ಪಾರ್ಕಿಂಗ್ ವಿಚಾರಕ್ಕೆ ಕಿರಿಕ್; 'ಟಾಕ್ಸಿಕ್' ಚಿತ್ರನಟಿ ಸಹೋದರನ ಹತ್ಯೆ, ವೀಡಿಯೋ
ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿ ಆಸಿಫ್ ಖುರೇಶಿ ಹತ್ಯೆ ನಡೆದಿದೆ. ಗುರುವಾರ(ಆಗಸ್ಟ್ 7) ರಾತ್ರಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ನಿವಾಸದ ಈ ಘಟನೆ ನಡೆದಿದೆ. ಪಾರ್ಕಿಂಗ್ ಜಾಗದ ವಿಚಾರಕ್ಕೆ ಜಗಳ ನಡೆದ ಚೂಪಾದ ಆಯುಧಗಳಿಂದ ಇಬ್ಬರು ಯುವಕರು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಆಸಿಫ್ ಖುರೇಷಿ ಹಾಗೂ ಆರೋಪಿಗಳ ನಡುವೆ ಪಾರ್ಕಿಂಗ್ ಜಾಗದ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಅದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ನಿಮ್ಮ ದ್ವಿಚಕ್ರ ವಾಹನಗಳನ್ನು ತನ್ನ ಮನೆಯಿಂದ ದೂರ ನಿಲ್ಲಿಸಿದ ಎಂದು ಆಸಿಫ್ ಯುವಕರಿಗೆ ಹೇಳಿದ್ದಾರೆ. ಇದೇ ಕಾರಣಕ್ಕೆ ಜಗಳ ಶುರುವಾಗಿದೆ. ಮೊದಲಿಗೆ ಹೊರಟು ಹೋದ ಯುವಕರು ಮತ್ತೆ ಬಂದು ಜಗಳ ಮಾಡಿ ಆಸಿಫ್‌ನನ್ನು ಕೊಂದಿರುವುದಾಗಿದೆ NDTV ವರದಿ ಮಾಡಿದೆ.

ದೆಹಲಿಯಲ್ಲಿ ಆಸಿಫ್ ಖುರೇಷಿ ಕೋಳಿ ಮಾಂಸದ ವ್ಯಾಪಾರ ನಡೆಸುತ್ತಿದ್ದರು. ಇಬ್ಬರು ಪತ್ನಿಯರನ್ನು ಅವರು ಅಗಲಿದ್ದಾರೆ. ಈ ಹಿಂದೆ ಕೂಡ ಪಾರ್ಕಿಂಗ್ ವಿಚಾರಕ್ಕೆ ನೆರೆಹೊರೆಯ ಮನೆಯವರ ಜೊತೆ ಜಗಳವಾಗಿತ್ತು ಎಂದು ಪತ್ನಿ ಶಾಹೀನ್ ಹೇಳಿದ್ದಾರೆ. "10 ಗಂಟೆ ಸುಮಾರಿಗೆ ನೆರೆಹೊರೆಯವರು ನಮ್ಮ ಮನೆ ಮುಂದೆ ಸ್ಕೂಟರ್ ನಿಲ್ಲಿಸಿದ್ದರು. ನಮ್ಮ ಪತಿ ಆಸಿಫ್ ತೆಗೆಯುವಂತೆ ಮನವಿ ಮಾಡಿದ್ದರು. ಆ ವ್ಯಕ್ತಿ ನಮ್ಮ ಪತಿಗೆ ಬೈದು ಬೆದರಿಕೆ ಹಾಕಿದ. ಬಳಿಕ ಆ ವ್ಯಕ್ತಿ ತನ್ನ ಸಹೋದರನ ಜೊತೆ ಬಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ. ನನ್ನ ಸೋದರ ಸಂಬಂಧಿ ಜಾವೇದ್‌ಗೆ ಕರೆ ಮಾಡಿ ಕರೆದ. ಆತ ಬರುವಷ್ಟರಲ್ಲಿ ಆಸಿಫ್ ಜೀವ ಬಿಟ್ಟಿದ್ರು" ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ನಟಿ ಹುಮಾ ಖುರೇಷಿ ತಂದೆ ಸಲೀಮ್ ಖುರೇಶಿ ಪ್ರತಿಕ್ರಿಯಿಸಿ "ಇಬ್ಬರು ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿದರು. ಪ್ರವೇಶದ್ವಾರ ನಿರ್ಬಂಧಿಸದೇ ಸ್ಕೂಟರ್ ತೆಗೆಯುವಂತೆ ಆಸಿಫ್ ಕೇಳಿಕೊಂಡಿದ್ದಾನೆ. ಮಾತಿನ ಚಕಮಕಿಯಾಗಿ ಬಳಿಕ ಹೊಡೆದಾಟವಾಗಿದೆ. ಅವರು ಇಬ್ಬರು ಸೇರಿ ನನ್ನ ಸೋದರಳಿಯನನ್ನು ಕೊಂದರು" ಎಂದು ಮಾಹಿತಿ ನೀಡಿದ್ದಾರೆ.
ಸೋದರ ಸಂಬಂಧಿ ಹತ್ಯೆಯ ಬಗ್ಗೆ ನಟಿ ಹುಮಾ ಖುರೇಷಿ ಇನ್ನು ಪ್ರತಿಕ್ರಿಯಿಸಿಲ್ಲ. ಬಾಲಿವುಡ್ ಸಿನಿಮಾಗಳಲ್ಲಿ ಆಕೆ ಹೆಚ್ಚು ನಟಿಸಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ ಎನ್ನಲಾಗ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ ಮೂಲಕ ಹುಮಾ ಖುರೇಷಿ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ಫುಟೇಜ್ ವೈರಲ್ ಆಗುತ್ತಿದೆ. ಆಸಿಫ್ ಮೇಲೆ ಹಲ್ಲೆ ನಡೆಸಿರುವುದನ್ನು ಅದರಲ್ಲಿ ನೋಡಬಹುದು. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) ಮತ್ತು 3(5) ರ ಅಡಿಯಲ್ಲಿ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರಸ್ತೆಯಲ್ಲಿ ನೆಲೆಸಿರುವ ಉಜ್ವಲ್ (19) ಮತ್ತು ಗೌತಮ್ (18) ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಾರ್ಕಿಂಗ್ ವಿಚಾರವಾಗಿಯೇ ಆರೋಪಿಗಳು ಆಸಿಫ್ ಜೊತೆ ಈ ಹಿಂದೆ ಗಲಾಟೆ ಮಾಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


Click it and Unblock the Notifications











