ಟಾಕ್ಸಿಕ್ ಎಫೆಕ್ಟ್ ; ಯಶ್‌ಗೆ ಹೆದರಿ 'ಈದ್' ರೇಸ್‌ದಿಂದ ಹಿಂದೆ ಸರಿದ ಸಲ್ಮಾನ್ ಖಾನ್ ?
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು.
ಹಬ್ಬ-ಹರಿದಿನಗಳಂತೂ ಬರೀ ಈ ಬೇರೆ ಭಾಷೆಯ ಸ್ಟಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇವತ್ತು ಕೂಡ ಪರಭಾಷೆ ಚಿತ್ರಗಳ ಅಬ್ಬರ ಕರುನಾಡಿನಲ್ಲಿ ಇದ್ದೇ ಇದೆ. ಹಲವರು ಈಗಲೂ ಕೂಡ ತಮ್ಮ ಚಿತ್ರಗಳನ್ನು ಬೇರೆ ಭಾಷೆಯ ಸ್ಟಾರ್‌ಗಳ ಎದುರು ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಾರೆ.

ಇನ್ನು.. ಮಲ್ಟಿಪ್ಲೆಕ್ಸ್‌ನವರ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ. ಇಲ್ಲಿಯ ಅನ್ನ ತಿಂದು.. ಇಲ್ಲಿಯ ವಾತಾವರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಇವರಿಗೆ ಕನ್ನಡಕ್ಕಿಂತ ಬೇರೆ ಚಿತ್ರಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಹೀಗಿರುವಾಗ ಕನ್ನಡದ ಚಿತ್ರವೊಂದಕ್ಕೆ ಹೆದರಿ ಬಾಲಿವುಡ್‌ನ ಬ್ಯಾಡ್ ಬಾಯ್ .. ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ .. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೂಡಿದ್ದಾರೆ ಎನ್ನುವ ಸುದ್ದಿ ಸದ್ಯ ತೂರಿಕೊಂಡು ಬಂದಿದೆ.
ಹೌದು, ಅಸಲಿಗೆ ಸಲ್ಮಾನ್ ಖಾನ್ ಮತ್ತು ಈದ್ ಹಬ್ಬದ ನಡುವೆ ವಿಶೇಷವಾದ ಸಂಬಂಧ ಇದೆ. ಈ ಹಬ್ಬದಂದು ತೆರೆಗೆ ಬಂದ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳು ಸೋಲನ್ನು ಕಂಡಿದ್ದು ತುಂಬಾನೇ ವಿರಳ. 'ಸಿಕಂದರ್' ಸೇರಿ ಕೆಲ ಚಿತ್ರಗಳಷ್ಟೇ ಸೋಲನ್ನು ಕಂಡಿವೆ. ಆದರೂ ಕೂಡ ಈದ್ ಸಲ್ಮಾನ್ ಖಾನ್ ಪಾಲಿಗೆ ತುಂಬಾ ಲಕ್ಕಿ ಎಂದೇ ಬಾಲಿವುಡ್ ಮಾತನಾಡಿಕೊಳ್ಳುತ್ತೆ. ಸಲ್ಮಾನ್ ಖಾನ್ ಕೂಡ ಈ ಮಾತನ್ನು ನಂಬುತ್ತಾರೆ.
ಆದರೆ.. ಈ ಬಾರಿ ಸಲ್ಮಾನ್ ಖಾನ್‌ಗೆ ಕೂಡ ತಮ್ಮ ಮೇಲೆ ನಂಬಿಕೆ ಇದ್ದಂತೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸಲ್ಮಾನ್ ಖಾನ್ ಈ ಬಾರಿ ಈದ್ ಹಬ್ಬದಂದು ತಮ್ಮ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರವನ್ನು ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ಸಲ್ಮಾನ್ ಖಾನ್ ಅವರ ನಿರ್ಧಾರದ ಹಿಂದೆ ಯಶ್ ನೆರಳು ಸದ್ಯ ಕಂಡು ಬರುತ್ತಿದೆ.

