ಈ ಖ್ಯಾತ ನಟನ 5000 ಕೋಟಿ ರೂ. ಆಸ್ತಿಯಲ್ಲಿ 4 ಜನ ಮಕ್ಕಳಿಗೆ ನಯಾಪೈಸೆ ಕೂಡ ಸಿಗಲ್ಲ!
ಪ್ರತಿ ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆ ಎನ್ನುವ ಮಾತಿದೆ. ಯಾರಿಗೆ ಯಾವುದು ಸಿಗಬೇಕೋ ಅದು ಖಂಡಿತ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ. ಸಾಮಾನ್ಯವಾಗಿ ತಂದೆ, ತಾತನ ಆಸ್ತಿ ಮಕ್ಕಳಿಗೆ ಸಿಗುತ್ತದೆ. ಆದರೆ ಇಲ್ಲೊಬ್ಬ ನಟನ 5000 ಕೋಟಿ ರೂ. ಆಸ್ತಿಯಲ್ಲಿ ಮಕ್ಕಳಿಗೆ ಒಂದು ಪೈಸೆ ಸಿಗಲ್ಲ ಎಂದರೆ ನಂಬಲೇಬೇಕು.
ಬಾಲಿವುಡ್‌ನಲ್ಲಿ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವ ಕಲಾವಿದರಿದ್ದಾರೆ. ಚಿತ್ರವೊಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ನಟರು ಅದನ್ನು ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿ ಮತ್ತಷ್ಟು ಲಾಭ ಮಾಡಿ ಕೂಡಿಡುತ್ತಿದ್ದಾರೆ. ತಮ್ಮ ಅಂತಸ್ತಿಗೆ ತಕ್ಕಂತೆ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಉಳ್ಳವರ ಬಳಿಯೇ ಹಣ ಸೇರುತ್ತದೆ ಎನ್ನುವಂತೆ ದಿನದಿಂದ ದಿನಕ್ಕೆ ಆದಾಯ ಹೆಚ್ಚುತ್ತಲೇ ಇದೆ.

ನಟ ಸೈಫ್ ಅಲಿಖಾನ್ ಹೇಳಿಕೇಳಿ ಶ್ರೀಮಂತ ಕುಟುಂಬದಿಂದ ಬಂದವರು. ನವಾಬ್ ಮನೆತನದ ಕುಡಿ. ತಂದೆ ಮನ್ಸೂರ್ ಅಲಿಖಾನ್ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ತಾಯಿ ಶರ್ಮಿಳಾ ಠಾಗೂರ್ ಸಿನಿಮಾ ನಟಿಯಾಗಿ ಮಿಂಚಿದ್ದರು. ಇನ್ನು 90ರ ದಶಕದಲ್ಲೇ ಸೈಫ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ವಿಲನ್ ರೋಲ್‌ಗಳಲ್ಲಿ ನಟಿಸಲು ಆರಂಭಿಸಿದ್ದಾರೆ.
ಅಂದಹಾಗೆ ನಟ ಸೈಫ್ ಅಲಿಖಾನ್ ಬಳಿಕ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಅದರಲ್ಲಿ ತಮ್ಮ ಪೂರ್ವಿಕರಿಂದ 5000 ಕೋಟಿ ರೂ. ಮೌಲ್ಯದ ಆಸ್ತಿ ಕೂಡ ಸಿಕ್ಕಿದೆ. ಆದರೆ ಇದರಲ್ಲಿ ನಯಾಪೈಸೆಯನ್ನು ಕೂಡ ತನ್ನ ಮಕ್ಕಳಾದ ಸಾರಾ ಅಲಿಖಾನ್, ಇಬ್ರಾಹಿಂ ಅಲಿ, ತೈಮೂರ್ ಅಲಿ ಹಾಗೂ ಜೆಹ್‌ಗೆ ಕೊಡಲು ಸಾಧ್ಯವಿಲ್ಲ. ಅದಕ್ಕೆ ಕಾರಣವೂ ಇದೆ. ಶತ್ರು ಆಸ್ತಿ ಕಾಯಿದೆ ಕಾರಣಕ್ಕೆ ಈ ಸಮಸ್ಯೆ ತಲೆದೋರಿದೆ.

