ಪೃಥ್ವಿ ಶಾಗೆ ಮನಸೋತ ಆಕೃತಿ ಅಗರ್ವಾಲ್ ಯಾರು ? ಇಬ್ಬರ ಪ್ರೇಮಕಥೆ ಶುರುವಾಗಿದ್ಹೇಗೆ..?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್‌ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ ಮನ ಸೋತಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಲ್ಲಾ''.. ''ಮ್ಯಾಕ್ಸಿಮಮ್''.. ''ಬಾಡಿಗಾರ್ಡ್''.. ಚಿತ್ರಗಳ ಚೆಲುವೆ ಹೇಜಲ್ ಕೀಚ್ ಅವರ ಜೊತೆ ಯುವರಾಜ್ ಸಿಂಗ್ ಮದುವೆಯಾಗಿದ್ದಾರೆ. ''ದಿಲ್ ದಿಯಾ ಹೈ''.. ''ದಿ ಟ್ರೈನ್''.. ''ಜಿಲ್ಲಾ ಗಾಜಿಯಾಬಾದ್''.. ನಾಯಕಿ ಗೀತಾ ಬಸ್ರಾ ಜೊತೆ ಹರ್ಭಜನ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ''ಚಕ್ ದೇ ಇಂಡಿಯಾ'' ಚೆಲುವೆ ಸಾಗರಿಕಾಗೆ ಜಹೀರ್ ಖಾನ್ ಶರಣಾಗಿದ್ದಾರೆ.

ಇವರಷ್ಟೇ ಅಲ್ಲ ಕೆ.ಎಲ್.ರಾಹುಲ್.. ವಿರಾಟ್ ಕೊಹ್ಲಿ.. ಒಬ್ಬರಾ.. ಇಬ್ಬರಾ.. ಹೀಗೆ ಹಲವರು ಚಿತ್ರರಂಗದ ನಾಯಕಿಯರ ಜೊತೆ ಹೊಸ ಬದುಕು ಶುರು ಮಾಡಿದ್ಧಾರೆ. ಈ ಸಾಲಿಗೆ ಈಗ ಪೃಥ್ವಿ ಶಾ ಕೂಡ ಸೇರಿಕೊಂಡಿದ್ಧಾರೆ. ಆಕೃತಿ ಅಗರ್ವಾಲ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸದ್ಯ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರ ಎಂಗೇಜ್ಮೆಂಟ್‌ನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೆಲೆಬ್ರೆಟಿಗಳಿಂದ ಹಿಡಿದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಇದೇ ಸಮಯದಲ್ಲಿ ಆಕೃತಿ ಅಗರ್ವಾಲ್ ಯಾರು ..? ಎಂಬ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ.
ಯಾರು ಈ ಆಕೃತಿ ಅಗರ್ವಾಲ್?
ಆಕೃತಿ ಅಗರ್ವಾಲ್ ಮೂಲತಃ ಲಕ್ನೋದ ಲಡ್ಕೀ. ಕನಸೆಂಬ ಕುದುರೆಯನ್ನೇರಿ ಮಾಯಾನಗರಿ ಮುಂಬೈಗೆ ಬಂದ ಆಕೃತಿಯ ಹಣೆಬರಹ ಬದಲಾಗಿದ್ದು ಕೊರೊನಾ ಸಮಯದಲ್ಲಿ. ಕೊರೊನಾದಿಂದ ಇಡೀ ದೇಶ ಹೈರಾಣಾದಾಗ, ತಲ್ಲಣದ ವಾತಾವರಣ ನಿರ್ಮಾಣವಾದಾಗ ಆಕೃತಿ ಮೆಲ್ಲನೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಶುರು ಮಾಡಿದ್ದರು. ಲಿಂಪ್ ಸಿಂಕ್ ಮಾಡಿ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳತೊಡಗಿದರು.
ಇಷ್ಟೇ ಅಲ್ಲ ಲೈಫ್ ಸ್ಟೈಲ್ ಮತ್ತು ಫ್ಯಾಶನ್‌ಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ಕೂಡ ಆಕೃತಿ ಶೇರ್ ಮಾಡಲು ಶುರು ಮಾಡಿದರು. ನೋಡ.. ನೋಡುತ್ತಾ.. ಇವರ ವಿಡಿಯೋಗಳು ವೈರಲ್ ಆದವು. ಹಿಂಬಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯ್ತು. ಸದ್ಯ ಆಕೃತಿ ಅಗರ್ವಾಲ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 32 ಲಕ್ಷಕ್ಕೂ ಅಧಿಕ ಜನ ಫಾಲೋ ಮಾಡ್ತಿದ್ಧಾರೆ. ಇಂದು ಪ್ರಭಾವಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಹೊರ ಹೊಮ್ಮಿದ್ಧಾರೆ.