ಹೌದು, ಕನ್ನಡ ಚಿತ್ರರಂಗದ ನಿಮ್ಮ ಯಶ್, ದಿಸ್ ಇಸ್ ಯಶ್ ಎಂದು ಬೆಳೆದಿರುವ ಕಥೆ ಎಲ್ಲರಿಗೆ ಗೊತ್ತಿರುವುದೇ. ಸದ್ಯ.. ಟಾಕ್ಸಿಕ್ ಚಿತ್ರದ ಗುಂಗಿನಲ್ಲಿರುವ ಯಶ್ ತಮ್ಮ ಈ ಚಿತ್ರವನ್ನು 2026ರ ಈದ್ ಹಬ್ಬದಂದು ಅಂದರೆ ಮಾರ್ಚ್ 19ರಂದು ಬಿಡುಗಡೆ ಮಾಡುತ್ತಿದ್ಧಾರೆ. ಇನ್ನು ಟಾಕ್ಸಿಕ್ ಕೇವಲ ಕನ್ನಡ ಚಿತ್ರವಲ್ಲ.. ಪ್ಯಾನ್ ಇಂಡಿಯಾ ಚಿತ್ರ ಅಲ್ಲ. ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ.
ಭಾಷೆಯ ಭೇದ ಭಾವ ಇಲ್ಲದೇ ಈಗಾಗಲೇ ಈ ಚಿತ್ರಕ್ಕೋಸ್ಕರ ಅಸಂಖ್ಯಾತ ಚಿತ್ರಪ್ರೇಮಿಗಳು ಕಾಯುತ್ತಿದ್ಧಾರೆ. ಇನ್ನು ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಟಾಕ್ ಆಫ್ ದಿ ಟೌನ್ ಆಗಿತ್ತು. ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚು ಮಾಡಿತ್ತು. ಹೀಗಾಗಿ ಟಾಕ್ಸಿಕ್ ಚಿತ್ರದ ಎದುರು ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಸಲ್ಮಾನ್ ಹಿಂದೇಟು ಹಾಕುತ್ತಿದ್ದಾರಾ ಎನ್ನುವ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.
ಇನ್ನು ಇದೇ ಯಶ್ ಎದುರು ಶಾರುಖ್ ಖಾನ್ ತಮ್ಮ ಝೀರೋ ಚಿತ್ರ ಬಿಡುಗಡೆ ಮಾಡಿದಾಗ ಸಿಕ್ಕ ಫಲಿತಾಂಶವನ್ನು ಬಾಲಿವುಡ್ ಇನ್ನೂ ಮರೆತಿಲ್ಲ. ಸಲ್ಮಾನ್ ಖಾನ್ ಮುಂದಡಿ ಇಡುವುದಕ್ಕೆ ಇದು ಕೂಡ ಒಂದು ಕಾರಣ ಇದ್ದರು ಇರಬಹುದು ಎನ್ನುವುದು ಅನೇಕರ ಅಭಿಪ್ರಾಯ.

ಆದರೆ.. ಇದಕ್ಕೆ ಸಲ್ಮಾನ್ ಖಾನ್ ಮತ್ತು ತಂಡ ಕೊಡುತ್ತಿರುವ ಸಬೂಬು ಬೇರೆ. ಅವರು ಹೇಳುವಂತೆ ಜನವರಿಗೆಲ್ಲಾ ಚಿತ್ರ ಬಿಡುಗಡೆ ಮಾಡುವ ತಾಖತ್ತು ಅವರಿಗಿದೆ. ಆದರೆ.. ಅದಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂದುಕೊಂಡಂತೆ ವೇಗವಾಗಿ ನಡೆಯಬೇಕು. ಇನ್ನು.. ಈದ್ ಹಬ್ಬಕ್ಕೆ ಕೇವಲ ಟಾಕ್ಸಿಕ್ ಮಾತ್ರವಲ್ಲ ರಣ್ಭೀರ್ ಕಪೂರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಜೋಡಿಯ ಲವ್ & ವಾರ್ ಕೂಡ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ವ್ಯಾಪಾರದ ದೃಷ್ಟಿಯಿಂದ ಮುಂದಕ್ಕೋಗುವುದು ಉತ್ತಮ ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಇನ್ನು ಈದ್ ಹಬ್ಬಕ್ಕೆ ಬಿಡುಗಡೆ ಮಾಡದಿದ್ದರೂ ಬಕ್ರಿದ್ ಹಬ್ಬಕ್ಕಾದರೂ ಬಿಡುಗಡೆ ಮಾಡಬಹುದು. ಆದರೆ.. ಆಗ ಐಪಿಎಲ್ ತನ್ನ ಕೊನೆಯ ಹಂತಕ್ಕೆ ತಲುಪಿರುತ್ತೆ. ಹೀಗಾಗಿ ಚಿತ್ರವನ್ನು ಜೂನ್‌ಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ ಎಂದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.
ಒಟ್ನಲ್ಲಿ ಸದ್ಯ ಈ ಬಾರಿಯ ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಈ ಹಿನ್ನೆಲೆ.. ಸಲ್ಮಾನ್ ಖಾನ್ ಕನ್ನಡದ ರಾಕಿ ಯಶ್‌ಗೆ ಹೆದರಿದರಾ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಈಗ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ ಟಾಕ್ಸಿಕ್ ಮತ್ತು 'ಬ್ಯಾಟಲ್ ಆಫ್ ಗಲ್ವಾನ್' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











