ಆರ್‌ಎಸ್‌ಎಸ್ ಶತಮಾನೋತ್ಸವಕ್ಕೆ ಬಂದ ಸಲ್ಮಾನ್ ಖಾನ್ ; ಅಚ್ಚರಿಗೊಂಡ ಜನ-'ರಾಷ್ಟ್ರ ಭಕ್ತಿ' ಪಾಠ ಕೇಳಿದ ಭಾಯ್‌ಜಾನ್
ಸೆಪ್ಟೆಂಬರ್ 25-1925.. ಹಿಂದೂತ್ವದ ಸಾರದಿಂದ ಪ್ರಭಾವಕ್ಕೊಳಗಾದ ಕೇಶವ್ ಬಲಿರಾಮ ಹೆಡೇವಾರ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸ್ಥಾಪನೆ ಮಾಡಿದರು. ಹಿಂದೂ ಸಂಸ್ಕ್ರತಿ.. ಹಿಂದೂ ಒಗ್ಗಟ್ಟು.. ಮತ್ತು ರಾಷ್ಟ್ರ ಸ್ವಾವಲಂಬನೆಯ ಉದ್ದೇಶದೊಂದಿಗೆ ಶುರುವಾದ ಆರ್ ಎಸ್ ಎಸ್ ಒಂದು ದೇಶದ ಬಹುತೇಕ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿದೆ. ತನ್ನ ಶಾಖೆಗಳನ್ನು ಹೊಂದಿದೆ.
ಒಂದು ಅಂದಾಜಿನ ಪ್ರಕಾರ ದೇಶದಲ್ಲಿಯೇ 83,000ಕ್ಕೂ ಅಧಿಕ ಶಾಖೆಗಳಿವೆ. ಈ ಶಾಖೆಗಳಲ್ಲಿ ಹಿಂದೂತ್ವ ಮತ್ತು ಹಿಂದೂ ರಾಷ್ಟ್ರೀಯತೆಯನ್ನು ಕೇಂದ್ರಿಕರಿಸಿ ನಿರಂತರ ಚಟುವಟಿಕೆಗಳು ನಡೆಯುತ್ತವೆ. ಸರಸಂಘ ಚಾಲಕರಾಗಿ ಮೋಹನ್ ಭಾಗವತ್ ಅವರು ಇದ್ದರೆ, ದತ್ತಾತ್ರೇಯ ಹರಸಬಾಳೆ ಸರಕಾರ್ಯವಾಹ ಆಗಿದ್ದಾರೆ.

ಇನ್ನೂ ಭಾರತ ಹಿಂದೂ ರಾಷ್ಟ್ರ ಎನ್ನುವ ವಾದವನ್ನು ಆರ್ ಎಸ್ ಎಸ್ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬೇರೆ ಕಡೆಯಿಂದ ವಲಸೆ ಬಂದು ಸ್ಥಳೀಯರನ್ನು ಮತಾಂತರ ಮಾಡುವ ಮೂಲಕ ತಮ್ಮ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳುತ್ತಾ ಬಂದಿದೆ.ಆರ್ ಎಸ್ ಎಸ್‌ನ ಎರಡನೇ ಸರಸಂಘಚಾಲಕರಾಗಿದ್ದ ಗೋಲ್ವಲ್ಕರ್ ಅವರು ಈ ವಿಚಾರವನ್ನು ಪ್ರತಿಪಾದಿಸಿದ್ದರು ಕೂಡ.
ಇಂಥಾ ಆರ್‌ಎಸ್‌ಎಸ್ ಸದ್ಯ 100 ವರ್ಷ ಪೂರೈಸಿದ್ದು ಈ ಹಿನ್ನೆಲೆ ಮುಂಬೈನಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೆಹರೂ ಕೇಂದ್ರದಲ್ಲಿ ''ನವೇ ಕ್ಷಿತಿಜ್'' ಉಪನ್ಯಾಸ ಮಾಲೆ ನಡೆಯುತ್ತಿದೆ. ''ನವೇ ಕ್ಷಿತಿಜ್'' ಹೆಸರೇ ಹೇಳುವಂತೆ ಹೊಸ ದಿಗಂತದತ್ತ ಹೆಜ್ಜೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ 100 ವರ್ಷಗಳ ಪ್ರಯಾಣವನ್ನು ಮೆಲುಕು ಹಾಕಲಾಗುತ್ತಿದೆ. ರಾಷ್ಟ್ರ ಮೊದಲು ಎಂಬ ಸಂದೇಶವನ್ನು ಸಾರಲಾಗುತ್ತಿದೆ.
ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿ ಮತ್ತು ನೇತೃತ್ವದಲ್ಲಿ ಎರಡು ದಿನ ಕಾಲ ಈ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ ಇಂದು (ಫೆಬ್ರವರಿ 7 ) ಬಾಲಿವುಡ್‌ನ ಭಾಯ್‌ಜಾನ್ ಸಲ್ಮಾನ್ ಖಾನ್ ಆಗಮಿಸಿದ್ದಾರೆ. ಈ ಮೂಲಕ ಅಲ್ಲಿದ್ದ ಹಲವರನ್ನು ಅಚ್ಚರಿಗೆ ದೂಡಿದ್ದಾರೆ.
ಗಾಢ ನೀಲಿ ಬಣ್ಣದ ಶರ್ಟ್,ಕನ್ನಡಕ ಹಾಕಿಕೊಂಡು ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮಕ್ಕೆ ಬಂದ ಸಲ್ಮಾನ್ ಖಾನ್, ನಿರ್ದೇಶಕ ಮತ್ತು ನಿರ್ಮಾಪಕ ಸುಭಾಶ್ ಘಾಯ್.. ಸಾಹಿತಿ ಪ್ರಸೂನ್ ಜೋಶಿ.. ಅವರ ಜೊತೆ ಮುಂಭಾಗದ ಸಾಲಿನಲ್ಲಿ ಕುಳಿತು ಮೋಹನ್ ಭಾಗತವ್ ಅವರ ಭಾಷಣವನ್ನು ಕೂಡ ಕೇಳಿದ್ದಾರೆ.

ಇನ್ನು ಇದೇ ವೇಳೆ ಸಮಾಜದ ಮೌಲ್ಯ ಮತ್ತು ಸಾಮಾಜಿಕ ಪ್ರಭಾವದ ಕುರಿತು ವಿಷಯ ಪ್ರಸ್ತಾಪಿಸಿ ಮಾತನಾಡಿದ ಮೋಹನ್ ಭಾಗವತ್, ಸಲ್ಮಾನ್ ಖಾನ್ ಅವರನ್ನು ಯುವ ಜನ ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಅದರಲ್ಲಿಯೂ ಕಾಲೇಜ್ ವಿದ್ಯಾರ್ಥಿಗಳು ಸಲ್ಮಾನ್ ಖಾನ್ ಅವರ ಫ್ಯಾಷನ್‌ನ ನಕಲು ಮಾಡುತ್ತಾರೆ ಎಂದು ಹೇಳಿದ ಮೋಹನ್ ಭಾಗವತ್ ಯಾಕೆ ನೀವು ಈ ರೀತಿ ಫ್ಯಾಷನ್ ಮಾಡುತ್ತಿದ್ದೀರಾ ಎಂದು ಕೇಳಿದರೆ ಅವರೆಲ್ಲ ನಮಗೆ ಕಾರಣ ಗೊತ್ತಿಲ್ಲ, ಸಲ್ಮಾನ್ ಖಾನ್ ಮಾಡುತ್ತಿದ್ದಾರೆ ಹೀಗಾಗಿ ನಾವು ಮಾಡುತ್ತೇವೆ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಒಳ್ಳೆಯ ಮೌಲ್ಯಗಳು ಕೂಡ ಒಂದು ಫ್ಯಾಷನ್ ಆಗಬೇಕು ಎನ್ನುವುದೇ ಈ ಮಾತಿನ ಅರ್ಥ ಎಂದಿದ್ದಾರೆ.
ಹಿರಿಯ ನಟಿ ಹೇಮಾಮಾಲಿನಿ, ನಟಿ ಅಶ್ವಿನಿ ಭಾವೆ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 900 ಅತಿಥಿಗಳನ್ನು ಆಮಂತ್ರಿಸಲಾಗಿದ್ದು, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಅವರಿಗೆ ಕೂಡ ಆಮಂತ್ರಣವನ್ನು ನೀಡಲಾಗಿದೆ. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರು ಖಾನ್‌ಗಳು ಬಂದ ಮಾಹಿತಿ ಇಲ್ಲ. ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಸೇರಿ ಬಾಲಿವುಡ್‌ನ ಇನ್ನೂ ಹಲವರನ್ನು ಆಹ್ವಾನಿಸಲಾಗಿದ್ದು ನಾಳೆ (ಫೆಬ್ರವರಿ 8 ) ಹಲವರು ಬರುವ ನಿರೀಕ್ಷೆ ಇದೆ. ಸದ್ಯ ಸಲ್ಮಾನ್ ಖಾನ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











