'ಧುರಂಧರ್ 2' ಅತ್ಯಮೋಘ ಗೆಲುವು ; ಯಶ್ 'ಟಾಕ್ಸಿಕ್'ಗೆ ತಿರುಪತಿ ತಿಮ್ಮಪ್ಪನೇ ಗತಿ - ರಾಮ್ ಗೋಪಾಲ್ ವರ್ಮಾ ವ್ಯಂಗ್ಯ
ಒಂದು ಕಾಲದಲ್ಲಿ ತಮ್ಮ ನಿರ್ದೇಶನದ ಚಿತ್ರಗಳು ಮಾತನಾಡುವಂತೆ ಮಾಡುತ್ತಿದ್ದವರು ರಾಮ್ ಗೋಪಾಲ್ ವರ್ಮಾ. ಆದರೆ. ಆ ನಂತರ ರಾಮ್ ಗೋಪಾಲ್ ವರ್ಮಾ ಸಿನಿಮಾ ಆಸಕ್ತಿ ಕಡಿಮೆಯಾಯ್ತು. ಒಳ್ಳೆ ಚಿತ್ರಗಳನ್ನು ಮಾಡುವುದನ್ನು ಮರೆತು ಮಾತನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಶುರು ಮಾಡಿದರು. ಸದಾ ಕಾಲ ಯಾವದಾದರೂ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾದರು. ಕೆಲಸಕ್ಕೆ ಬಾರದ್ದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೋಲ್ ಆಗಲು ಶುರುವಾದರು.
ಇಂಥಾ ರಾಮ್ ಗೋಪಾಲ್ ವರ್ಮಾಗೆ ಅದ್ಯಾಕೋ ಮೊದಲಿಂದ ಯಶ್ ಅಂದರೆ ಹೊಟ್ಟೆಯುರಿ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಿಂದೆ "ಕೆಜಿಎಫ್2 ಸಿನಿಮಾ ಯಾರಿಗೂ ಇಷ್ಟವಾಗಲಿಲ್ಲ ಎಂದು ಹೇಳಿ ರಾಕಿ ಸೈನ್ಯವನ್ನು ವರ್ಮಾ ಕೆಣಕಿದ್ದರು. ''ಕೆಜಿಎಫ್ 2'' ಚಿತ್ರವನ್ನು ನನ್ನ ಕೈಯಲ್ಲಿ 15 ನಿಮಿಷ ಸಹ ನೋಡೋಕೆ ಆಗಲಿಲ್ಲ ಎಂದು ಖ್ಯಾತ ನಿರ್ದೇಶಕರೊಬ್ಬರು ಫೋನ್ ಮಾಡಿ ಹೇಳಿದರು ಎಂದು ಹೇಳಿದ್ದರು.

ಇನ್ನೂ ಈ ಹಿಂದೆ ''ಧುರಂಧರ್-2'' ಮತ್ತು ''ಟಾಕ್ಸಿಕ್'' ಮುಖಾಮುಖಿಯಾಗುವ ಸುದ್ದಿ ಹೊರ ಬಂದಾಗ ಕೂಡ ಆರ್ ಜಿ ವಿ ವ್ಯಂಗ್ಯವಾಡಿದ್ದರು. ''ಧುರಂಧರ್'' ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ''ಟಾಕ್ಸಿಕ್'' ಜನರ ಮೂರ್ಖತನವನ್ನು ಊಹಿಸುತ್ತದೆ. ''ಕೆಜಿಎಫ್ 2'' ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ''ಧುರಂಧರ್'' ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು ಎಂದಿದ್ದರು.
ಇಷ್ಟೇ ಅಲ್ಲ ''ಧುರಂಧರ್ 2'' ಟೀಸರ್ ಹಂಚಿಕೊಂಡಿದ್ದ ರಾಮು ಇದು ಸೇಡು ತೀರಿಸಿಕೊಳ್ಳುವ ಮಾತಲ್ಲ, ಇದು ಆದಿತ್ಯ ಧರ್ ಅವರ ಕೋಪ. ಅವರ ದಾರಿಯಲ್ಲಿ ಬರುವವರ ಬಗ್ಗೆ ನನಗೆ ವಿಷಾದವಿದೆ. RIP (ಶಾಂತಿ ಸಿಗಲಿ) ಎಂದು ಪೋಸ್ಟ್ ಮಾಡಿದ್ದರು. ಈ ಮೂಲಕ ಯಶ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು.
ಯಶ್ ಅಭಿಮಾನಿಗಳ ದುರಾದೃಷ್ಟ ಮಾರ್ಚ್ 19ರ ರಣಕಣದಿಂದ ಯಶ್ ಕೊನೆ ಕ್ಷಣದಲ್ಲಿ ಹಿಂದೆ ಸರಿದರು. ಇದರಿಂದ ರಾಮ್ ಗೋಪಾಲ್ ವರ್ಮಾ ಸೇರಿ ಆಡಿಕೊಳ್ಳೋರಿಗೆ ಇನ್ನೂ ಬಲ ಬಂದತಾಯ್ತು. ಹಲವರು ಇದೇ ವಿಚಾರವನ್ನು ಹಿಡಿದುಕೊಂಡು ಯಶ್ ಅವರನ್ನು ಟ್ರೋಲ್ ಕೂಡ ಮಾಡಿದರು.
ಸದ್ಯ ''ಧುರಂಧರ್ 2'' ಬಿಡುಗಡೆಯಾಗಿದೆ. ದೇಶದೆಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ. ಹೀಗಿರುವಾಗ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಯಶ್ ಮತ್ತು ಯಶ್ ಅಭಿಮಾನಿಗಳನ್ನು ಮಾತ್ರವಲ್ಲದೇ ಕನ್ನಡಿಗರನ್ನು ಕೆಣಕಿದ್ದಾರೆ.

