ಸಿನಿಮಾ ಆಗುತ್ತಿದೆ ನೀವು ನೋಡಿದ ಜನಪ್ರಿಯ ವೆಬ್ ಸೀರಿಸ್, ಯಾವುದದು..?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ತುಂಬಾ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5 ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ.
ಇನ್ನೂ .. ಈ ಓಟಿಟಿ ವೇದಿಕೆ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದೆ ಎಂದರೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವ ಸಂಖ್ಯೆ ಕಡಿಮೆಯಾಗಿದೆ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳನ್ನು ಹೊರತು ಪಡಿಸಿದರೆ ಏನೇ ತಿಪ್ಪರಲಾಗ ಹಾಕಿದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡದಂತಹ ವಾತಾವರಣ ನಿರ್ಮಾಣವಾಗಿದೆ. ಲಕ್ಷ ಹಣವನ್ನು ನೀರಿನಂತೆ ಖರ್ಚು ಮಾಡಿ ಯೂಟ್ಯೂಬ್ ಸೇರಿ ಇನ್ನುಳಿದ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಮತ್ತು ಹಾಡುಗಳನ್ನು ಬೂಸ್ಟ್ ಮಾಡಲಾಗುತ್ತಿದೆ. ಇದರಿಂದ ಲಾಭ ಯಾರಿಗೆ ಆಗುತ್ತಿದೆ ಎನ್ನುವುದು ನಿರ್ಮಾಪಕರಿಗೆ ಗೊತ್ತಾದರೂ ಅವರಿಗೆ ಮಾತ್ರ ನಾಲ್ಕಾಣೆ ವರಮಾನ ಸಿಗುತ್ತಿಲ್ಲ.

ಇನ್ನೂ ದೊಡ್ಡ ದೊಡ್ಡ ಸ್ಟಾರ್‌ಗಳು ಕೂಡ ಚಿತ್ರಮಂದಿರಕ್ಕಿಂತ ತಮ್ಮ ಚಿತ್ರವನ್ನು ಓಟಿಟಿಯಲ್ಲಿಯೇ ಬಿಡುಗಡೆ ಮಾಡುತ್ತಿದ್ದಾರೆ. ವೆಬ್ ಸರಣಿಗಳಿಗೆ ಬಣ್ಣ ಹಚ್ತಿದ್ದಾರೆ. ಹೀಗೆ ಬಂದ ವೆಬ್ ಸರಣಿಗಳ ಲೆಕ್ಕ ಇಲ್ಲ. ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ವೆಬ್ ಸರಣಿಯ ರೂಪದಲ್ಲಿ ಬಂದು, ಅಪಾರ ಜನಪ್ರಿಯತೆಯನ್ನು ಪಡೆದ ವೆಬ್ ಸರಣಿಯೊಂದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಪ್ರಯತ್ನಕ್ಕೆ ಫರ್ಹಾನ್ ಅಖ್ತರ್ ಮುಂದಾಗಿದ್ದಾರೆ. ಇಲ್ಲಿಯವರೆಗೆ ವೆಬ್ ಸರಣಿಯಾಗಿ ಮೂರು ಸೀಸನ್ ಪ್ರದರ್ಶನ ಕಂಡ ಮಿರ್ಜಾಪುರ್ ಚಿತ್ರವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ.
