೇರಿ''.. ''ಚುಪ್ ಚುಪ್ ಕೇ''.. ''ಭೂಲ್ ಭೂಲಯ್ಯ''.. ಹೀಗೆ ಒಂದಾ.. ಎರಡಾ.. ಹಲವಾರು ಚಿತ್ರ.. ತರಹೇವಾರಿ ಪಾತ್ರಗಳ ಮೂಲಕ ಹತ್ ಹತ್ರ 30 ವರ್ಷಗಳಿಂದ ಮನೆ ಮಾತಾದವರು ರಾಜ್‌ಪಾಲ್ ಯಾದವ್.
ಇಂಥಾ ರಾಜ್‌ಪಾಲ್ ಯಾದವ್.. ಅವರ ಬದುಕಿನಲ್ಲಿ 15 ದಿನಗಳ ಹಿಂದೆ ಅಲ್ಲೋಲ.. ಕಲ್ಲೋಲವಾಗಿತ್ತು. 9 ಕೋಟಿ ಹಣ ಮರಳಿ ನೀಡದ ಹಿನ್ನೆಲೆ ರಾಜ್‌ಪಾಲ್ ಯಾದವ್ ಅವರನ್ನು ಹೈಕೋರ್ಟ್ ಕಂಬಿ ಹಿಂದೆ ಕಳಿಸಿತ್ತು. ಈ ಹಿನ್ನೆಲೆ ಆಘಾತಕ್ಕೀಡಾಗಿದ್ದ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಅಸಹಾಯಕರಾಗಿ ತಿಹಾರ್ ಜೈಲು ಸೇರಿದ್ದರು. ಜೈಲು ಸೇರುವ ಮುನ್ನ ಕಣ್ಣೀರನ್ನು ಹಾಕಿದ್ದರು.
ಆದರೆ, ಈಗ ಇದೇ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಸದ್ಯ ನಿರಾಳರಾಗಿದ್ದಾರೆ. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೊನೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಕುಟುಂಬದಲ್ಲಿನ
ಕುಟುಂಬದ ಸಂಬಂಧಿಕರ ಮದುವೆ ಇದೆ ಎನ್ನುವ ಕಾರಣವನ್ನು ನೀಡಿ ರಾಜ್‌ಪಾಲ್ ಯಾದವ್ ಮೊನ್ನೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆದಿತ್ತು. ಫೆಬ್ರವರಿ 16ಕ್ಕೆ ಅಂದರೆ ಇಂದು ವಿಚಾರಣೆಯನ್ನು ಮುಂದೂಡಲಾಗಿತ್ತು.

ಇಂದು (ಫೆಬ್ರವರಿ 16 ) ಅರ್ಜಿಉ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮಧ್ಯಾಹ್ನ 3 ಗಂಟೆಯೊಳಗೆ 1.5 ಕೋಟಿ ಹಣ ಪಾವತಿ ಮಾಡುವಂತೆ ಸೂಚಿಸಿತ್ತು. ಕೊನೆಗೆ ಅನೇಕ ಅಡೆತಡೆಗಳ ನಡುವೆಯೂ ರಾಜಪಾಲ್ ಯಾದವ್ ಕೊನೆಗೂ ಗೆದ್ದರು. ನಿಗದಿತ ಸಮಯದೊಳಗೆ ₹1.5 ಕೋಟಿ ಹಣವನ್ನು ಪಾವತಿಯನ್ನು ಮಾಡುವಲ್ಲಿ ಯಶಸ್ವಿಯಾದರು.
ಈ ಹಿನ್ನೆಲೆ ದೆಹಲಿ ಹೈಕೋರ್ಟ್ ಸದ್ಯ ರಾಜ್‌ಪಾಲ್ ಯಾದವ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, 1.5 ಕೋಟಿ ಪಾವತಿ ಮಾಡುವದರ ಜೊತೆ ರಾಜ್‌ಪಾಲ್ ಯಾದವ್ 1 ಲಕ್ಷ ರೂ. ವ್ಯೆಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿಯನ್ನು ಕೂಡ ಒದಗಿಸಿದ್ಧಾರೆ.
ಅಂದ್ಹಾಗೇ ರಾಜ್‌ಪಾಲ್ ಯಾದವ್ ಅವರಿಗೆ ಸದ್ಯ ಮಾರ್ಚ್ 18ರವರೆಗೆ ಮಾತ್ರ ಜಾಮೀನು ನೀಡಲಾಗಿದೆ. ಅಂದು ಈ ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದೆ. ಅಷ್ಟರಲ್ಲಿ ರಾಜ್‌ಪಾಲ್ ಯಾದವ್ ಬಾಕಿ ಉಳಿಸಿಕೊಂಡಿರುವ 9 ಕೋಟಿ ಹಣವನ್ನು ಎಂ.ಎಸ್ ಮುರಳಿ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ನೀಡುವಲ್ಲಿ ವಿಫಲರಾದರೆ ಮತ್ತೆ ರಾಜ್‌ಪಾಲ್ ಯಾದವ್ ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಈಗಾಗಲೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದಂತೆ ಬಾಲಿವುಡ್‌ನ ಹಲವರು ರಾಜ್‌ಪಾಲ್ ಯಾದವ್ ಅವರಿಗೆ ಸಹಾಯದ ಹಸ್ತವನ್ನು ಚಾಚಿದ್ದಾರೆ. ಹೀಗಾಗಿ ಮಾರ್ಚ್ 18ರ ಒಳಗೆ ರಾಜ್‌ಪಾಲ್ ಯಾದವ್ ಈ ಸಾಲದ ಸುಳಿಯಿಂದ ಹೊರ ಬರುವ ವಿಶ್ವಾಸ ಸದ್ಯ ಇವರ ಅಭಿಮಾನಿಗಳಿಗೆ ಮತ್ತು ಬಾಲಿವುಡ್‌ನವರಿಗಿದೆ.
ಈ ಕುರಿತು ''ಹಿಂದೂಸ್ತಾನ್ ಟೈಮ್ಸ್''ಗೆ ಪ್ರತಿಕ್ರಿಯೆ ನೀಡಿರುವ ರಾಜ್‌ಪಾಲ್ ಯಾದವ್ ಅವರ ಮ್ಯಾನೇಜರ್ ಗೋಲ್ಡಿ, ರಾಜ್‌ಪಾಲ್ ಯಾದವ್ ಅವರಿಗೆ ಜಾಮೀನು ಸಿಕ್ಕಿರುವುದನ್ನು ದೃಢಪಡಿಸಿದ್ದಾರೆ. ತಮ್ಮ ಖುಷಿಯನ್ನು ಕೂಡ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಮಾಡಿ ಎಲ್ಲ ವಿಚಾರಗಳನ್ನು ವಿವರವಾಗಿ ಹೇಳುವುದಾಗಿ ಹೇಳಿದ್ದಾರೆ.


Click it and Unblock the Notifications











