"14 ಬಾರಿ ಪ್ರಯತ್ನಿಸಿದ್ರು ಮಕ್ಕಳಾಗಲಿಲ್ಲ.. ಕೊನೆಗೆ ಸಲ್ಲು ಸಲಹೆಯಿಂದ ಅವಳಿ ಮಕ್ಕಳ ತಾಯಿಯಾದೆ"
ಬಾಲಿವುಡ್ ಸಿನಿರಸಿಕರಿಗೆ ನಟಿ ಕಾಶ್ಮೀರ ಶಾ ಚಿರಪರಿಚಿತ ಹೆಸರು. ಹಿಂದಿ, ತೆಲುಗು, ಭೋಜ್‌ಪುರಿ, ಮರಾಠಿ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಆಕೆ ಸೈ ಎನಿಸಿಕೊಂಡಿದ್ದಾರೆ. ಹಿಂದಿ ಬಿಗ್‌ಬಾಸ್ ಮನೆಗೆ ಆಗಾಗ್ಗೆ ಗೆಸ್ಟ್ ಅಪಿಯರೆನ್ಸ್ ಮಾಡುವ ಚೆಲುವೆ ಪತಿ, ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ. ಅವಕಾಶ ಸಿಕ್ಕಾಗ ಕಿರುತೆರೆ, ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
2001ರಲ್ಲಿ ಬ್ರಾಡ್ ಲಿಸ್ಟರ್‌ಮನ್ ಎಂಬುವವರ ಕೈ ಹಿಡಿದಿದ್ದ ನಟಿ ಕಾಶ್ಮೀರ ಶಾ, 6 ವರ್ಷಗಳ ನಂತರ ಡಿವೋರ್ಸ್ ಪಡೆದಿದ್ದರು. ನಂತರ 2013ರಲ್ಲಿ ನಟ ಕೃಷ್ಣ ಅಭಿಷೇಕ್ ಕೈ ಹಿಡಿದಿದ್ದರು. ಲಾಸ್ ವೇಗಾಸ್‌ನಲ್ಲಿ ರಹಸ್ಯವಾಗಿ ಇಬ್ಬರು ಮದುವೆ ಆಗಿದ್ದರು. ನಾಲ್ಕೈದು ವರ್ಷಗಳ ಕಾಲ ಮಗುವಿಗಾಗಿ ದಂಪತಿ ಪ್ರಯತ್ನಿಸಿದರು ಪ್ರಯೋಜನವಾಗಿರಲಿಲ್ಲವಂತೆ. ಈ ವಿಚಾರವನ್ನು ಕೆಲ ವರ್ಷಗಳ ಹಿಂದೆ ಕಾಶ್ಮೀರ ಹೇಳಿಕೊಂಡಿದ್ದರು. ಆಕೆಯ ಹೇಳಿಕೆ ಈಗ ಮತ್ತೆ ವೈರಲ್ ಆಗ್ತಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಕಾಶ್ಮೀರ ಶಾ ಅವಳಿ ಮಕ್ಕಳ ತಾಯಿಯಾದ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. "ಗಂಡ, ಮನೆ, ಮಕ್ಕಳು ಎಂದು ಜೀವನ ಸಾಗಿಸಬೇಕು ಎಂದು ನಾನು ಸಿನಿಮಾಗಳಿಂದ ಬ್ರೇಕ್ ಪಡೆದಿದ್ದೆ. 3 ವರ್ಷಗಳ ಕಾಲ ಗರ್ಭ ಧರಿಸಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಸ್ವಾಭಾವಿಕವಾಗಿ ಗರ್ಭ ಧರಿಸಲು ಸಾಧ್ಯವಾಗದ ಕಾರಣ ಅದು ಕಷ್ಟವಾಗಿತ್ತು. ನನ್ನ ಆರೋಗ್ಯ ಕೈ ಕೊಟ್ಟಿತ್ತು. IVF ಪ್ರಕ್ರಿಯೆಯಲ್ಲಿ ನನ್ನ ದೇಹ ದುರ್ಬಲವಾಗಿತ್ತು."
