ಇನ್ನೆರಡು ಸಿನಿಮಾ ಘೋಷಿಸಿದ ಕಾಶ್ಮೀರ್ ಫೈಲ್ಸ್ ನಿರ್ದೇಶಕ, ಇವೂ ಸಹ ಮುಚ್ಚಿಟ್ಟ ಇತಿಹಾಸವಂತೆ!
'ಮುಚ್ಚಿಹಾಕಲ್ಪಟ್ಟ ಸತ್ಯ' ಎಂಬ ಟ್ಯಾಗ್‌ಲೈನ್‌ನೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಮಟ್ಟದ ದುಡ್ಡು ಕೊಳ್ಳೆ ಹೊಡೆದಿದ್ದ ವಿವೇಕ್ ಅಗ್ನಿಹೋತ್ರಿ ಮತ್ತು ತಂಡ ಈಗ ಮತ್ತೆ ಅದೇ ಸೂತ್ರದೊಂದಿಗೆ ಹೊಸ ಸಿನಿಮಾಗಳನ್ನು ಘೋಷಿಸಿದೆ.
ಕಾಶ್ಮೀರದಲ್ಲಿ ಹಿಂದುಗಳ ಮೇಲೆ ಆದ ಹತ್ಯಾಕಾಂಡವನ್ನು ಉದ್ದೇಶಪೂರ್ವಕವಾಗಿ ಇತಿಹಾಸದಿಂದ ಮುಚ್ಚಿಹಾಕಲಾಗಿದೆ. ವರದಿ ಮಾಡಲಾಗಿಲ್ಲ ಎಂದು ಆರೋಪಿಸಿದ್ದ ಚಿತ್ರತಂಡ ಅದರ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಆದ ಹಿಂಸೆಯ ಕುರಿತು ಸಿನಿಮಾ ಮಾಡಿತ್ತು. ಈ ಸಿನಿಮಾಕ್ಕೆ ಬಿಜೆಪಿ, ಹಿಂದು ಸಂಘಟನೆ ಸೇರಿದಂತೆ ಸ್ವತಃ ಪ್ರಧಾನಿ ಮೋದಿ ಬೆಂಬಲ ದೊರೆತ ಕಾರಣ ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾವನ್ನೂ ಮೀರಿಸಿ ಕಲೆಕ್ಷನ್ ಮಾಡಿತು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕರಾದ ಪಲ್ಲವಿ ಜೋಶಿ, ಅಭಿಷೇಕ್ ಅಗರ್ವಾಲ್, ತೇಜ್ ನಾರಾಯಣ್ ಅಗರ್ವಾಲ್ ಅವರುಗಳು ಒಟ್ಟಾಗಿ ಮತ್ತೆರಡು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಒಂದನ್ನು ಸಹ ಬಿಡುಗಡೆ ಮಾಡಿದ್ದಾರೆ.

''ದಿ ಕಾಶ್ಮೀರ್ ಫೈಲ್ಸ್' ಮೂಲಕ ಐತಿಹಾಸಿಕ ಗ್ಲೋಬಲ್ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಳಿಕ, ಅದ್ಭುತ ಕತೆಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಕನಸು ಮುಂದುವರೆದಿದ್ದು, ವಿವೇಕ್ ಅಗ್ನಿಹೋತ್ರಿ, ಪಲ್ಲವಿ ಜೋಶಿ, ಅಭಿಷೇಕ್ ಅಗರ್ವಾಲ್, ತೇಜ್ ನಾರಾಯಣ್ ಅಗರ್ವಾಲ್ ಅವರುಗಳು ಮಾನವೀಯ ಇತಿಹಾಸದ ಎರಡು ಧಾರುಣ ಸತ್ಯ ಘಟನೆಗಳೊಂದಿಗೆ ಮರಳಿ ಬರುತ್ತಿದ್ದು, ಬೆನ್ನ ಮೂಳೆಯಲ್ಲಿ ಚಳಿ ಎಬ್ಬಿಸುವ ಸತ್ಯ ಘಟನೆಗಳಿಗೆ ಸಾಕ್ಷಿಯಾಗಲು ತಯಾರಾಗಿ, ಎಲ್ಲೂ ವರದಿ ಆಗದ ಘಟನೆಗಳನ್ನು ನಾವು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಈ ತಂಡ ವಿಡಿಯೋದಲ್ಲಿ ಹೇಳಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರೊಪಗಾಂಡಾ ಸಿನಿಮಾ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಹಿಂದು ಧರ್ಮೀಯರಿಗೆ ಇತರ ಧರ್ಮದವರ ಮೇಲೆ ದ್ವೇಷ ಬಿತ್ತಲು ಈ ಸಿನಿಮಾ ಮಾಡಲಾಗಿದೆ ಎಂಬ ಆಪಾದನೆಯೂ ಕೇಳಿ ಬಂತು. ಈ ಸಿನಿಮಾ ಬಿಡುಗಡೆ ಆದ ಬಳಿಕ ನಡೆದ ಕೆಲವು ಘಟನೆಗಳು ಇದಕ್ಕೆ ಸಾಕ್ಷಿಯಾಗಿದ್ದವು. ಇದೀಗ ಇದೇ ತಂಡ ಮತ್ತೆರಡು ಸಿನಿಮಾಗಳೊಟ್ಟಿಗೆ ಬರುತ್ತಿದ್ದು, ಇವೂ ಸಹ ಪ್ರೊಪಗಾಂಡ ಆಗಿರುತ್ತದೆಯೇ ಎಂಬುದನ್ನು ನೋಡಬೇಕಿದೆ.
ಈ ನಡುವೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದಲೇ ಸ್ಪೂರ್ತಿ ಪಡೆದು 'ದಿ ಕೇರಳ ಸ್ಟೋರಿ' ಹೆಸರಿನ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮಾನವ ಕಳ್ಳಸಾಗಣೆ ಕುರಿತ ಕತೆಯನ್ನು ಒಳಗೊಂಡಿರಲಿದೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಹೇಳಿದ್ದಾರೆ. ಕಳೆದ 12 ವರ್ಷಗಳಲ್ಲಿ ಸಾವಿರಾರು ಮುಸ್ಲಿಂ ಹೆಣ್ಣು ಮಕ್ಕಳನ್ನು ಉಗ್ರ ಸಂಘಟನೆ ಐಸಿಸ್‌ಗೆ ಬಲವಂತವಾಗಿ ಕಳಿಸಲಾಗಿದೆ. ಕೇರಳದ ಈ ಭಯನಾಕ ಕತೆಯನ್ನು ಸಿನಿಮಾ ಮಾಡುತ್ತಿರುವುದಾಗಿ 'ದಿ ಕೇರಳ ಸ್ಟೋರಿ' ಟೀಸರ್‌ನಲ್ಲಿ ಚಿತ್ರತಂಡ ಹೇಳಿದೆ. ''ದಿ ಪಾಪುಲರ್ ಫ್ರಂಟ್ ಸಂಘಟನೆಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಂಚು ರೂಪಿಸಿದೆ. ನಿಷೇಧಿತ ಸಂಘಟನೆ ಎನ್‌ಡಿಎಫ್ ಸಹ ಇದೇ ಮಾದರಿಯ ಆಲೋಚನೆಯನ್ನು ಹೊಂದಿತ್ತು. ಮುಂದಿನ 20 ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವುದು ಪಾಪ್ಯುಲರ್ ಫ್ರಂಟ್‌ನ ಗುರಿ'' ಎಂದು ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಹೇಳಿರುವ ವಿಡಿಯೋವನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ.
ಒಟ್ಟಿನಲ್ಲಿ ಶಾಂತಿ, ಪ್ರೀತಿ, ಧರ್ಮ ನಿರಪೇಕ್ಷತೆ, ಜಾತ್ಯಾತೀತತೆಯನ್ನು ಬೋಧಿಸುತ್ತಿದ್ದ ಸಿನಿಮಾಗಳಲ್ಲಿ ಇತ್ತೀಚೆಗೆ ಧರ್ಮೀಯತೆ ಢಾಳಾಗಿ ಕಾಣುವಂತಾಗಿದೆ.


Click it and Unblock the Notifications











