ಸಿನಿಮಾದಲ್ಲಿ ಆ ದೃಶ್ಯ ಮಾಡಿದ್ದಕ್ಕೆ ಬಾಯ್‌ಫ್ರೆಂಡ್ ಕೈ ಕೊಟ್ಟು ಓಡಿ ಹೋದ ; ನಟಿ ಭಾವುಕ
ಗೆಲುವು-ಸೋಲು-ವ್ಯಾಪಾರ-ವ್ಯವಹಾರ ಏನೇ ಇರಲಿ ಕೆಲ ಚಿತ್ರಗಳು ಮತ್ತು ಪಾತ್ರಗಳು ಕಲಾವಿದರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಮರೆಯಲಾಗದ ಅನುಭವಕ್ಕೆ ಕಾರಣವಾಗಿರುತ್ತಾವೆ. ಇನ್ನು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರು ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ.
ಅದರಲ್ಲಿಯೂ ನಾಯಕಿಯರು ಕೆಲ ಒಮ್ಮೆ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು ನಿರ್ವಹಿಸುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ಆದ ಹಸಿ ಬಿಸಿ ದೃಶ್ಯಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೆ, ಇವರ ಈ ರೀಲ್ ಲೈಫ್ ರೊಮ್ಯಾನ್ಸ್ ಒಮ್ಮೊಮ್ಮೆ ಇವರ ರಿಯಲ್ ಲೈಫ್‌ಗೆ ಮುಳುವಾಗುತ್ತೆ. ಸಂಬಂಧವನ್ನೇ ಬಲಿ ಪಡೆಯುತ್ತೆ. ಉದಾಹರಣೆಗೆ ತ್ರಿಧಾ ಚೌಧರಿ ಅವರ ವೈಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಯಾರು ಈ ತ್ರಿಧಾ ಚೌಧರಿ ?
ತ್ರಿಧಾ ಚೌಧರಿ ಬೆಸಿಕಲಿ ಕೋಲ್ಕತ್ತಾದ ಕುವರಿ. ''ಕ್ಲೀನ್ & ಕ್ಲಿಯರ್ ಫ್ರೆಶ್ ಫೇಸ್'' ಮುಕುಟವನ್ನು 2011ರಲ್ಲಿ ಮುಡಿಗೇರಿಸಿಕೊಂಡ ತ್ರಿಧಾ ಬಂಗಾಳಿಯ ಖ್ಯಾತ ನಿರ್ದೇಶಕ ಸೃಜಿತ್ ಮುಖರ್ಜಿ ನಿರ್ದೇಶನದ ''ಮಿಶೌರ್ ರಹಸ್ಯ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಅಚ್ಚರಿ ಅಂದರೆ ಬಂಗಾಳದಿಂದ ಬಾಲಿವುಡ್‌ಗೆ ತ್ರಿಧಾ ಹೋಗಲಿಲ್ಲ. ಬದಲಿಗೆ ದಕ್ಷಿಣದ ಫ್ಲೈಟ್ ಹತ್ತಿದರು. ''ಸೂರ್ಯ ವರ್ಸಸ್ ಸೂರ್ಯ''.. ''7..'' ''ಅನುಕುನ್ನಡಿ ಒಕಟಿ ಐನಾಡಿ ಒಕಟಿ''.. ಹೀಗೆ ಒಂದಾದ ಮೇಲೊಂದು ಮೂರು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ.
ಬದುಕು ಬದಲಿಸಿದ ಆಶ್ರಮ್
ಈ ಹಿನ್ನೆಲೆ ಮರಳಿ ಮತ್ತೆ ಗೂಡು ಸೇರಿ ಬಂಗಾಳಿಯಲ್ಲಿ ಕಿರುಚಿತ್ರ ಮಾಡಿಕೊಂಡಿದ್ದ ತ್ರಿಧಾ ಅವರ ಭಾಗ್ಯದ ಬಾಗಿಲು ಕೊರೊನಾ ಕಾಲದಲ್ಲಿ ಕೊನೆಗೂ ತೆರೆಯಿತು. 2020ರಲ್ಲಿ ಓಟಿಟಿಯಲ್ಲಿ ಪ್ರಸಾರವಾದ ''ಆಶ್ರಮ್'' ಮತ್ತು ''ಬಂದಿಶ್ ಬ್ಯಾಂಡಿಟ್ಸ್'' ವೆಬ್ ಸರಣಿಗಳು ತ್ರಿಧಾ ಬದುಕನ್ನೇ ಬದಲಿಸಿದವು.
ವಿಶೇಷ ಅಂದರೆ ಈ ಎರಡು ಸರಣಿಗಳಲ್ಲಿ ತ್ರಿಧಾ ತುಸು ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲಿಯೂ ''ಆಶ್ರಮ್''ನಲ್ಲಿನ ಬಬಿತಾನ ಇನ್ನೂ ಹಲವರು ಮರೆತಿಲ್ಲ. ಸದ್ಯ ತಮ್ಮ ಇದೇ ಬೋಲ್ಡ್ ಅವತಾರ ತಮ್ಮ ವೈಯಕ್ತಿಕ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿತು ಎನ್ನುವುದರ ಕುರಿತು ತ್ರಿಧಾ ಮಾತನಾಡಿದ್ಧಾರೆ.
