ನಾವ್ಯಾಕೇ ಅವರಿಗೆ ವಿಲನ್ ಆಗಬೇಕು ? ದಕ್ಷಿಣ ಚಿತ್ರರಂಗದಿಂದ ನಾನು ದೂರ ಇರುವುದಕ್ಕೆ ಇದೇ ಕಾರಣ- ಸುನಿಲ್ ಶೆಟ್ಟಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್‌ನವರ ನೆತ್ತಿಗೇರಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಚಿತ್ರಗಳ ಅಬ್ಬರದ ಮುಂದೆ ಹಿಂದಿ ಉದ್ಯಮದ ಚಿತ್ರಗಳು ತರಗೆಲೆಗಳಂತೆ ಚದುರಿ ದಿಕ್ಕಾಪಾಲಾಗುತ್ತಿವೆ. ಸ್ವಲ್ಪ ಯಾಮಾರಿದರೂ ಬಾಲಿವುಡ್ಡಿಗೇ ಬಾಲಿವುಡ್ಡೇ ಬಾಗಿಲು ಹಾಕಿಕೊಂಡು ಹೋಗಬೇಕಾದ ಅಪಾಯ ಇದೆ.
ಆದರೂ ಕೂಡ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನೋಭಾವ ಹಲವರದ್ದು. ಉದಾಹರಣೆಗೆ ಸುನಿಲ್ ಶೆಟ್ಟಿ. ಹೌದು, ಸುನಿಲ್ ಶೆಟ್ಟಿ .. ಬಾಲಿವುಡ್‌ನ ಸ್ಟಾರ್. 1992ರಲ್ಲಿ ''ಬಲ್ವಾನ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸುನಿಲ್ ಶೆಟ್ಟಿ ಇಂದು ಕೋಟ್ಯಂತರ ಆಸ್ತಿಯ ಒಡೆಯ. ಒಂದು ವರದಿಯ ಪ್ರಕಾರ ಇವರ ತಿಂಗಳ ಸಂಪಾದನೆಯೇ 50 ಲಕ್ಷದ ಮೇಲಿದೆ.

ಮುಂಬೈನಲ್ಲಿ 20 ಕೋಟಿಯ ಭವ್ಯವಾದ ಬಂಗಲೆಯಲ್ಲಿ ವಾಸ ಮಾಡುವ ಸುನಿಲ್ ಶೆಟ್ಟಿ ಖಂಡಾಲಾದಲ್ಲಿ ಜಹಾನ್ ಎಂಬ ಹೆಸರಿನ ಫಾರ್ಮೌಸ್‌ನ ಕೂಡ ಹೊಂದಿದ್ದಾರೆ. ಇನ್ನು ಕೇವಲ ಸಿನಿಮಾ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೂಡ ಹಣ ಹೂಡಿರುವ ಸುನಿಲ್ ಶೆಟ್ಟಿ ಎಸ್2 ರಿಯಲ್ಟಿ & ಡೆವಲಪರ್ಸ್ ಎಂಬ ಸಂಸ್ಥೆಯ ನಿರ್ದೇಶಕ ಕೂಡ ಹೌದು. ಇಷ್ಟೇ ಅಲ್ಲ ಮುಂಬೈನ ಹಲವಾರು ಕಡೆ ಇವರ ಒಡೆತನದ ಬಟ್ಟೆ ಅಂಗಡಿಗಳಿವೆ. ರೆಸ್ಟೋರೆಂಟ್‌ಗಳಿವೆ.
