4 ವಾರವಾದ್ರೂ ನಿಲ್ಲದ ದ ಕೇರಳ ಸ್ಟೋರಿ ಅಬ್ಬರ; 4 ವಾರಗಳ ಒಟ್ಟು ಕಲೆಕ್ಷನ್ ಎಷ್ಟು?
ಕಳೆದ ವರ್ಷ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದ ದಾಖಲೆ, ನಡೆಸಿದ್ದ ಅಬ್ಬರ ಹಾಗೂ ಹುಟ್ಟುಹಾಕಿದ್ದ ಚರ್ಚೆ ಮರೆಯಾಗುವ ಹೊತ್ತಿಗೆ ಅದೇ ವಿಭಾಗಕ್ಕೆ ಸೇರುವ ಮತ್ತೊಂದು ಚಿತ್ರ ತೆರೆಗೆ ಬಂದು ಬಾಕ್ಸ್ ಆಫೀಸ್‌ನಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಅದೇ ರೀತಿಯ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ.
ಹೌದು, ಕಳೆದ ಮೇ 5ರಂದು ಬಿಡುಗಡೆಯಾದ ಕೇರಳ ಸ್ಟೋರಿ ಹೆಚ್ಚೇನೂ ಪ್ರಚಾರವಿಲ್ಲದೇ ತೆರೆಗೆ ಬಂದರೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇಂತಹ ಮಾಹಿತಿ ಇರುವ ಚಿತ್ರಗಳು ಮತ್ತಷ್ಟು ಬರಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು.

ಸುದೀಪ್ತೊ ಸೇನ್ ನಿರ್ದೇಶನವಿರುವ ಈ ಚಿತ್ರಕ್ಕೆ ವಿಪುಲ್ ಅಮೃತಲ್ ಶಾ ಬಂಡವಾಳ ಹೂಡಿದ್ದು, ಆದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಹಾಗೂ ಸಿದ್ಧಿ ಇದ್ನಾನಿ ನಾಯಕಿಯರಾಗಿ ನಟಿಸಿದ್ದಾರೆ. ಕೇರಳದ ಯುವತಿಯರನ್ನು ಯೋಜನೆ ಹಾಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಐಸಿಸ್‌ಗೆ ಬಲವಂತವಾಗಿ ಕರೆದೊಯ್ದು ಹಿಂಸೆ ನೀಡುವ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ಇದು ನೈಜ ಘಟನೆ ಆಧಾರಿತ ಸಿನಿಮಾವಾಗಿದೆ.
ಇನ್ನು ಈ ಚಿತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪರ ವಿರೋಧಗಳನ್ನು ಪಡೆದುಕೊಂಡಿದ್ದು, ಎಷ್ಟೇ ಚರ್ಚೆಗೆ ಗ್ರಾಸವಾದರೂ ಹಾಗೂ ವಿರೋಧಗಳು ವ್ಯಕ್ತವಾದರೂ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಅಪಪ್ರಚಾರವಾದರೂ ಚಿತ್ರ ಮಾತ್ರ ಹೌಸ್‌ಫುಲ್ ಪ್ರದರ್ಶನಗಳ ಜತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ.
15 ಕೋಟಿ ವೆಚ್ಚದಲ್ಲಿ ತಯಾರಾದ ದ ಕೇರಳ ಸ್ಟೋರಿ ಚಿತ್ರ ನಾಲ್ಕು ವಾರಗಳ ಭರ್ಜರಿ ಪ್ರದರ್ಶನವನ್ನು ಪೂರೈಸಿದ್ದು, ಇಲ್ಲಿಯವರೆಗೆ ಒಟ್ಟು 231.72 ಕೋಟಿ ರೂಪಾಯಿಗಳನ್ನು ಕಲೆಹಾಕಿದೆ. ಹೀಗೆ ನಾಲ್ಕು ವಾರಗಳು ಕಳೆದರೂ ಸಹ ಕೇರಳ ಸ್ಟೋರಿ ಇಷ್ಟರ ಮಟ್ಟಿಗೆ ಭರ್ಜರಿ ಪ್ರದರ್ಶನ ಕಂಡು ಕಲೆಕ್ಷನ್ ಮಾಡುತ್ತಿರುವುದರ ಕುರಿತು ಬಾಕ್ಸ್ ಆಫೀಸ್ ಟ್ರ್ಯಾಕರ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಚಿತ್ರ ನಾಲ್ಕನೇ ವಾರ ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ತಿಳಿಸಿದ್ದಾರೆ.
ದ ಕೇರಳ ಸ್ಟೋರಿ ನಾಲ್ಕನೇ ವಾರ 18.25 ಕೋಟಿ ಗಳಿಕೆ ಮಾಡಿದ್ದು, ನಾಲ್ಕನೇ ವಾರದ ಶುಕ್ರವಾರ 2.50 ಕೋಟಿ, ಶನಿವಾರ 4.25 ಕೋಟಿ, ಭಾನುವಾರ 4.75 ಕೋಟಿ, ಸೋಮವಾರ 1.85 ಕೋಟಿ, ಮಂಗಳವಾರ 1.80 ಕೋಟಿ ಹಾಗೂ ಬುಧವಾರ 1.60 ಕೋಟಿ ಹಾಗೂ ಗುರುವಾರ 1.50 ಕೋಟಿ ರೂಪಾಯಿಗಳನ್ನು ಗಳಿಸಿದೆ. ( ನೆಟ್ ಕಲೆಕ್ಷನ್ )
ಮೊದಲ ವಾರ 81.14 ಕೋಟಿ ರೂಪಾಯಿಗಳನ್ನು ಗಳಿಸಿ, ಎರಡನೇ ವಾರ 90.58 ಕೋಟಿ ರೂಪಾಯಿಗಳನ್ನು ಗಳಿಸಿತ್ತು, ಮೂರನೇ ವಾರ 41.75 ಕೋಟಿ ರೂಪಾಯಿ ಹಾಗೂ ನಾಲ್ಕನೇ ವಾರ 18.25 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ.
ಹೀಗೆ ನಾಲ್ಕು ವಾರ ಕಳೆದರೂ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಕೇರಳ ಸ್ಟೋರಿ ಐದನೇ ವಾರವೂ ಸಹ ಭರ್ಜರಿ ಆರಂಭ ಪಡೆದುಕೊಂಡಿದ್ದು, ಅನೇಕ ನಗರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಹೀಗಾಗಿ ಐದನೇ ವಾರವೂ ಸಹ ಚಿತ್ರ ದೊಡ್ಡ ಗಳಿಕೆ ಮಾಡುವುದು ಖಚಿತವಾಗಿದೆ.


Click it and Unblock the Notifications