ಆಶ್ರಮ್‌ದಿಂದ ಹೃದಯ ನುಚ್ಚು ನೂರು
''Alphatalks Podcast'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ತ್ರಿಧಾ ಚೌಧರಿ, ವೈಯಕ್ತಿಕ ಬದುಕಿನ ಮೇಲೆ ''ಆಶ್ರಮ್'' ಸರಣಿ ಪರಿಣಾಮ ಬೀರಿದೆ ಎಂದಿದ್ದಾರೆ. ನನಗಾಗ ಪ್ರೇಮದ ಅಮಲೇರಿತ್ತು. ಎಲ್ಲ ಅಂದುಕೊಂಡತೆ ಆಗಿದ್ದರೆ ಮದುವೆಯೂ ಆಗಬೇಕಿತ್ತು ಎಂದು ಹೇಳಿರುವ ತ್ರಿಧಾ ಆ ಸಮಯದಲ್ಲಿ ''ಆಶ್ರಮ್'' ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.

''ಆಶ್ರಮ್'' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ನನ್ನ ಬಾಯ್‌ಫ್ರೆಂಡ್ ಸೀದಾ ಹೋಗಿ ನಿರ್ದೇಶಕರಾದ ಪ್ರಕಾಶ್ ಝಾ ಅವರನ್ನು ಭೇಟಿ ಮಾಡಿದ್ದ ಎಂದು ಹೇಳಿರುವ ತ್ರಿಧಾ ನನ್ನ ಕೆಲ ಬೋಲ್ಡ್ ಸೀನ್‌ಗಳನ್ನು ಬದಲಿಸುವಂತೆ ಅವನು ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದ ಎಂದು ಹೇಳಿದ್ಧಾರೆ. ನಾನು ಮದುವೆಯಾಗಲಿರುವ ಹುಡುಗಿ ಆಕೆ, ದಯಮಾಡಿ ಇಂತಹ ದೃಶ್ಯಗಳೆಲ್ಲ ಬೇಡ, ಚೇಂಜ್ ಮಾಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದ ಎಂದಿದ್ದಾರೆ.
ಮುಂದುವರೆದು ಅಭಿನಯ ನನ್ನ ವೃತ್ತಿ ಮಾತ್ರ ಅಲ್ಲ. ನನ್ನ ಜವಾಬ್ಧಾರಿಯೂ ಹೌದು ಎಂದು ಹೇಳಿರುವ ತ್ರಿಧಾ ದಿನಗಳು ಉರುಳಿದಂತೆ ಇದೇ ವಿಚಾರಕ್ಕೆ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು. ಕೊನೆಗೊಂದು ದಿನ ಮುರಿದು ಬಿತ್ತು ಎಂದಿದ್ದಾರೆ.
ಬ್ರೇಕಪ್ ನೋವು, ಕಣ್ಣೀರು
ಇನ್ನು ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು.
ತ್ರಿಧಾ ಕೂಡ ಬ್ರೇಕಪ್ ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ದಿನ ಇಡೀ ಕಣ್ಣೀರು ಹಾಕುತ್ತಾ ಕುಂತಿದ್ದರು. ರೂಮ್‌ನಿಂದ ಕೂಡ ಹೊರ ಬರಲು ತ್ರಿಧಾಗೆ ಸಾಧ್ಯವಾಗಿರಲಿಲ್ಲ. ಆಗ ಇವರಿಗೆ ಆಸರೆಯಾಗಿದ್ದು ಇವರ ಆಪ್ತ ಸ್ನೇಹಿತ ಅಜಾನ್. ಬ್ರೇಕಪ್ ನೋವಿಂದ ಹೊರ ಕರೆತರುವಲ್ಲಿ ಅಜಾನ್ ಪಾತ್ರ ದೊಡ್ಡದು ಎಂದು ಕೂಡ ತ್ರಿಧಾ ಹೇಳಿದ್ದಾರೆ.
ಇದೇ ಸಮಯದಲ್ಲಿ ಬದುಕು ಯಾರಿಗೂ ಕಾಯುವುದಿಲ್ಲ. ಆದರೆ ನನ್ನ ಕಷ್ಟದ ದಿನಗಳಲ್ಲಿ ಅವನು ನನ್ನ ಜೊತೆ ಇರಲಿಲ್ಲ ಎನ್ನುವುದೇ ಬೇಸರ ಎಂದು ಹೇಳಿರುವ ತ್ರಿಧಾ ಕಥೆಗೆ ಪೂರಕವಾಗಿರುವುದರಿಂದ ನಾವು ಅಂತಹ ಬೋಲ್ಡ್ ದೃಶ್ಯಗಳನ್ನು ಮಾಡಬೇಕಾಗುತ್ತೆ. ಆ ಪಾತ್ರಕ್ಕೂ ನಮ್ಮ ವೈಯಕ್ತಿಕ ಬದುಕಿಗೂ ಸಂಬಂಧ ಇರುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications