'ಟಾಕ್ಸಿಕ್' vs 'ಧುರಂಧರ್'-2 ಬಾಕ್ಸಾಫೀಸ್ ಫೈಟ್; ಯಶ್ ಅಭಿಮಾನಿಗಳನ್ನು ಕೆಣಕಿದ ಆರ್‌ಜಿವಿ
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಏನು ಹೊಸದಲ್ಲ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಎರಡೂ ಚಿತ್ರಗಳಿಗೆ ಹಿನ್ನಡೆ ಆಗುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಬಾರಿ ಈದ್ ಸಂಭ್ರಮದಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಚಿತ್ರಗಳು ಬಿಡುಗಡೆ ಆಗುತ್ತಿರುವುದು ಕುತೂಹಲ ಮೂಡಿಸಿದೆ.
ಬಹಳ ಹಿಂದೆಯೇ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಎಂದು 'ಟಾಕ್ಸಿಕ್' ಚಿತ್ರತಂಡ ಘೋಷಿಸಿತ್ತು. ಹಾಗಾಗಿ ಆ ದಿನ ಬೇರೆ ಯಾವುದೇ ಸಿನಿಮಾ ಬಿಡುಗಡೆಗೆ ಯಾರೂ ಮನಸ್ಸು ಮಾಡಲಿಲ್ಲ. 'ಲವ್ ಅಂಡ್ ವಾರ್' ಸಿನಿಮಾ ರಿಲೀಸ್ ಡೇಟ್ ಕೂಡ ಮುಂದೂಡಲಾಗಿತ್ತು. ಆದರೆ ದಿಢೀರನೆ ಅದೇ ದಿನ 'ಧುರಂಧರ್'-2 ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದಾರೆ. ಇದು ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಕಾರಣವಾಗ್ತಿದೆ. ಈ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.

'ಟಾಕ್ಸಿಕ್' ಹಾಗೂ 'ಧುರಂಧರ್'-2 ಎರಡೂ ಕೂಡ ದೊಡ್ಡ ಸಿನಿಮಾಗಳೇ. 'KGF'-2 ಬಳಿಕ ಯಶ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ 'ಟಾಕ್ಸಿಕ್' ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. ಬ್ಲಾಕ್‌ಬಸ್ಟರ್ 'ಧುರಂಧರ್' ಸಕ್ಸಸ್ ಸೀಕ್ವೆಲ್ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಹಾಗಾಗಿ ಈ ದಶಕದ ಅತಿದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಇದು ಎನ್ನಲಾಗ್ತಿದೆ.
ಎರಡೂ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗ್ತಿದೆ. ಒಂದೇ ದಿನ ಎರಡೂ ಸಿನಿಮಾಗಳು ಬರುವುದರಿಂದ ಉತ್ತರ ಭಾರತದಲ್ಲಿ ಟಾಕ್ಸಿಕ್ ಚಿತ್ರಕ್ಕೆ ಹಿನ್ನಡೆ ಆಗಬಹುದು. ಅದೇ ರೀತಿ ದಕ್ಷಿಣದಲ್ಲಿ 'ಧುರಂಧರ್'-2 ಚಿತ್ರಕ್ಕೆ ಕೊಂಚ ಪೆಟ್ಟು ಬೀಳಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. 'ಧುರಂಧರ್' ಸಿನಿಮಾ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೊಂಡಾಡುತ್ತಿದ್ದಾರೆ. ಇದೀಗ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಕ್ಲ್ಯಾಶ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಟಾಕ್ಸಿಕ್' ಎದುರು 'ಧುರಂಧರ್'-2 ಆರ್ಭಟ ಜೋರಾಗಿರುತ್ತದೆ ಎನ್ನುವ ಅರ್ಥದಲ್ಲಿ ವರ್ಮಾ ಟ್ವೀಟ್ ಮಾಡಿದ್ದಾರೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ಆಗಲಿ ನೋಡೋಣ ಏನಾಗುತ್ತದೆ ಎಂದು ಆರ್‌ಜಿವಿಗೆ ತಿರುಗೇಟು ನೀಡುತ್ತಿದ್ದಾರೆ. ಈ ಹಿಂದೆ ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಯಶ್ ಮಾತನಾಡಿದ್ದ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. "ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆ ಆಗುವಾಗ ಬೇರೆ ಯಾವುದೇ ಸಿನಿಮಾ ಬಂದ್ರು ನಾನು ತಲೆಕೆಡಿಸಿಕೊಳ್ಳಲ್ಲ. ಅದು ನನ್ನ ಸಿನಿಮಾ ನಾನು ರಿಲೀಸ್ ಮಾಡ್ತೀನಿ, ಉಳಿದವರು ಆ ಬಗ್ಗೆ ಯೋಚಿಸಬೇಕು" ಎಂದು ಹಿಂದೆ ಸಂದರ್ಶನವೊಂದರಲ್ಲಿ ಯಶ್ ಹೇಳಿದ್ದರು.
ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಸಾಕಷ್ಟು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿಂದೆ ಕೂಡ 'ಧುರಂಧರ್' ಸಿನಿಮಾ ಮೆಚ್ಚಿ ವರ್ಮಾ ಟ್ವೀಟ್ ಮಾಡಿದ್ದರು.
ಬಾಲಿವುಡ್ ಮೇಲೆ ದಕ್ಷಿಣದ ಭಾರತದ ಸಿನಿಮಾಗಳ ಆರ್ಭಟವನ್ನು 'ಧುರಂಧರ್' ಮೂಲಕದ ಆದಿತ್ಯಧರ್ ಎಡಗಾಲಿನಲ್ಲಿ ಒದ್ದಿದ್ದಾರೆ. ಇದೀಗ ಬಲಗಾಲನ್ನು 'ಧುರಂಧರ್-2' ಮೂಲಕ ಸಿದ್ಧಪಡಿಸುತ್ತಿದ್ದಾರೆ" ಎಂದು ವ್ಯಂಗ್ಯ ಮಾಡಿದ್ದರು. "ಮೊದಲ ಭಾಗ ಪ್ರೇಕ್ಷಕರನ್ನು ಹೆದರಿಸಿದರೆ, ಎರಡನೆಯದು ಅವರನ್ನು ಮತ್ತಷ್ಟು ಭಯಭೀತಗೊಳಿಸುತ್ತದೆ" ಎಂದು ಬರೆದುಕೊಂಡಿದ್ದರು.
ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರಕ್ಕೆ ಯಶ್ ಸಹ ಬಂಡವಾಳ ಹೂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











