Baaghi 4 Trailer; ರಕ್ತಸಿಕ್ತ ಅಧ್ಯಾಯದೊಂದಿಗೆ ಭರವಸೆ ಮೂಡಿಸಿದ ಎ. ಹರ್ಷ
ಕನ್ನಡ ಫಿಲ್ಮ್ ಮೇಕರ್ಸ್ ಒಬ್ಬೊಬ್ಬರಾಗಿ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಸದ್ಯ ಎ. ಹರ್ಷ ನಿರ್ದೇಶನದ 'ಬಾಘಿ- 4' ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಟೈಗರ್ ಶ್ರಾಫ್ ಮತ್ತೊಮ್ಮೆ 'ರೊನಿ' ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇದು ಸೂಪರ್ ಹಿಟ್ 'ಬಾಘಿ' ಸರಣಿಯ ಹೊಸ ಕಥೆ.
ಚಿತ್ರದಲ್ಲಿ ಸಂಜಯ್ ದತ್ ಖಡಕ್ ವಿಲನ್ ಆಗಿ ಅಟ್ಟಹಾಸ ಮೆರೆದಿರುವುದು ಟ್ರೈಲರ್ ಸಾರಿ ಹೇಳ್ತಿದೆ. ಟೈಗರ್ ಶ್ರಾಫ್ ಹಾಗೂ ಸಂಜಯ್ ದತ್ ನಡುವಿನ ಭೀಕರ ಹೋರಾಟವೇ ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಅಂದಹಾಗೆ ಇದೇ ಸೆಪ್ಟೆಂಬರ್ 5, 2025 ರಂದು 'ಬಾಘಿ- 4' ಚಿತ್ರ ತೆರೆಕಾಣಲಿದೆ.

ಟ್ರೇಲರ್ ಆರಂಭದಲ್ಲಿ ಶ್ರಾಫ್ ನೌಕಾಪಡೆಯ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ, ನಂತರ ರಕ್ತಸಿಕ್ತ ಅಧ್ಯಾಯ ಬರೆಯಲು ಆರಂಭಿಸುತ್ತಾರೆ. ಪ್ರೀತಿ, ಸೇಡು ಮತ್ತು ಹಿಂಸೆಯ ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ನಾಯಕ ಮತ್ತು ಖಳನಾಯಕ ಇಬ್ಬರೂ ಭಗ್ನ ಪ್ರೇಮಿಗಳಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಅವರ ಹಿಂದಿನ ಕಥೆ ಏನು ಎನ್ನುವುದು ತೆರೆಮೇಲೆ ಗೊತ್ತಾಗಲಿದೆ.
'ಬಾಘಿ' ಸರಣಿನಲ್ಲಿ ಸಂಜಯ್ ದತ್ ನಟಿಸುವುದು ಇದೇ ಮೊದಲು. ಆದರೆ ಬಹಳ ಕ್ರೂರಿಯ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. 3 ನಿಮಿಷ 41 ಸೆಕೆಂಡುಗಳ ಆಕ್ಷನ್-ಪ್ಯಾಕ್ಡ್ ಟ್ರೇಲರ್ ರಕ್ತಪಾತ ಮತ್ತು ಹೈವೋಲ್ಟೇಜ್ ಆಕ್ಷನ್ ಸನ್ನಿವೇಶಗಳಿಗೆ ತುಂಬಿದೆ. ಹರ್ನಾಜ್ ಸಂಧು ಮತ್ತು ಸೋನಮ್ ಬಾಜ್ವಾ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಗರ್ ಶ್ರಾಫ್ ಜೋಡಿಯಾಗಿ ಸಂಧು ಮಿಂಚಿದ್ದಾರೆ. ಬಾಜ್ವಾ ಪಾತ್ರಕ್ಕೂ ಬಹಳ ಮಹತ್ವ ಇದೆ.
ಶ್ರೇಯಸ್ ತಲ್ಪಾಡೆ, ಸೌರಭ್ ಸಚ್‌ದೇವ ಮತ್ತು ಉಪೇಂದ್ರ ಲಿಮಯೆ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿಸ್ ಯೂನಿವರ್ಸ್ 2021 ವಿಜೇತೆ ಹರ್ನಾಜ್ ಸಂಧು 'ಬಾಘಿ- 4' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಹಿಂಸಾತ್ಮಕ ಸನ್ನಿವೇಶಗಳು ಚಿತ್ರದಲ್ಲಿ ಹೆಚ್ಚಾಗಿದೆ. ಹಾಗಾಗಿ CBFC 'ಬಾಘಿ -4' ಚಿತ್ರಕ್ಕೆ ಮುಲಾಜಿಲ್ಲದೇ 'ಎ' ಸರ್ಟಿಫಿಕೇಟ್ ನೀಡಿದೆ. ಚಿತ್ರದ 'ಗುಜಾರಾ', 'ಬಾಹ್ಲಿ ಸೋಹ್ನಿ' ಮತ್ತು 'ಅಕೇಲಿ ಲೈಲಾ' ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.
ಈ ಹಿಂದೆ ಬಂದಿದ್ದ ಟೀಸರ್ ಕೂಡ ಮೈ ಜುಮ್ ಎನಿಸುವಂತಿತ್ತು. ನಾದಿಯದ್ವಾಲಾ ಗ್ರ್ಯಾಂಡ್‌ಸನ್ಸ್ ಸಂಸ್ಥೆ 'ಬಾಘಿ- 4' ಚಿತ್ರವನ್ನು ನಿರ್ಮಿಸಿದೆ. ಸಜಿತ್ ನಾದಿಯದ್ವಾಲಾ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಕನ್ನಡ ನಿರ್ದೇಶಕ ಈ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟು ಹರ್ಷ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದರು.
ಕನ್ನಡ ಬಳಿಕ ತೆಲುಗಿನ 'ಭೀಮ' ಎಂಬ ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳಿದ್ದರು. ಆ ಚಿತ್ರದ ಬಗ್ಗೆಯೂ ಒಳ್ಳೆ ಮಾತುಗಳು ಕೇಳಿಬಂದಿತ್ತು. ಅದರ ಬೆನ್ನಲ್ಲೇ 'ಬಾಘಿ- 4' ಸಿನಿಮಾ ನಿರ್ದೇಶನ ಜವಾಬ್ದಾರಿ ಸಿಕ್ಕಿತ್ತು. ಕಳೆದೊಂದು ವರ್ಷದಿಂದ ಹರ್ಷ ಮುಂಬೈನಲ್ಲೇ ಬೀಡುಬಿಟ್ಟಿದ್ದಾರೆ. ಮೊದಲ ಬಾಲಿವುಡ್ ಪ್ರಯತ್ನದಲ್ಲೇ ದೊಡ್ಡ ಅವಕಾಶ ಸಿಕ್ಕಿದೆ. ದೊಡ್ಡ ತಾರಾಗಣ, ಭಾರೀ ಬಜೆಟ್ ಸಿನಿಮಾ ಇದಾಗಿದೆ. ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದ್ದು ಸಿನಿಮಾ ಕೂಡ ಗೆಲ್ಲುವ ಸಾಧ್ಯತೆಯಿದೆ.


Click it and Unblock the Notifications