ಪಟೌಡಿ ಮನೆತನ 10ನೇ ನವಾಬರಾಗಿ, ಸೈಫ್ ತಮ್ಮ ದಿವಂಗತ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯ ಉತ್ತರಾಧಿಕಾರಿಯಾದರು. ಹಾಗಾಗಿ ಪೂರ್ವಿಕರ ಗಣನೀಯ ಸಂಪತ್ತು, ಆಸ್ತಿ ಸಿಕ್ಕಿತ್ತು. ಇದರಲ್ಲಿ ಹರ್ಯಾಣದ ಪಟೌಡಿ ಪ್ಯಾಲೇಸ್ ಹಾಗೂ ಭೋಪಾಲ್‌ನಲ್ಲಿರುವ ಆಸ್ತಿ, ಸಂಪತ್ತು ಮೌಲ್ಯ 5000 ಕೋಟಿ ರೂ. ಎಂದು ಅಂದಾಜಿಸಲಾಗುತ್ತಿದೆ. ಸೈಫ್ ಮುತ್ತಾತ ಹಮೀದುಲ್ಲಾ ಖಾನ್ ಬ್ರಿಟೀಷ್ ಆಡಳಿತದಲ್ಲಿ ನವಾಬನಾಗಿದ್ದ. ಆತ ತನ್ನ ಸಂಪೂರ್ಣ ಆಸ್ತಿಯನ್ನು ವಿಲ್ ಮಾಡಲು ಸಾಧ್ಯವಾಗಲಿಲ್ಲ. ಅದೇ ಈಗ ಸಮಸ್ಯೆಗೆ ಕಾರಣ ಎನ್ನಲಾಗ್ತಿದೆ.
2015ರಲ್ಲಿ ಸೈಫ್ ಅಲಿಖಾನ್ ಒಡೆತನದ ಈ ಆಸ್ತಿಯನ್ನು ಶತ್ರುವಿನ ಸೊತ್ತು ಪಟ್ಟಿಗೆ ಸೇರಿಸಲಾಗಿತ್ತು. ಹಮೀದುಲ್ಲಾ ಖಾನ್ ಅವರ ಪುತ್ರಿ ಅಬೀದಾ ಸುಲ್ತಾನ್ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. 1968ರಲ್ಲಿ ಶತ್ರುವಿನ ಸೊತ್ತು ಕಾಯ್ದೆ ಜಾರಿಗೆ ತರಲಾಗಿತ್ತು. ಇದರ ಪ್ರಕಾರ ದೇಶ ಬಿಟ್ಟು ಹೋದವರನ್ನು ಶತ್ರುಗಳೆಂದು ಪರಿಗಣಿಸಿ ಅವರ ಆಸ್ತಿಯ ಮೇಲೆ ಅವರ ಕುಟುಂಬಕ್ಕೆ ಅಧಿಕಾರ ಇರಲ್ಲ. ಬದಲಿಗೆ ಸರ್ಕಾರಕ್ಕೆ ಸೇರುತ್ತದೆ.
ಹಮೀದುಲ್ಲಾ ತಮ್ಮ ಮತ್ತೊಬ್ಬ ಪುತ್ರಿ ಸಜೀನಾ ಸುಲ್ತಾನರನ್ನು ತಮ್ಮ ಆಸ್ತಿಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಆಕೆಯ ಮೊಮ್ಮಗ ಸೈಫ್ ಅಲಿಖಾನ್. ಆದರೆ ಕಾಯ್ದೆ ಪ್ರಕಾರ ಸರ್ಕಾರ ಆಸ್ತಿಯನ್ನು ಶತ್ರುವಿನ ಸೊತ್ತು ಎಂದು ಘೋಷಿಸಿತು. ಇದನ್ನು ವಿರೋಧಿಸಿ ಸೈಫ್ ಅಲಿಖಾನ್ 2015ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೂ ಇನ್ನು ವಿವಾದ ಬಗೆ ಹರಿದಿಲ್ಲ. ಹಾಗಾಗಿ ಇದನ್ನು ತಮ್ಮ 4 ಜನ ಮಕ್ಕಳಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಇನ್ನು ಪೂರ್ವಜರ ಆಸ್ತಿಯನ್ನು ಪಕ್ಕಕ್ಕಿಟ್ಟರೆ ಸೈಫ್ ಅಲಿಖಾನ್ ಬಳಿ 1000 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಇದೆ. ಪತ್ನಿ ಕರೀನಾ ಕಪೂರ್ ಕೂಡ ಬಾಲಿವುಡ್ ಖ್ಯಾತ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಇಬ್ಬರೂ ಪ್ರತಿವರ್ಷ ನೂರಾರು ಕೋಟಿ ರೂ. ಆದಾಯ ಗಳಿಸುತ್ತಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳ ಮೂಲಕವೂ ಕೋಟಿ ಕೋಟಿ ಗಳಿಸುತ್ತಿದ್ದಾರೆ.
ಕಳೆದ ವರ್ಷ 'ಆದಿಪುರುಷ್' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ಅಬ್ಬರಿಸಿದ್ದರು. ಆದರೆ ಕಾಸ್ಟ್ಯೂಮ್, ಲುಕ್ ಕಾರಣಕ್ಕೆ ಬಹಳ ಟೀಕೆ ವ್ಯಕ್ತವಾಗಿತ್ತು. ಸದ್ಯ ತೆಲುಗಿನ 'ದೇವರ' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಎದುರು ವಿನಲ್ ಆಗಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್ 27ಕ್ಕೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.


Click it and Unblock the Notifications