ಹೀಗೆ ಕೇವಲ ನಟನಾಗಿ ಮಾತ್ರವಲ್ಲದೇ ಉದ್ಯಮಿಯಾಗಿ ಕೂಡ ಬೆಳೆದಿರುವ ಸುನಿಲ್ ಶೆಟ್ಟಿ ತಮ್ಮ ಮೂರುವರೆ ದಶಕದ ವೃತ್ತಿ ಬದುಕಿನಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿದ್ದಾರೆ. ''ಮೊಹರಾ''.. ''ದಿಲ್‌ವಾಲೆ''.. ''ಗೋಪಿ ಕಿಶನ್''.. ''ದಢ್ಕನ್''.. ''ಕೃಷ್ಣಾ.. ''ಹೇರಾ ಪೇರಿ''.. ''ಬಾರ್ಡರ್''.. ಹೀಗೆ ಹಲವಾರು ಅವಿಸ್ಮರಣಿಯ ಚಿತ್ರಗಳನ್ನು ನೀಡಿದ್ದಾರೆ.
ಆದರೆ.. ಮೂಲ್ಕಿ ಬಳಿಯ ಬಪ್ಪನಾಡು ನನ್ನ ಜನ್ಮಸ್ಥಾನ ಎನ್ನುವ ಮಂಗಳೂರು ಮೂಲದ ಸುನಿಲ್ ಶೆಟ್ಟಿ, ದಕ್ಷಿಣದ ಕಡೆ ತಲೆ ಹಾಕಿ ಮಲಗಿದ್ದು ತುಂಬಾನೇ ಕಡಿಮೆ. ಮಾತೆತ್ತಿದರೆ ನಾನು ತುಳುನಾಡಿನವ ಎಂದು ಹೇಳುವ ಸುನಿಲ್ ಶೆಟ್ಟಿ ತಮ್ಮ ಈ ಸುದಿರ್ಘವಾದ ಚಿತ್ರ ಪ್ರಯಾಣದಲ್ಲಿ ಕೇವಲ ಒಂದೇ ಒಂದು ತುಳು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆ ಚಿತ್ರದ ಹೆಸರು ''ಜೈ''. ಅದು ಕೂಡ ಮೊನ್ನೆ ಮೊನ್ನೆ ಬಿಡುಗಡೆಯಾದ ಈ ಚಿತ್ರದಲ್ಲಿ ಇವರದ್ದು ಅತಿಥಿ ಪಾತ್ರ.
ಇನ್ನೂ ಕನ್ನಡದಲ್ಲಿ ಸುದೀಪ್ ಅವರ ಜೊತೆ ಇರುವ ಸ್ನೇಹ ಮತ್ತು ಪ್ರೀತಿಗೆ ''ಪೈಲ್ವಾನ್'' ಚಿತ್ರದಲ್ಲಿ ಸುನಿಲ್ ಶೆಟ್ಟಿ ಬಣ್ಣ ಹಚ್ಚಿದ್ದರು. ಇಂಥಾ ಸುನಿಲ್ ಶೆಟ್ಟಿ ಇದೀಗ ತಾವು ದಕ್ಷಿಣದ ಚಿತ್ರಗಳಲ್ಲಿ ನಟಿಸದಿರಲು ಕಾರಣವನ್ನು ಹೇಳಿದ್ದಾರೆ. ಅವರಿಗೆ ನಾವು ಯಾಕೆ ವಿಲನ್ ಆಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಹೌದು, ಈ ಕುರಿತು ''ಲಲ್ಲನ್‌ಟಾಪ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಶೆಟ್ಟಿ, ನಿಜಾ ಹೇಳಬೇಕು ಅಂದರೆ ನನಗೆ ದಕ್ಷಿಣದಿಂದ ಹಲವು ಆಫರ್‌ಗಳು ಬರುತ್ತವೆ ಆದರೆ ದುರಾದೃಷ್ಟವಶಾತ್ ಅವೆಲ್ಲವೂ ಖಳನಾಯಕನ ಪಾತ್ರಗಳಾಗಿರುತ್ತಾವೆ ಎಂದು ಹೇಳಿದ್ದಾರೆ.
