ಟಾಕ್ಸಿಕ್ ತೂಫಾನ್ ; ಯಶ್ ಎದುರು ನಿಲ್ಲುವ ಧೈರ್ಯ ಮಾಡದ ಬಾಲಿವುಡ್- 'ರಾಯ'ಗೆ ಹೆದರಿ ಜಾಗ ಖಾಲಿ ಮಾಡಿದ ವರುಣ್ ಧವನ್
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು.
ಹಬ್ಬ-ಹರಿದಿನಗಳಂತೂ ಬರೀ ಈ ಬೇರೆ ಭಾಷೆಯ ಸ್ಟಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇವತ್ತು ಕೂಡ ಪರಭಾಷೆ ಚಿತ್ರಗಳ ಅಬ್ಬರ ಕರುನಾಡಿನಲ್ಲಿ ಇದ್ದೇ ಇದೆ. ಹಲವರು ಈಗಲೂ ಕೂಡ ತಮ್ಮ ಚಿತ್ರಗಳನ್ನು ಬೇರೆ ಭಾಷೆಯ ದೊಡ್ಡ ಸ್ಟಾರ್‌ಗಳ ಎದುರು ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಾರೆ.

ಆದರೆ .. ಈಗೀಗ ಬದಲಾದ ಕಾಲದಲ್ಲಿ ಕನ್ನಡದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಪರಭಾಷೆಯ ಚಿತ್ರಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾಕ್ಸಾಫೀಸ್ ಸಮರದಲ್ಲಿ ಮಣ್ಣನ್ನೂ ಕೂಡ ಮುಕ್ಕಿಸಿದ್ದಾರೆ. ಹೀಗಾಗಿ ಕನ್ನಡದ ಸ್ಟಾರ್‌ಗಳ ಎದುರು ಬರಲು ಪರಭಾಷೆಯ ಸ್ಟಾರ್‌ಗಳು ಕೂಡ ಈಗ ಕವಡೆ ಹಾಕುತ್ತಿದ್ದಾರೆ. ಹೆದರುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ವರುಣ್ ಧವನ್ ಬಾಕ್ಸಾಫೀಸ್ ಸಮರದಲ್ಲಿ ಯಶ್ ವಿರುದ್ಧ ಸೆಣಸಲು ಹಿಂದೇಟು ಹಾಕಿದ್ದಾರೆ. ಕಣದಿಂದ ಹಿಂದೆ ಸರಿದಿದ್ದಾರೆ.
ಹೌದು, ಅಸಲಿಗೆ ವರುಣ್ ಧವನ್ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ಹೈ ಜವಾನಿ ತೋ ಇಷ್ಕ್ ಹೋನಾ ಹೈ''. ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಮತ್ತು ವರುಣ್ ಧವನ್ ಅವರ ತಂದೆ ಡೆವಿಡ್ ಧವನ್ ನಿರ್ದೇಶನದ ಚಿತ್ರ ಇದು. ರಮೇಶ್ ತೌರಾನಿ ನಿರ್ಮಾಣದಡಿ ಸಿದ್ದವಾದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಜೆಮ್ಮಿ ಶೆರ್ಗಿಲ್, ಚಂಕಿ ಪಾಂಡೆ, ಮತ್ತು ಮೌನಿ ರಾಯ್ ಕೂಡ ಚಿತ್ರದಲ್ಲಿದ್ದಾರೆ.
ಇಂತಹ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಜೂನ್ 5ರಂದು ಬಿಡುಗಡೆಯಾಗಬೇಕಿತ್ತು. ಕಳೆದ ವರ್ಷ ಅಕ್ಟೋಬರ್ 31ರಂದೇ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು ಕೂಡ.
ಆದರೆ, ಎಲ್ಲರಿಗೆ ಗೊತ್ತಿರುವಂತೆ ''ಮಾರ್ಚ್ 19''ರಂದು ಬರುವುದಾಗಿ ಹೇಳಿದ್ದ ಯಶ್, ಕೊನೆ ಕ್ಷಣದಲ್ಲಿ ತಮ್ಮ ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಿದರು. ಮಾರ್ಚ್ 19ರ ಬದಲು ''ಟಾಕ್ಸಿಕ್'' ಜೂನ್ 4ರಂದು ಬಿಡುಗಡೆಯಾಗಲಿದೆ ಎಂದು ಹೇಳಿದರು.

ವರುಣ್ ಧವನ್ ಆಗಲಿ, ಡೆವಿಡ್ ಧವನ್ ಆಗಲಿ ಅಥವಾ ಬಾಲಿವುಡ್ ಪಂಡಿತರೇ ಆಗಲಿ, ಯಶ್ ಅವರಿಂದ ಈ ಬದಲಾವಣೆಯ ಪರ್ವ ನಿರೀಕ್ಷೆ ಮಾಡಿರಲಿಲ್ಲ. ಇನ್ನೂ ''ಕೆಜಿಎಫ್'' ನಂತರ ಯಶ್ ಕ್ರೇಜ್ ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ.
ಹೀಗಾಗಿ ಆಘಾತಕ್ಕೀಡಾದ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಯಶ್ ಮನವೊಲಿಸುವ ಪ್ರಯತ್ನ ಮಾಡಿತ್ತು ಎನ್ನುವ ಸುದ್ದಿ ಇದೆ. ಸಾಧ್ಯವಾಗದೇ ಇದ್ದಾಗ ತಾವೇ ಮನ ಪರಿವರ್ತನೆ ಮಾಡಿಕೊಂಡು ಸದ್ಯ ತಮ್ಮ ಚಿತ್ರವನ್ನು ಮುಂದೂಡಿದ್ದಾರೆ.
ಈಗ ಜೂನ್ 5ರಂದು ಬಿಡುಗಡೆಯಾಗಬೇಕಿದ್ದ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಒಂದು ವಾರ ಮುಂದೂಡಲ್ಪಟ್ಟಿದೆ. ಚಿತ್ರತಂಡ ಅಧಿಕೃತವಾಗಿ ಹೇಳಿರುವಂತೆ ಜೂನ್ 5ರ ಬದಲು ಜೂನ್ 12ರಂದು ಚಿತ್ರ ತೆರೆಗೆ ಬರಲಿದೆ.
ಒಟ್ನಲ್ಲಿ ಕನ್ನಡದ ಹುಡುಗ ಯಶ್‌ಗೆ ಬಾಲಿವುಡ್ ಸದ್ಯ ಹೆದರಿದೆ. ''ಟಾಕ್ಸಿಕ್'' ಎದುರು ಬಂದರೆ ಮಕಾಡೆ ಮಲಗುವ ಭಯದಿಂದ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರದ ಬಿಡುಗಡೆಯನ್ನು ಮುಂದೂಡಿದೆ. ಸದ್ಯ ಜೂನ್ 4ರ ಮೈದಾನ ಖಾಲಿ ಇದ್ದು ಅವತ್ತು ''ಟಾಕ್ಸಿಕ್'' ಮಾತ್ರ ಬಿಡುಗಡೆಯಾಗಲಿದೆ. ಮುಂದೆ ಸವಾಲು ಹಾಕುವ ಧೈರ್ಯವನ್ನು ಯಾರಾದರೂ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