''ಎನ್‌ಡಿಟಿವಿ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, "ಧುರಂಧರ್ 2''ದ ಈ ಗೆಲುವಿಂದ ದಕ್ಷಿಣದವರಿಗೆ ಕಿರಿಕಿರಿಯಾಗಿದೆ ಅನ್ನೋದು ಸರಿಯಲ್ಲ, ಆದರೆ ಅವರಿಗೆ ಇದು ಖಂಡಿತ ಇಷ್ಟವಾಗಿಲ್ಲ ಎಂದು ಹೇಳಿದ್ಧಾರೆ.
ಮುಂದುವರೆದು ಈಗ ದಕ್ಷಿಣದ ಮಂದಿಯೆಲ್ಲಾ ಗುಂಪು ಗುಂಪಾಗಿ ಅನಿವಾರ್ಯವಾಗಿ ತಿರುಪತಿ ಅಥವಾ ವೈಷ್ಣೋದೇವಿಗೆ ಹೋಗಿ ಪ್ರಾರ್ಥನೆ ಮಾಡಬೇಕು ಎಂದು ಹೇಳಿರುವ ರಾಮ್ ಗೋಪಾಲ್ ವರ್ಮಾ, ''ಧುರಂಧರ್'' ದಾಖಲೆಯನ್ನು ಮುರಿಯಬೇಕಂದ್ರೆ ದೇವರೆ ಈಗ ಅವರಿಗೆ ಆಧಾರ, ಪವಾಡಗಳೇ ಏಕೈಕ ಲೈಫ್‌ಲೈನ್ ಎಂದು ಹೇಳಿದ್ದಾರೆ. ಯಶ್ ಅವರ ''ಟಾಕ್ಸಿಕ್'' ಸಿನಿಮಾ ''ಧುರಂಧರ್''ನ ರೆಕಾರ್ಡ್ ಧೂಳಿಪಟ ಮಾಡಲಿ ಎಂದು ಎಲ್ಲರೂ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೇವಲ ತೆಂಗಿನಕಾಯಿ ಒಡೆಯುವುದರಿಂದ ಅಥವಾ ಹರಕೆ ಹೊರುವುದರಿಂದ ''ಧುರಂಧರ್'' ದಾಖಲೆ ಮುರಿಯಲು ಸಾಧ್ಯವಿಲ್ಲ, ಬದಲಿಗೆ ''ಧುರಂಧರ್'' ಚಿತ್ರದಂತೆಯೇ ಗಟ್ಟಿಯಾದ ಕಥಾವಸ್ತು ಇರಬೇಕು ಎಂದು ಕೂಡ ವರ್ಮಾ ಇದೇ ವೇಳೆ ಹೇಳಿದ್ದಾರೆ. ಈ ಮೂಲಕ ''ಟಾಕ್ಸಿಕ್'' ಕುರಿತು ವರ್ಮಾ ಇನ್ನೊಮ್ಮೆ ಕುಹುಕದ ಮಾತುಗಳನ್ನಾಡಿದ್ದಾರೆ. ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


Click it and Unblock the Notifications