ನಮ್ಮ ಹಿಂದಿ ಚಿತ್ರರಂಗದ ನಾಯಕರನ್ನು ಅವರು ವಿಲನ್ ರೂಪದಲ್ಲಿ ತೋರಿಸಲು ಇಷ್ಟ ಪಡುತ್ತಾರೆ, ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ವಾದ ಮಾಡುತ್ತಾರೆ. ಆದರೆ ವ್ಯೆಯಕ್ತಿಕವಾಗಿ ನಾವು ಅಲ್ಲಿ ವಿಲನ್ ಪಾತ್ರ ಮಾಡುವುದು ನನಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ರಜನಿಕಾಂತ್ ಅವರ ಜೊತೆ ನಾನು ಕೂಡ ಒಂದು ಸಿನಿಮಾ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ನಾನು ''ದರ್ಬಾರ್'' ಸಿನಿಮಾ ಮಾಡಿದ್ದಷ್ಟೇ, ಇಲ್ಲದಿದ್ದರೆ ಮಾಡುತ್ತಿರಲಿಲ್ಲ ಎಂದು ಹೇಳಿರುವ ಸುನಿಲ್ ಶೆಟ್ಟಿ ಇತ್ತೀಚೆಗೆ ಸಣ್ಣ ತುಳು ಚಿತ್ರ ''ಜೈ'' ಎಂಬ ಚಿತ್ರವನ್ನು ಪ್ರೋತ್ಸಾಹಿಸಲು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇಂದು ಭಾಷೆಯ ಅಡೆತಡೆಗಳಿಲ್ಲ. ಒಂದು ವೇಳೆ ಅಡೆತಡೆಗಳಿದ್ದರೆ, ಅದು ಬಹುಶಃ ವಿಷಯದ ಕಾರಣದಿಂದ ಇರಬಹುದು. ನಿಮ್ಮ ವಿಷಯ ಚೆನ್ನಾಗಿದ್ದರೆ, ಅದು ಎಲ್ಲಾ ಅಡೆತಡೆಗಳನ್ನು ಮೀರಿ ದಾಟುತ್ತೆ ಎಂದು ಹೇಳಿದ್ದಾರೆ.
ಸುನಿಲ್ ಶೆಟ್ಟಿ ಅವರ ಈ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದ್ದು, ದಕ್ಷಿಣ ಭಾರತದ ಸ್ಟಾರ್‌ಗಳನ್ನು ಕರೆದುಕೊಂಡು ಹೋಗಿ ಅವರನ್ನು ನೀವು ವಿಲನ್ ಮಾಡಿದರೆ ನಡೆಯುತ್ತೆ. ಆದರೆ ಇಲ್ಲಿನವರು ಹಾಗೇ ಮಾಡುವಂತೆ ಇಲ್ವಾ..? ಎಂದು ಪ್ರಶ್ನೆಯನ್ನು ಸುನಿಲ್ ಶೆಟ್ಟಿಗೆ ಮಾಡುತ್ತಿದ್ದಾರೆ. ಸಂಜಯ್ ದತ್ ಅವರಿಗೆ ಇಂದು ಚೂರು ಪಾರು ಕೆಲಸ ಸಿಗುತ್ತಿದೆ ಅಂದರೆ ಅದಕ್ಕೆ ದಕ್ಷಿಣ ಚಿತ್ರರಂಗ ಕಾರಣ ಎನ್ನುವುದನ್ನು ಮರೆಯಬೇಡಿ ಎಂದು ಹೇಳುತ್ತಿದ್ದಾರೆ. ಅಮರೀಶ್‌ಪುರಿ ಅವರಿಂದ ಹಿಡಿದು ನವಾಜುದ್ದೀನ್ ಸಿದ್ದಿಕಿವರೆಗೆ ಸೌತ್ ಸಿನಿಮಾದಲ್ಲಿ ಖಳನಾಯಕನಾಗಿ ಮಿಂಚಿದ ಸ್ಟಾರ್‌ಗಳ ಉದಾಹರಣೆಯನ್ನು ಕೂಡ ಹಲವರು ನೀಡುತ್ತಿದ್ದಾರೆ.


Click it and Unblock the Notifications