"ಕೃತಕ ಗರ್ಭಧಾರಣೆಗಾಗಿ 14 ಬಾರಿ IVF ಚುಚ್ಚುಮದ್ದು ಪಡೆದು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಹಾದಿಯಲ್ಲಿ ಸಾಕಷ್ಟು ಸಂಕಷ್ಟ ಎದುರಿಸುವಂತಾಯಿತು. ನಾನು ಬೇಕು ಅಂತಲೇ ಮಕ್ಕಳು ಪಡೆಯುತ್ತಿಲ್ಲ. ಸೌಂದರ್ಯ ಹಾಳಾಗುತ್ತದೆ ಎಂದು ನಾನು ತಾಯಿಯಾಗಲು ಮುಂದಾಗಿಲ್ಲ ಎನ್ನುವ ಆರೋಪಗಳೆಲ್ಲಾ ಕೇಳಿ ಬಂದಿತ್ತು. ಕೊನೆಗೆ ಸಾರೋಗಸಿ ವಿಧಾನದಲ್ಲಿ ಅವಳಿ ಮಕ್ಕಳು ಪಡೆದಿದ್ದಾರೆ" ಕಾಶ್ಮೀರ ಶಾ ಹೇಳಿಕೊಂಡಿದ್ದರು.

ದಂಪತಿಗೆ ನಟ ಸಲ್ಮಾನ್ ಖಾನ್ ಒಳ್ಳೆ ಸಲಹೆ ನೀಡಿದ್ದರಂತೆ. ಸಲ್ಲು ನೀಡಿದ ಆ ಸಲಹೆಯಿಂದ ನಮ್ಮ ಜೀವನವೇ ಬದಲಾಗಿ ಹೋಯಿತು. ಸರೋಗಸಿ ವಿಧಾನದಲ್ಲಿ ಮಗು ಪಡೆಯಲು ಸಲ್ಮಾನ್ ಖಾನ್ ಸಲಹೆ ನೀಡಿದ್ದರಂತೆ. ಆತನ ಸಲಹೆಯಂತೆ ಮದುವೆಯಾಗಿ 4 ವರ್ಷಗಳ ಬಳಿಕ ಕಾಶ್ಮೀರಾ ಹಾಗೂ ಕೃಷ್ಣ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದರು. ಆದರೆ ಕಾಶ್ಮೀರಾ ಶಾ ಗ್ಲಾಮರ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಸಾರೋಗಸಿಗೆ ಮುಂದಾದರೂ ಎಂದು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಅದೆಲ್ಲಾ ಸುಳ್ಳು ಎಂದು ಆಕೆ ಹೇಳಿದ್ದರು.
ನಮ್ಮ ಅವಳಿ ಮಕ್ಕಳಿಗೆ ರಯಾನ್ ಮತ್ತು ಕ್ರಿಶಾಂಕ್ ಎಂದು ಹೆಸರಿಟ್ಟಿದ್ದಾರೆ. ಅವರಿಬ್ಬರು ನಮ್ಮ ಜೀವನಕ್ಕೆ ಸಾಕಷ್ಟು ಸಂತಸ ತಂದರು. ಮಕ್ಕಳು ಬಂದಮೇಲೆ ನಮ್ಮ ಮನೆಯ ಚಿತ್ರಣ ಬದಲಾಗಿದೆ. ಎಲ್ಲಾಕಡೆ ಆಟಿಕೆಗಳನ್ನು ಹಾಕಿಕೊಂಡು ಆಟ ಆಡುತ್ತಿರುತ್ತಾರೆ. ಅದನ್ನು ನೋಡುವುದೇ ಖುಷಿ. ರಯಾನ್ ತಾಯಿಯ ಮುದ್ದಿನ ಮಗನಾದರೆ, ಕ್ರಿಶಾಂಕ್ ತಂದೆಗೆ ಮುದ್ದು. ಇಬ್ಬರು ಮೊದಲ ಬಾರಿಗೆ ಅಪ್ಪ, ಅಮ್ಮ ಎಂದು ಕರೆದಾಗ ಕೇಳುವುದೇ ಬಹಳ ಖುಷಿಯಾಗಿತ್ತು, ಆ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ" ಎಂದಿದ್ದರು.
ಸಲ್ಮಾನ್ ಖಾನ್ ನಟನೆಯ 2 ಸಿನಿಮಾಗಳಲ್ಲಿ ಕಾಶ್ಮೀರ ಶಾ ಬಣ್ಣ ಹಚ್ಚಿದ್ದರು. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ. ಈ ವರ್ಷ ಬಿಗ್‌ಬಾಸ್ 16 ಶೋನಲ್ಲಿ ಕಾಶ್ಮೀರ ಶಾ ವಿಶೇಷ ಅತಿಥಿಯಾಗಿ ಹೋಗಿದ್ದರು. 'ವಾಸ್ತವ್', 'ಹೇರಾ ಪೇರಿ, 'ಜಂಗಲ್', 'ಆಶಿಕ್', 'ಮರ್ಡರ್', 'ಹಾಲಿಡೇ', 'ಸಿಟಿ ಆಫ್ ಗೋಲ್ಡ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications











