ಪತ್ನಿಯ ಕಿರಿಕಿರಿ, ಅವಕಾಶಗಳ ಕೊರತೆ ; ಶಾಲೆಯ ಫಂಕ್ಷನ್‌ನಲ್ಲಿ ಡ್ಯಾನ್ಸ್ ಮಾಡಿದ ಗೋವಿಂದ-'ಹೀರೋ ನಂ ಒನ್'ನ ದುರಂತ ಕಥೆ
ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಬದುಕಿನ ಈ ರಂಗಭೂಮಿಯಲ್ಲಿ ಕಾಲವೇ ಪರಮೋಚ್ಛ ನ್ಯಾಯಾಧೀಶ.
ಸಮಯ ಅನ್ನೋದು ಯಾರಿಗೂ ಕಾಯಲ್ಲ. ಯಾರನ್ನೂ ಒಂದೇ ಸ್ಥಾನದಲ್ಲಿ ಶಾಶ್ವತವಾಗಿ ಕೂರಿಸುವುದು ಇಲ್ಲ. ಇದಕ್ಕೆ ಗೋವಿಂದ ಸದ್ಯದ ಉದಾಹರಣೆ. ಹೌದು, ಗೋವಿಂದ.. ಬಾಲಿವುಡ್‌ನ ಹೀರೋ ನಂಬರ್ ಒನ್. ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್‌ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿಯೇ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಭಾಗಿಯಾಗುತ್ತಿದ್ದವರು ಗೋವಿಂದ.

90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು. ಆದರೆ ಇದೇ ಗೋವಿಂದ ಆ ನಂತರ ತಮ್ಮ 'ನಡಾವಳಿ' ಹಾಗೂ 'ದುರಂಹಕಾರ'ಗಳಿಂದ ತಮ್ಮ 'ಕಾಲ' ಮೇಲೆ ತಾವೇ 'ಚಪ್ಪಡಿ ಕಲ್ಲು' ಎಳೆದುಕೊಂಡರು. 'ಸೂಪರ್ ಸ್ಟಾರ್' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ 'ಬಾಲಿವುಡ್' ನಿಂದ 'ಕಣ್ಮರೆ' ಕೂಡ ಆದರು.
ಇಂಥಾ ಗೋವಿಂದಗೆ ಸದ್ಯಕ್ಕೆ ಮಾಡಲು ಕೆಲಸ ಇಲ್ಲ. ಕರೆದು ಇವರಿಗೆ ಅವಕಾಶವನ್ನು ಕೊಡುವರು ಕೂಡ ಬಾಲಿವುಡ್‌ನಲ್ಲಿ ಯಾರು ಇಲ್ಲ. ಯಾಕೆಂದರೆ ಕೆಳಗೆ ಬಿದ್ದರೂ ಕೂಡ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಇವರದ್ದು. ಹೀಗಾಗಿಯೇ ಹಿಂದಿ ಚಿತ್ರರಂಗದಲ್ಲಿ ಅನೇಕರು ಇವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ತಾವಾಗಿಯೇ ಹೋಗಿ ಅವಕಾಶ ಕೇಳಿದರೆ ತಮ್ಮ ಮರ್ಯಾದೆ ಕಡಿಮೆಯಾಗುತ್ತೆ ಎಂದುಕೊಂಡು ಗೋವಿಂದ ಕೂಡ ಸದ್ಯ ಮನೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.
ಆದರೆ ನೆಮ್ಮದಿಯಿಂದ ಇರಲು ಇವರಿಗೆ ಇವರ ಹೆಂಡತಿ ಸುನಿತಾ ಬಿಡ್ತಿಲ್ಲ. ಕಳೆದೊಂದು ವರ್ಷದಿಂದ ಕುಂತರೂ.. ನಿಂತರೂ.. ಗೋವಿಂದ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ. 30ರ ಹರೆಯದ ಚೆಲುವೆ ಜೊತೆ ನನ್ನ ಪತಿಗೆ ಅನೈತಿಕ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ. ಪತ್ನಿಯ ಈ ಆರೋಪಕ್ಕೆ ನನ್ನ ಪತ್ನಿ ಬೇರೆಯವರ ಕೈಗೊಂಬೆಯಾಗಿದ್ದಾರೆ ಎಂದು ಗೋವಿಂದ ಹೇಳುತ್ತಿದ್ದಾರೆ. ಹೀಗಿರುವಾಗ ಗೋವಿಂದ ಅವರ ವಿಡಿಯೋ ಒಂದು ವೈರಲ್ ಆಗಿದ್ದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಗೋವಿಂದ ಅವರ ಪರಿಸ್ಥಿತಿಯನ್ನು ಕಂಡು ಮರುಗುತ್ತಿದ್ದಾರೆ.
ಹೌದು, ಅಂದು ಬಾಲಿವುಡ್‌ನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದ್ದ ಗೋವಿಂದ ಇಂದು ಉತ್ತರ ಪ್ರದೇಶದ ಪ್ರತಾಪಗಢದ ಸಂಗಮ್ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ವೇದಿಕೆಯ ಮೇಲೆ ತಮ್ಮ ಹಳೆಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಹಲವರಿಗೆ ನಂಬಲಾಗದ ವಿಚಾರವೂ ಆಗಿದೆ.

ಯಾಕೆಂದರೆ ಆಗಲೇ ಹೇಳಿದಂತೆ ಒಂದು ಕಾಲದಲ್ಲಿ ಅಮಿತಾಬ್ ಬಚ್ಚನ್‌ಗೆ ಸಮನಾಗಿ ನಿಂತು 'ಬಡೆ ಮಿಯಾನ್ ಛೋಟೆ ಮಿಯಾನ್' ಎಂದವರು ಗೋವಿಂದ. ಇವರ ಮನೆ ಮುಂದೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ ಇಂದು ಕಾಲ ಇವರನ್ನು ಬೆಳ್ಳಿಪರದೆಯಿಂದ ಪ್ರತಾಪಗಢದ ಶಾಲೆಯವರೆಗೆ ಗೋವಿಂದ ಅವರನ್ನು ಕರೆತಂದಿದೆ. ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತಪ್ಪಲ್ಲ, ಆದರೆ ಗೋವಿಂದರಂತಹ ದೈತ್ಯ ಪ್ರತಿಭೆಗೆ ಇದು ತಕ್ಕ ವೇದಿಕೆಯಲ್ಲ .
ಹೀಗಾಗಿ ಹಲವರು ತಮ್ಮ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕುತ್ತಿದ್ದಾರೆ. ಛೇ ಎಂತಹ ಪತನ ಇದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಕಾಲಾಯ ತಸ್ಮೈ ನಮಃ' ಎಂಬ ಮಾತಿಗೆ ಗೋವಿಂದ ಅವರ ಬದುಕು ಕೈಗನ್ನಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