ಇನ್ನು ಆಕೃತಿ ಸೋಶಿಯಲ್ ಮೀಡಿಯಾ ಸ್ಟಾರ್ ಮಾತ್ರವಲ್ಲ. ಇವರ ಸಾಧನೆ ಕೇವಲ ಮೊಬೈಲ್ ಸ್ಕ್ರೀನ್‌ಗೆ ಸೀಮಿತವಾಗಿಲ್ಲ. ಕಳೆದ ವರ್ಷ ಆಕೃತಿ ಬಣ್ಣದ ಪ್ರಪಂಚಕ್ಕೆ ಕೂಡ ಬಂದರು. ತೆಲುಗಿನ ಸೈಕಲಾಜಿಕಲ್ ಥ್ರಿಲ್ಲರ್ ''ತ್ರಿಮುಖ'' ಚಿತ್ರಕ್ಕೆ ಬಣ್ಣ ಹಚ್ಚಿದರು. ಬೆಳ್ಳಿತೆರೆಗೆ ಪಾದಾರ್ಪಣೆಯನ್ನು ಮಾಡಿದರು. ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು ವಿಶೇಷ.
ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯನ್ನು ಕೂಡ ಪ್ರವೇಶ ಮಾಡಿರುವ ಆಕೃತಿ ಅಗರ್ವಾಲ್, ''ಚೋಟಿ ಸರ್ದಾನಿ'' ಎಂಬ ಶೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇಂಥಾ ಆಕೃತಿ ಮತ್ತು ಪೃಥ್ವಿ ಶಾ ನಡುವೆ ಪ್ರೇಮದ ಸೇತುವೆಯನ್ನು ಇವರ ಸ್ನೇಹಿತರು ಕಟ್ಟಿದರು. ಸ್ನೇಹಿತರ ಮೂಲಕ ಪರಿಚಯವಾದ ಇಬ್ಬರು ಆ ನಂತರ ಆತ್ಮೀಯರಾದರು.
ಆ ನಂತರ ಪೃಥ್ವಿ ಶಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಆಕೃತಿ ಕಾಮೆಂಟ್ ಮಾಡಲು ಶುರು ಮಾಡಿದರು. ಪೃಥ್ವಿ ಕೂಡ ಪ್ರತಿಕ್ರಿಯಿಸುತ್ತಿದ್ದರು. ಆಗಲೇ ಇವರ ಸಂಬಂಧದ ಕುರಿತು ಹಲವರಿಗೆ ಅನುಮಾನ ಇತ್ತು.
ಇನ್ನೂ 2023ರ ''ವ್ಯಾಲೆಂಟೈನ್ಸ್ ಡೇ''ಯಂದು ಆಕೃತಿ ಜೊತೆಗಿನ ಫೋಟೊ ಹಂಚಿಕೊಂಡಿದ್ದ ಪೃಥ್ವಿ ಶಾ "ನನ್ನ ಹೆಂಡತಿ" ಎಂದು ಬರೆದುಕೊಂಡಿದ್ದರು. ಆ ನಂತರ ಕೂಡಲೇ ಡಿಲೀಟ್ ಕೂಡ ಮಾಡಿದ್ದರು. ಆ ಕಾಲಕ್ಕೆ ಈ ವಿಚಾರ ತುಂಬಾ ಸುದ್ದಿಯಾಗಿತ್ತು. ಈಗ ಇಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೇ ವರ್ಷ ಸಪ್ತಪದಿಯನ್ನು ಕೂಡ ತುಳಿಯಲಿದ್ದಾರೆ.


Click it and Unblock the Notifications