ಈ ಕುರಿತು ಇಂದು ವಿಶೇಷವಾದ ವಿಡಿಯೋವನ್ನು ಚಿತ್ರಹಂಚಿಕೊಂಡಿದ್ದು, ಚಿತ್ರಮಂದಿರದಲ್ಲಿ 2026ರಲ್ಲಿ ಮಿರ್ಜಾಪುರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಇನ್ನೂ ಮಿರ್ಜಾಪುರ್ ವೆಬ್ ಸರಣಿಯನ್ನು ಚಿತ್ರವನ್ನಾಗಿ ಬಿಡುಗಡೆ ಮಾಡುವ ಹಿಂದಿನ ಉದ್ದೇಶವನ್ನು ಹಂಚಿಕೊಂಡಿರುವ ಫರ್ಹಾನ್ ಅಖ್ತರ್ ಜನಮನ ಗೆದ್ದ ವೆಬ್ ಸರಣಿಯ ಉತ್ಕ್ರಷ್ಟ ಅನುಭವ ಪ್ರೇಕ್ಷಕರಿಗೆ ಬೆಳ್ಳಿತೆರೆಯ ಮೂಲಕ ಸಿಗಲಿ ಎಂದು ನಾವು ಇನ್ನೂ ದೊಡ್ಡ ಮಟ್ಟದಲ್ಲಿ ಮಿರ್ಜಾಪುರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಮಿರ್ಜಾಪುರ್‌ನಲ್ಲಿದ್ದ ಜಗದ್ವಿಖ್ಯಾತ ಪಾತ್ರಗಳಾದ ಕಾಲೀನ್ ಭಯ್ಯಾ,ಗುಡ್ಡು ಭಯ್ಯಾ, ಮುನ್ನಾ ಭಯ್ಯಾ ಮತ್ತು ಕಂಪೌಡರ್ ಈ ಚಿತ್ರದಲ್ಲಿರಲಿವೆ ಎಂದು ಹೇಳಿರುವ ಫರ್ಹಾನ್ ಅಖ್ತರ್, ಪುನೀತ್ ಕೃಷ್ಣ ಬರೆದ ಕಥೆಯನ್ನು ಗುರ್ಮಿತ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಅಂದ್ಹಾಗೇ ಮೂರು ಸೀಸನ್ ನೋಡಿರುವ ಅನೇಕರು ಮಿರ್ಜಾಪುರ್ ನಾಲ್ಕನೇ ಭಾಗಕ್ಕೆ ಕಾದು ಕುಂತಿದ್ದರು. ನಾಲ್ಕನೇ ಭಾಗದ ಕುರಿತು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಕೇಳುತ್ತಿದ್ದರು.
ಆದರೆ ಈಗ ಮಿರ್ಜಾಪುರ್ ವೆಬ್ ಸರಣಿಯನ್ನು ಚಿತ್ರವನ್ನಾಗಿ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಈ ಕಾರಣಕ್ಕೆ ಅನೇಕರು ಆಶ್ಚರ್ಯಗೊಂಡಿದ್ದಾರೆ. ಎಲ್ಲರು ಚಿತ್ರಮಂದಿರದಿಂದ ಓಟಿಟಿಗೆ ಬಂದರೆ ನೀವು ಓಟಿಟಿಯಿಂದ ಚಿತ್ರಮಂದಿರಕ್ಕೆ ಹೋಗುತ್ತಿದ್ದೀರಲ್ಲಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಬಿಡುಗಡೆಯನ್ನು ಘೋಷಿಸಿರುವ ಫರ್ಹಾನ್ ಅಖ್ತರ್ ಚಿತ್ರದ ಉಳಿದ ತಾರಾಬಳಗದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸದ್ಯಕ್ಕೆ ವೆಬ್ ಸೀರಿಸ್ ಚಿತ್ರವಾಗುತ್ತಿದೆ ಎನ್ನುವ ಸುದ್ದಿಯನ್ನು ಕೇಳಿ ಖುಷಿಯಾಗಿರುವ ಅನೇಕರು ನಾನಾ ತರಹದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಚಿತ್ರಮಂದಿರದಲ್ಲಿ ರಣ್ಭೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರವನ್ನು ಈ ಚಿತ್ರ ಸೆಡ್ಡು ಹೊಡೆಯುತ್ತೆ ಎಂದರೆ ಇನ್ನೂ ಕೆಲವರು ವಿಕ್ರಾಂತ್ ಮೆಸ್ಸಿಯ ಪಾತ್ರವನ್ನು ಕೂಡ ಈ ಚಿತ್ರದಲ್ಲಿ ಬಳಿಸಿಕೊಳ್ಳುವಂತೆ ಮನವಿಯನ್ನು ಮಾಡಿದ್ದಾರೆ.


Click it and Unblock the Notifications











