ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದಲ್ಲಿ ಕೆಜಿಗಟ್ಟಲೆ ನಿಜವಾದ ಬಂಗಾರ ಬಳಕೆ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಅಧಿಕೃತವಾಗಿ ಘೋಷಣೆ ಆಗುವ ಮುನ್ನ ದಿನಕ್ಕೊಂದುಯ ಸುದ್ದಿ ಕೇಳಿಬರ್ತಿದೆ. ಸಿನಿಮಾ ಬಜೆಟ್, ಸ್ಟಾರ್‌ಕಾಸ್ಟ್, ಶೂಟಿಂಗ್ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ನಿರೀಕ್ಷೆಯಿದೆ.
ನಮಿತ್ ಮಲ್ಹೋತ್ರ ಜೊತೆ ಸೇರಿ ನಟ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕೂಡ ರಾಕಿಂಗ್ ಸ್ಟಾರ್ ನಟಿಸುತ್ತಾರೆ ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಸಹ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹನುಮಂತನಾಗಿ ಸನ್ನಿ ಡಿಯೋಲ್, ಕೈಕೇಯಿ ಆಗಿ ಲಾರಾ ದತ್ತಾ, ದಶರಥನಾಗಿ ಅರುಣ್ ಗೋವಿಲ್ ನಟಿಸುವ ಬಗ್ಗೆ ಗುಲ್ಲಾಗಿದೆ.

'ರಾಮಾಯಣ' ಚಿತ್ರದಲ್ಲಿ ಲಂಕಾಸುರನ ಪಾತ್ರದಲ್ಲಿ ನಟಿಸುವ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಯಶ್ ಕಾಸ್ಟ್ಯೂಮ್ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ. ರಾವಣನ ಗೆಟಪ್‌ಗಾಗಿ ಯಶ್ ನಿಜವಾದ ಚಿನ್ನ ಬಳಸಿ ಸಿದ್ಧಪಡಿಸಿದ ವೇಷಭೂಷಣದಲ್ಲಿ ಕಂಗೊಳಿಸುತ್ತಾರೆ ಎನ್ನಲಾಗ್ತಿದೆ. ರಾವಣ ಲಂಕೆಯ ರಾಜನಾಗಿದ್ದ. ಹಿಂದೂ ಪುರಾಣಗಳಲ್ಲಿ, ಲಂಕಾದ ಸುವರ್ಣ ನಗರವನ್ನು ಭಗವಾನ್ ವಿಶ್ವಕರ್ಮ ನಿರ್ಮಿಸಿದನೆಂದು ನಂಬಲಾಗಿದೆ. ಹಾಗಾಗಿ ಆ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ನೈಜ ಬಂಗಾರವನ್ನು ಬಳಸಲಾಗುತ್ತಿದೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.
ಗಗನ್ ಅಗರ್‌ವಾಲ್ ಹಾಗೂ ದಿನೇಶ್ ಶರ್ಮಾ 'ರಾಮಾಯಣ' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನುವ ನಿರೀಕ್ಷೆಯಿದೆ. ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಮಂಥರಾ ಆಗಿ ಶಿಬಾ ಚಡ್ಡಾ, ವಿಭೀಷಣ ಆಗಿ ವಿಜಯ್ ಸೇತುಪತಿ, ಕೌಸಲ್ಯ ಆಗಿ ಇಂದಿರಾ ಕೃಷ್ಣನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
ರಾವಣನ ಪಾತ್ರದಲ್ಲಿ ಯಶ್ ಆರ್ಭಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಲಂಕಾಸುರನ ಗೆಟಪ್‌ನಲ್ಲಿ ಯಶ್ AI ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಈ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿ ಮತ್ತಷ್ಟು ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಅದಕ್ಕಾಗಿ 15 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ.

ಯಶ್ ನಟನೆಯ 'KGF' ಸರಣಿ ಸಿನಿಮಾ ಕಥೆ ಬಂಗಾರದ ಸುತ್ತವೇ ಸುತ್ತಿತ್ತು. ಪ್ರಪಂಚದಲ್ಲಿರುವ ಚಿನ್ನವನ್ನೆಲ್ಲಾ ಗಳಿಸುವ ಸಾಹಸಕ್ಕೆ ಕೈಹಾಕಿದ ರಾಕಿಭಾಯ್ ಕಥೆ ಏನಾಯಿತು ಎನ್ನುವುದನ್ನು 'KGF' ಚಿತ್ರದಲ್ಲಿ ನೋಡಿದ್ದೆವು. ಆದರೆ ಚಿತ್ರದಲ್ಲಿ ನಕಲಿ ಚಿನ್ನದ ಬಿಸ್ಕೆಟ್‌ಗಳನ್ನು ಬಳಸಲಾಗಿತ್ತು. ಆದರೆ 'ರಾಮಾಯಣ' ಚಿತ್ರದಲ್ಲಿ ನಿಜವಾದ ಚಿನ್ನವನ್ನೇ ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಭಾರೀ ಕುತೂಹಲ ಮೂಡಿಸಿದೆ.
ಅಂದಾಜು 835 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಚಿತ್ರ ನಿರ್ಮಾಣವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಯಶ್ ಅರ್ಧ ಬಂಡವಾಳ ಹಾಕಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಕೂಡ ಇದೆ. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚು ಇರುವುದರಿಂದ ಸಿನಿಮಾ ಬಿಡುಗಡೆ ತಡವಾಗುವ ಸಾಧ್ಯತೆಯಿದೆ. ಏಕಕಾಲಕ್ಕೆ ಎರಡು ಭಾಗಗಳಾಗಿ 'ರಾಮಾಯಣ' ಚಿತ್ರವನ್ನು ಸೆರೆ ಹಿಡಿಯುವ ಪ್ರಯತ್ನಗಳು ನಡೀತಿದೆ.
ಮತ್ತೊಂದು ಕಡೆ ಯಶ್ 'ಟಾಕ್ಸಿಕ್' ಚಿತ್ರವನ್ನು ಕೂಡ ನಿರ್ಮಿಸಿ ನಟಿಸುತ್ತಿದ್ದಾರೆ. ಗೀತು ಮೋಹನ್‌ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.


Click it and Unblock the Notifications











