ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುವ ಸಲ್ಮಾನ್ ಖಾನ್‌ನ ಮುತ್ತಿಕೊಂಡ ಜನ ; ಭಾಯ್‌ಜಾನ್ ಕಕ್ಕಾಬಿಕ್ಕಿ
ಕೇಳೊದಕ್ಕೆ ಇದು ವಿಚಿತ್ರವಾದ ಕಥೆ. ಆದ್ರೆ ಸತ್ಯಕಥೆ. ಈ ಸತ್ಯಕಥೆಯ ನಾಯಕ ಸಲ್ಮಾನ್ ಖಾನ್ ಆದರೆ, ಖಳನಾಯಕ ಲಾರೆನ್ಸ್ ಬಿಷ್ಣೋಯ್. ಈ ಕಥೆಯಲ್ಲಿ ಯಾವತ್ತು ಏನಾಗುತ್ತೆ ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ಸದ್ಯಕ್ಕೆ ಸಲ್ಮಾನ್ ಖಾನ್ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಸುಳ್ಳಲ್ಲ.
ಅದರಲ್ಲಿಯೂ ಕಳೆದ ವರ್ಷ ಅತ್ಯಾಪ್ತರಾಗಿದ್ದ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ವಿಚಲಿತರಾಗಿದ್ದಾರೆ. ಯಾವತ್ತು ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ ಮಾಡುತ್ತಾರೋ ಏನೋ ಎನ್ನುವ ಯೋಚನೆಯಲ್ಲಿಯೇ ಸಲ್ಮಾನ್ ಖಾನ್ ಓಡಾಡುತ್ತಿರುತ್ತಾರೆ. ಒಂದಾದ ಮೇಲೊಂದರಂತೆ ಹಲವು ಬೆದರಿಕೆಗಳು ನಿರಂತರವಾಗಿ ಬಂದ ಹಿನ್ನೆಲೆ ತಮ್ಮ ಸುತ್ತ ಮುತ್ತ ಭದ್ರಕೋಟೆಯನ್ನೇ ನಿರ್ಮಾಣ ಮಾಡಿದ್ದಾರೆ. ಆದರೂ ಕೂಡ ಭಯ ಇದ್ದೇ ಇದೆ.

ಹೀಗಿರುವಾಗ ಒಮ್ಮೆಲೆ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಜನ ಬಂದು ಮುತ್ತಿಕೊಂಡರೆ ಹೇಗಾಗಬೇಡ..? ಸಲ್ಮಾನ್ ಖಾನ್ ವಿಚಾರದಲ್ಲಿ ಸದ್ಯ ಇಂತಹದ್ದೇ ಘಟನೆ ನಡೆದಿದ್ದು ಇವರ ಅಭಿಮಾನಿಗಳು ಸದ್ಯ ವೈರಲ್ ಆದ ವಿಡಿಯೋಗಳನ್ನು ನೋಡಿ ಚಿಂತಾಕ್ರಾಂತರಾಗಿದ್ಧಾರೆ.
ಹೌದು, ಅಸಲಿಗೆ ಸಲ್ಮಾನ್ ಖಾನ್ ಮುಂಬೈನ ಥಾಣೆಯಲ್ಲಿರುವ ದಾದೋಜಿ ಕೊಂಡದೇವ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ''ಪ್ರೆಸಿಡೆಂಟ್ ಕಪ್ 2026'' ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರೊಂದಿಗೆಈ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಟ್ರೋಫಿ ಅನಾವರಣಗೊಳಿಸಿದರು.
ಇನ್ನು ಸಲ್ಮಾನ್ ಖಾನ್ ಬಾಲಿವುಡ್‌ನ ಮಾಸ್ ಮಹಾರಾಜಾ. ಹಿಂದಿ ಉದ್ಯಮದಲ್ಲಿ ಅಸಂಖ್ಯಾತ ಅಭಿಮಾನಿ ಹೊಂದಿರುವ ನಟ ಹೀಗೊಂದು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದಾಗ ಅಭಿಮಾನದ ಅಲೆ ಎದ್ದೇಳದಿರಲು ಹೇಗೆ ಸಾಧ್ಯ..? ಹೀಗಾಗಿಯೇ ಸಲ್ಮಾನ್ ಖಾನ್ ಅವರನ್ನು ನೋಡಲು ಹಲವಾರು ಜನ ಕ್ರೀಡಾಂಗಣಕ್ಕೆ ಬಂದಿದ್ದರು. ಸಲ್ಮಾನ್ ಖಾನ್ ಕೂಡ ಕಾರ್ಯಕ್ರಮ ತಮ್ಮ ಭದ್ರತಾ ಪಡೆಯ ಜೊತೆ ಬಂದರು.
