17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡೇಟಿಗೆ ಬಲಿ
ಮುಂಬೈನಲ್ಲಿ ಸಿನಿಮೀಯ ಘಟನೆ ನಡೆದಿದೆ. 17 ಮಕ್ಕಳನ್ನು ವ್ಯಕ್ತಿಯೊಬ್ಬ ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ಮಕ್ಕಳನ್ನು ರಕ್ಷಿಸುವ ವೇಳೆ ಪೊಲೀಸರ ಗುಂಡೇಟಿಗೆ ಆ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾನೆ. ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ. ಈ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ.
ವೆಬ್ ಸೀರಿಸ್ ಒಂದಕ್ಕೆ ಆಡಿಷನ್ ಮಾಡುವುದಾಗಿ ಹೇಳಿ 17 ಮಕ್ಕಳು, ಒಬ್ಬ ವೃದ್ಧ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಸ್ಟುಡಿಯೋವೊಂದಕ್ಕೆ ರೋಹಿತ್ ಆರ್ಯ ಎಂಬ ವ್ಯಕ್ತಿ ಕರೆಸಿಕೊಂಡಿದ್ದ. ಬಳಿಕ ಎಲ್ಲರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ರೋಹಿತ್ ಪೊಲೀಸರಿಗೆ ವೀಡಿಯೋ ಸಂದೇಶ ಕಳುಹಿಸಿದ್ದ. ಅದರಲ್ಲಿ ಒಂದಷ್ಟು ಬೇಡಿಕೆ ಇಟ್ಟಿದ್ದ. ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಗಾಬರಿಗೊಂಡಿದ್ದರು.

ಆರ್ಎ ಸ್ಟುಡಿಯೋಸ್ ಎಂಬ ಸಣ್ಣ ಫಿಲ್ಮ್ ಸ್ಟುಡಿಯೋದಲ್ಲಿ ವೆಬ್ ಸೀರಿಸ್‌ಗಾಗಿ ಮಕ್ಕಳ ಆಡಿಷನ್ ಮಾಡುವುದಾಗಿ ರೋಹಿತ್ ಕರೆಸಿಕೊಂಡಿದ್ದ. 8 ರಿಂದ 14 ವರ್ಷ ವಯಸ್ಸಿನ ಮಕ್ಕಳನ್ನು ಸುಮಾರು 2 ಗಂಟೆಗಳ ಕಾಲ ಆತ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಬಳಿಕ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಪೊಲೀಸರು ರಕ್ಷಿಸಿದ್ದರು. ರಕ್ಷಣಾ ಕಾರ್ಯಾಚರಣೆಯ ವೇಳೆ ಆರ್ಯ ಏರ್ ಗನ್ ಬಳಸಿ ಪೊಲೀಸರ ಮೇಲೆ ಗುಂಡು ಹಾರಿಸಿದನು, ಪೊಲೀಸರು ಪ್ರತಿಯಾಗಿ ಒಂದು ಸುತ್ತು ಗುಂಡು ಹಾರಿಸಿದ್ದರು. ಆ ಗುಂಡು ಆತನ ಎದೆಗೆ ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಹಿತ್ ಕೊನೆಯುಸಿರೆಳೆದಿದ್ದಾನೆ.
ವೀಡಿಯೋ ಮಾಡಿ ತನ್ನ ಬೇಡಿಕೆಗಳನ್ನು ರೋಹಿತ್ ಹೇಳಿಕೊಂಡಿದ್ದ. "ನನ್ನ ಹೆಸರು ರೋಹಿತ್ ಆರ್ಯ. ಆತ್ಮಹತ್ಯೆ ಮಾಡಿಕೊಂಡು ಸಾಯುವ ಬದಲು, ನಾನು ಒಂದು ಪ್ಲ್ಯಾನ್ ಮಾಡಿದ್ದೀನಿ. ಇಲ್ಲಿ ಕೆಲವು ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿದ್ದೇನೆ. ನನ್ನದು ಕೆಲ ಸರಳ ಬೇಡಿಕೆಗಳು, ನೈತಿಕ ಬೇಡಿಕೆಗಳಿಗೆ. ನಾನು ಕೆಲ ಪ್ರಶ್ನೆಗಳಿಗೆ ಕೆಲವರಿಂದ ಉತ್ತರ ಪಡೆಯಬೇಕಿದೆ. ನಿಮ್ಮಿಂದ ಆಗುವ ಸಣ್ಣದೊಂದು ತಪ್ಪು ನಡೆಯೂ ನನ್ನನ್ನು ಪ್ರಚೋದಿಸುತ್ತದೆ. ಈ ಸ್ಥಳಕ್ಕೆ ಬೆಂಕಿ ಹಚ್ಚುತ್ತೇನೆ" ಎಂದು ಎಚ್ಚರಿಸಿದ್ದನು.
ಒತ್ತೆಯಾಳಗಳಾಗಿ ಸ್ಟುಡಿಯೋ ಒಳಗೆ ಇದ್ದ ಮಕ್ಕಳು ಸಹಾಯಕ್ಕಾಗಿ ಕಿಟಕಿ ಮೂಲಕ ಕೈ ಹೊರಗೆ ಹಾಕಿ ಅಂಗಲಾಚಿದ್ದರು. ಇದನ್ನು ಸ್ಥಳೀಯರು ಗಮಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ತುರ್ತು ಕರೆ ಬಂದ ಕೂಡ ಪೊವೈ ಪೊಲೀಸರು ಸ್ಥಳಕ್ಕೆ ಆಗಮಿಸಿ ರೋಹಿತ್ ಜೊತೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಟುಡಿಯೋ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆರ್‌ಎ ಸ್ಟುಡಿಯೋದಲ್ಲೇ ರೋಹಿತ್ ಕೆಲಸ ಮಾಡುತ್ತಿದ್ದ. ಜೊತೆಗೆ ಯೂಟ್ಯೂಬರ್ ಸಹ ಆಗಿದ್ದ ಎನ್ನಲಾಗ್ತಿದೆ. ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ಆಗಿ ರೋಹಿತ್ ಸಾವನ್ನಪ್ಪಿದಂತಾಗಿದೆ. ಪೊಲೀಸರು ಶರಣಾಗುವಂತೆ ಎಷ್ಟೇ ಹೇಳಿದರೂ ಆತ ಕೇಳಿರಲಿಲ್ಲ. ಶೂಟ್ ಮಾಡುವುದಾಗಿ ಪೊಲೀಸರನ್ನು ಬೆದರಿಸುವ ಪ್ರಯತ್ನ ಮಾಡಿದ್ದ. ಹಾಗಾಗಿ ಬೇರೆ ವಿಧಿಯಿಲ್ಲದೇ ಪೊಲೀಸರು ಗುಂಡು ಹಾರಿಸುವಂತಾಗಿತ್ತು.
ಪುಣೆ ಮೂಲದ ರೋಹಿತ್ ಆರ್ಯ, ಅಂದಿನ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಅವರ ಅವಧಿಯಲ್ಲಿ ಶಿಕ್ಷಣ ಇಲಾಖೆಯಡಿಯಲ್ಲಿ ಶಾಲೆಗೆ ಸಂಬಂಧಿಸಿದ ಯೋಜನೆಗೆ ಟೆಂಡರ್ ಪಡೆದಿದ್ದರು. ಅದಕ್ಕಾಗಿ ನನಗೆ ಯಾವುದೇ ಸಂಭಾವನೆ ಸಿಗಲಿಲ್ಲ ಎಂದು ಆರೋಪಿಸಿದ್ದರು. ಇಲಾಖೆಯು ತನ್ನ ಕೆಲಸಕ್ಕೆ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರೂ, ಜನವರಿ 2024 ರಿಂದ ತನಗೆ ಹಣ ಪಾವತಿಸಿಲ್ಲ ಎಂದು ಅವರು ಆರೋಪಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿ ಸಚಿವರ ನಿವಾಸದ ಮುಂದೆ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ವರದಿಯಾಗಿದೆ.


Click it and Unblock the Notifications











