ಉದ್ಯಮಿಗೆ 3ನೇ ಹೆಂಡ್ತಿ, 2 ಹೆಣ್ಮಕ್ಕಳಿಗೆ ಮಲತಾಯಿ, ಮದ್ವೆಗೆ 6ವರ್ಷ ; ತಾಯ್ತನದ ಸುಖ ನನಗೆ ಬೇಡವೆಂದ ನಟಿ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.
ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಎಷ್ಟೇ ದೃಢ ನಿರ್ಧಾರ ಮಾಡಿದರು.. ಜೀವನ ಸಂಗಾತಿಯೇ ಬೇಡ ಎಂದು ಅಂದುಕೊಂಡರು.. ಕೆಲ ಮಹಿಳೆಯರಲ್ಲಿ ತಾಯ್ತನದ ಹಂಬಲ ಮಾತ್ರ ಇದ್ದೇ ಇರುತ್ತೆ.

ಈ ಕಾರಣಕ್ಕಾಗಿಯೇ ಹಲವರು ಅದರಲ್ಲಿಯೂ ಚಿತ್ರರಂಗದಲ್ಲಿ ನಾಯಕಿಯರು ಅಂಡಾಣು ಶೇಖರಣೆ ಮಾಡಿ ಇಡುತ್ತಿದ್ದಾರೆ. ಮೆರ್ಹಿನ್ ಪಿರ್ಜಾದಾ.. ರಿಚಾ ಚಡ್ಡಾ.. ಮೃಣಾಲ್ ಠಾಕೂರ್.. ಹೀಗೆ ಒಬ್ಬರಾ.. ಇಬ್ಬರಾ.. ಹಲವರು ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಆಲೋಚನೆ ಮಾಡಿದ್ದಾರೆ.
ಆದರೆ, ಇಲ್ಲೊಬ್ಬರು ಮದುವೆಯಾಗಿದ್ದಾರೆ. ಅಂಡಾಣು ಕೂಡ ಶೇಖರಣೆ ಮಾಡಿದ್ದಾರೆ. ಆದರೆ ಈಗ ಮದುವೆಯಾದ 6 ವರ್ಷದ ನಂತರ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ತಾಯಿಯಾಗದಿರಲು ನಿರ್ಧಾರ ಮಾಡಿದ್ದಾರೆ. ಇವರ ಹೆಸರು ನೇಹಾ ಪೆಂಡ್ಸೆ.
ಹೌದು, ನೇಹಾ ಪೆಂಡ್ಸೆ.. ಬಾಲ್ಯದಲ್ಲಿಯೇ ಬಣ್ಣದ ಪ್ರಪಂಚಕ್ಕೆ ಬಂದ ಪೋರಿ. ಸನ್ನಿ ಡಿಯೋಲ್ ಅಭಿನಯದ ''ಪ್ಯಾರ್ ಕೋಯಿ ಖೇಲ್ ನಹಿ'' ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸಿರುವ ನೇಹಾ ಆ ನಂತರ ಕನ್ನಡ ಹೊರತು ಪಡಿಸಿ ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮರಾಠಿಯಲ್ಲಿ ಕೂಡ ಮಿಂಚಿದ್ದಾರೆ.
''ಮೇ ಐ ಕಮ್ ಇನ್ ಮೇಡಂ'' ಇವರಿಗೆ ಹೆಸರು -ಹಣ ನೀಡಿದ ಧಾರಾವಾಹಿ. ''ಬಾಬಿಜೀ ಘರ್ ಪರ್ ಹೈ'' ಧಾರಾವಾಹಿಯಲ್ಲಿಯೂ ಮಿಂಚಿದ್ದ ನೇಹಾ ಹಿಂದಿಯ ''ಬಿಗ್ ಬಾಸ್'' ಸೀಸನ್ 12ರ ಸ್ಫರ್ಧಿ ಕೂಡ ಹೌದು. 2018ರಲ್ಲಿ ''ಬಿಗ್ ಬಾಸ್'' ಮನೆಯಲ್ಲಿ 28 ದಿನ ಇದ್ದರು ನೇಹಾ.

ಇಂಥಾ ನೇಹಾ ಪೆಂಡ್ಸೆ ಇದೀಗ ತಮಗೆ ತಾಯಿಯಾಗಲು ಇಷ್ಟ ಇಲ್ಲ ಎಂದು ಹೇಳಿದ್ಧಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದ್ದಾರೆ. ''ರಾಜಶ್ರೀ ಮರಾಠಿ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನೇಹಾ ಪೆಂಡ್ಸೆ ನನಗೆ ತಾಯಿ ಆಗಲು ಇಷ್ಟವಿಲ್ಲ. ಮದುವೆಯಾಗಿ ಆರು ವರ್ಷಗಳಾದರೂ ತಾಯಿಯಾಗಬೇಕೆಂಬ ಬಯಕೆ ನನಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ನನ್ನ ಮನಸ್ಸು ಬದಲಾಗಬಹುದು, ತಾಯಿಯಾಗಬೇಕೆಂಬ ಹಂಬಲ ಹೆಚ್ಚಾಗಬಹುದು, ಹೀಗಾಗಿ ನಾನು ನನ್ನ ಅಂಡಾಣುವನ್ನು ಶೇಖರಿಸಿದ್ದೇನೆ ಎಂದು ಹೇಳಿರುವ ನೇಹಾ ತುಂಬಾನೇ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಹಾಗೇ ನೋಡಿದರೆ ಮದುವೆಯಾದ ನಂತರ ಒಂದು ಹಂತದಲ್ಲಿ ತಾಯಿಯಾಗಬೇಕೆನ್ನುವ ಆಸೆ ನನ್ನಲ್ಲಿ ತೀವೃವಾಗಿ ಚಿಗುರೊಡೆದಿತ್ತು ಎಂದು ಹೇಳಿರುವ ನೇಹಾ ಆದರೆ ಈ ಪ್ರಕ್ರಿಯೆಯಲ್ಲಿ ನನಗೆ ಸಿಕ್ಕಿದ್ದು ಕೇವಲ ನಿರಾಸೆ ಮತ್ತು ಹತಾಶೆ ಎಂದು ಹೇಳಿದ್ದಾರೆ. ಹೀಗಾಗಿ ತಾಯ್ತನದ ಸುಖವೇ ನನಗೆ ಬೇಡ ಎಂದು ನಾನು ತೀರ್ಮಾನಕ್ಕೆ ಬಂದೇ ಎಂದು ಹೇಳಿರುವ ನೇಹಾ ಸದ್ಯ ಈ ಮಾತುಗಳನ್ನೆಲ್ಲ ನಾನು ನಿಮಗೆ ಸಿಟ್ಟಿನಲ್ಲಿ ಹೇಳುತ್ತಿರಬಹುದು, ಗೊತ್ತಿಲ್ಲ ಮುಂದೆ ನನ್ನ ಮನಸು ಬದಲಾದರು ಬದಲಾಗಬಹುದು ಎಂದು ಹೇಳಿದ್ಧಾರೆ.
ಅಂದ್ಹಾಗೇ ನೇಹಾ ಪೆಂಡ್ಸೆ 2020ರಲ್ಲಿ ಜನವರಿ 5 ರಂದು ಉದ್ಯಮಿ ಶಾರ್ದೂಲ್ ಬಾಯಸ್ ಅವರನ್ನು ಮದುವೆಯಾಗುವ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದರು. ಆ ಕಾಲದಲ್ಲಿ ತುಂಬಾನೇ ಚರ್ಚಿತ ಮದುವೆ ಇವರದ್ದು. ಯಾಕೆಂದರೆ ನೇಹಾ ಅವರಿಗಿಂತ ವಯಸ್ಸಿನಲ್ಲಿ ಮೂರು ಮೂರುವರೆ ವರ್ಷ ದೊಡ್ಡವರಾಗಿರುವ ಶಾರ್ದೂಲ್ ಅವರಿಗೆ ಅದಾಗಲೇ ಎರಡು ಮದುವೆಯಾಗಿತ್ತು.

2004ರಲ್ಲಿ ನೇಹಾ ಬೋರಾ ಅವರನ್ನು ಮದುವೆಯಾಗಿದ್ದ ಶಾರ್ದೂಲ್ 16 ವರ್ಷ ಸಂಸಾರ ನಡೆಸಿದ್ದರು. ಆ ನಂತರ 2017ರಲ್ಲಿ ಅನಿತಾ ಅಗರ್ವಾಲ್ ಅವರನ್ನು ಶಾರ್ದೂಲ್ ಮದುವೆಯಾಗಿದ್ದರು. ತಮ್ಮ ಈ ಎರಡು ಮದುವೆಯಿಂದ ಶಾರ್ದೂಲ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳು ತಂದೆ ಶಾರ್ದೂಲ್ ಜೊತೆಯಲ್ಲಿಯೇ ವಾಸ ಮಾಡುತ್ತಿದ್ದಾರೆ.
ಆದರೂ ಕೂಡ ಶಾರ್ದೂಲ್‌ಗೆ ಪಾರ್ಟಿಯೊಂದರಲ್ಲಿ ನೇಹಾ ಮನ ಸೋತರು. ಮದುವೆಯೂ ಆದರು. ಈ ಹಿನ್ನೆಲೆ ಹಲವರು ಆಗ ನೇಹಾ ನಿರ್ಧಾರಕ್ಕೆ ಆಶ್ಚರ್ಯಗೊಂಡಿದ್ದರು. ಈಗ ಮದುವೆಯ ಆರು ವರ್ಷದ ನಂತರ ನನಗೆ ತಾಯಿಯಾಗುವ ಹಂಬಲ ಇಲ್ಲ ಎಂದು ಹೇಳುವ ಮೂಲಕ ಮತ್ತೆ ನೇಹಾ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.


Click it and Unblock the Notifications