ಆದರೆ ಹೋಗುವ ಸಮಯದಲ್ಲಿ ಮಾತ್ರ ಈ ಭದ್ರತಾ ಪಡೆ ಕಣ್ಣಿಗೆ ಕಾಣಿಸಲೇ ಇಲ್ಲ. ಯಾಕೆಂದರೆ ಸಲ್ಮಾನ್ ಖಾನ್ ವೇದಿಕೆಯಿಂದ ಹೊರಬರುತ್ತಿದ್ದಂತೆ, ಅಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದರು. ಭದ್ರತಾ ಕೋಟೆಯನ್ನು ದಾಟಿಕೊಂಡು ಸಲ್ಮಾನ್ ಖಾನ್ ಅವರನ್ನು ಸುತ್ತುವರೆದರು. ಸಲ್ಮಾನ್ ಖಾನ್ ಮೈಮೇಲೆ ಬೀಳಲು ಶುರು ಮಾಡಿದರು. ಕೆಲವರಿಗೆ ಸೆಲ್ಫೀ ತೆಗೆದುಕೊಳ್ಳುವ ಆಸೆ. ಮತ್ತು ಕೆಲವರಿಗೆ ಮುಟ್ಟುವ ಬಯಕೆ. ಅಭಿಮಾನದ ಈ ಸುಳಿಯಲ್ಲಿ ಸಿಲುಕಿದ ಸಲ್ಮಾನ್ ಖಾನ್ ಅಕ್ಷರಶಃ ಕಕ್ಕಾಬಿಕ್ಕಿಯಾಗಿದ್ದರು. ಅಲ್ಲಿಂದ ಹೊರ ಬರಲು ಹರಸಾಹಸ ಪಟ್ಟರು.
ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಕಾರ್ಯಕ್ರಮದ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆಗಲೇ ಹೇಳಿದಂತೆ ಸಲ್ಮಾನ್ ಖಾನ್ ಅವರಿಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದ ಹಿನ್ನೆಲೆ ಅವರ ಭದ್ರತೆಯ ಕುರಿತು ಆತಂಕ ವ್ಯಕ್ತಪಡಿಸಿದ್ಧಾರೆ.ಇಷ್ಟೆಲ್ಲಾ ಬೆದರಿಕೆಗಳ ನಂತರ ಈ ವಿಡಿಯೋ ನೋಡುತ್ತಿದ್ದರೆ ಅಪಾಯಕಾರಿಯಂಬಂತೆ ಕಾಣುತ್ತಿದೆ ಎಂದಿದ್ದಾರೆ. ಭದ್ರತಾ ಸಿಬ್ಬಂದಿಗಳು ಎಲ್ಲಿ ಎಂದು ಪ್ರಶ್ನೆ ಮಾಡಿದ್ಧಾರೆ. ಸಲ್ಮಾನ್ ಖಾನ್ ಅವರಿಗೆ ಹುಶಾರಾಗಿರುವಂತೆ ಮನವಿಯನ್ನು ಮಾಡಿಕೊಳ್ಳುತ್ತಿದ್ಧಾರೆ. ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ಸಲಹೆಯನ್ನು ಕೂಡ ನೀಡುತ್ತಿದ್ಧಾರೆ.
ಇನ್ನುಳಿದಂತೆ ಸದ್ಯ ಸಲ್ಮಾನ್ ಖಾನ್ ಅಭಿನಯದ ''ಮಾತೃಭೂಮಿ'' ಬಿಡುಗಡೆಯಾಗಬೇಕಿದೆ. ಈ ಚಿತ್ರ ಹೊರತು ಪಡಿಸಿದರೆ ತೀರಾ ಇತ್ತೀಚೆಗೆ ತೆಲುಗು ನಿರ್ಮಾಪಕರ ದಿಲ್ ರಾಜು ಹಾಗೂ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಸಲ್ಲು ಕೈ ಜೋಡಿಸಿದ್ದಾರೆ.ನಯನತಾರ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.


Click it and Unblock the Notifications











