'ದಿ ಕೇರಳ ಸ್ಟೋರಿ' ಆರ್ಭಟ: ಚಿತ್ರತಂಡಕ್ಕೆ ಗಿಫ್ಟ್ ಬ್ಯಾಗ್ ನೀಡಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಭಿನಂದನೆ
ಸುದಿಪ್ತೊ ಸೇನ್ ನಿರ್ದೇಶನದ ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಕೆಲವೆಡೆ ಚಿತ್ರಕ್ಕೆ ನಿಷೇಧದ ಬಿಸಿ ತಟ್ಟಿದ್ದರೆ 3 ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರತಂಡವನ್ನು ಲಕ್ನೋಗೆ ಆಹ್ವಾನಿಸಿ ಅಭಿನಂದಿಸಿದ್ದಾರೆ. ಗಿಫ್ಟ್ ಬ್ಯಾಗ್‌ಗಳನ್ನು ನೀಡಿ ಚಿತ್ರತಂಡ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಕೇರಳದಲ್ಲಿ ಅನ್ಯ ಧರ್ಮೀಯ ಯುವತಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಂತಾರ ಮಾಡಲಾಗುತ್ತಿದೆ. ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಆದರೆ ಕೆಲವರು ಇದೆಲ್ಲಾ ಸುಳ್ಳು. ಬರೀ ಕಟ್ಟು ಕಥೆ ಎಂದು ವಾದಿಸುತ್ತಿದ್ಧಾರೆ. ಇದೇ ಕಾರಣಕ್ಕೆ ಚಿತ್ರಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ. ಶುಕ್ರವಾರ ಬಿಡುಗಡೆಯಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ 5 ದಿನಕ್ಕೆ 54 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.

ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ಹಿನ್ನಡೆ ಆಗಿದೆ. ರಾಜ್ಯ ಶಾಂತಿ ಸುವ್ಯವಸ್ಥೆಯ ಕಾರಣವೊಡ್ಡಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಚಿತ್ರವನ್ನು ಬ್ಯಾನ್ ಮಾಡಿದ್ದಾರೆ. ಇನ್ನು ತಮಿಳುನಾಡು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೇಕ್ಷಕರ ಬರ್ತಿಲ್ಲ ಎಂದು ಹೇಳಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಇದೆಲ್ಲದರ ನಡುವೆಯೂ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ.
ಸುದಿಪ್ತೊ ಸೇನ್, ನಿರ್ಮಾಪಕ ವಿಫುಲ್ ಅಮೃತ್ ಲಾಲ್ ಶಾ ಹಾಗೂ ನಟಿ ಅದಾ ಶರ್ಮಾ ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿದ್ದಾರೆ. ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ನಿರ್ಮಾಪಕರು ತಮ್ಮ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು ಆದಷ್ಟು ಬೇಗ ತಮ್ಮ ಸಂಪುಟ ಸಚಿವರ ಜೊತೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ದೇಶಕ ಸುದೀಪ್ತೋ, "ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿ, ಉತ್ತರ ಪ್ರದೇಶದ ಜನ ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಲು ಬಂದಿದ್ದೇವೆ" ಎಂದು ಹೇಳಿದ್ಧಾರೆ.
ನಿರ್ಮಾಪಕರಾದ ವಿಫುಲ್ ಅಮೃತ್ ಲಾಲ್ ಶಾ ಮಾತನಾಡಿ "ಉತ್ತರ ಪ್ರದೇಶ ಸರ್ಕಾರ ಮತ್ತು ಯೋಗಿ ಜಿ ತೆರಿಗೆ ವಿನಾಯಿತಿ ಘೋಷಿಸಿ ಒಳ್ಳೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ನಮ್ಮ ನೈತಿಕತೆಯನ್ನು ಹೆಚ್ಚಿಸಿ ನಮ್ಮ ಚಿಂತನೆಯನ್ನು ಬಲಪಡಿಸಿದ್ದಾರೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರವನ್ನು ವೀಕ್ಷಿಸುತ್ತಿರುವ ಕಾರಣ ಅವರು ಜನರಿಗೆ ಬಹಳ ಒಳ್ಳೆ ಸಂದೇಶವನ್ನು ರವಾನಿಸಿದ್ದಾರೆ. ಇದಕ್ಕಾಗಿ ನಾವು ಸಿಎಂಗೆ ತುಂಬಾ ಕೃತಜ್ಞರಾಗಿರುತ್ತೇವೆ" ಎಂದಿದ್ದಾರೆ.


Click it and Unblock the Notifications











