ಕ್ಯಾಮರಾ ಕಂಡು ಬೆಚ್ಚಿ ಬಿದ್ದ ಚೆಲುವೆ, ಹೆಲ್ಮೆಟ್ ಮರೆತು ಬಾಯ್‌ಫ್ರೆಂಡ್ ಜೊತೆ ಪೇರಿ ಕಿತ್ತ ನಟಿ ..!
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ.
ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ತೃಪ್ತಿ ದಿಮ್ರಿ ಕೂಡ ಸೇರಲು ಸದ್ಯ ಹವಣಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ತೃಪ್ತಿ ದಿಮ್ರಿ ತಮ್ಮ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಬೈಕೇರಿ ಊರ್ ತುಂಬಾ ಸುತ್ತಾಡಿದ್ದಾರೆ.

ಹೌದು, ಅನಿಮಲ್ ಚಿತ್ರದ ಮೂಲಕ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಭಾರತದೆಲ್ಲೆಡೆ ಮನೆ ಮಾತಾದ ತೃಪ್ತಿ ದಿಮ್ರಿ ಸದ್ಯ ತಮ್ಮ ವೃತ್ತಿಯ ಕಡೆ ಗಮನ ಕೊಡ್ತಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ತೃಪ್ತಿ ದಿಮ್ರಿ ಇನ್ನೂ ಸಿಂಗಲ್ ಎಂದು ಭಾವಿಸಿದ್ದರು. ಆದರೆ, ಭೂಲ್ ಭುಲಯ್ಯ 3 ಚಿತ್ರದ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ತೃಪ್ತಿ ದಿಮ್ರಿ ಸದ್ಯ ತಮ್ಮ ಗಮನವನ್ನು ತಮ್ಮ ಖಾಸಗಿ ಬದುಕಿನ ಕಡೆ ನೀಡಿದ್ದಾರೆ. ತಮ್ಮ ಗೆಳೆಯನ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಮುಂಬೈನ ರಸ್ತೆಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಜಾಲಿ ರೈಡ್ ಮಾಡಿದ್ದಾರೆ.
ಆದರೆ, ಈ ವಿಚಾರ ಅದ್ಹೇಗೋ ಮುಂಬೈನಲ್ಲಿರುವ ಪಾಪರಾಜಿಗಳ ಗಮನಕ್ಕೆ ಬಂದಿದೆ. ಇನ್ನೂ ಮುಂಬೈನಲ್ಲಿ ಸೆಲೆಬ್ರಿಟಿಗಳು ಯಾರ ಕೈಯಿಂದ ಆದರೂ ತಪ್ಪಿಸಿಕೊಳ್ಳಬಹುದು ಆದರೆ ಈ ಪಾಪರಾಜಿಗಳ ಕೈಯಿಂದ ಎಸ್ಕೇಪ್ ಆಗುವುದು ಅಸಾಧ್ಯ. ಎಲ್ಲಿಯೇ ಹೋದರು ಇವರು ಅಲ್ಲಿ ಹಾಜರಾಗುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ತೃಪ್ತಿ ತಮ್ಮ ಅತ್ಯಾಪ್ತ ಸ್ನೇಹಿತ ಸ್ಯಾಮ್ ಮರ್ಚೆಂಟ್ ಜೊತೆ ಡಿನ್ನರ್‌ಗೆ ತೆರಳಿರುವ ವಿಚಾರ ಗೊತ್ತಾದ ಕೂಡಲೇ ಪಾಪರಾಜಿಗಳು ತೃಪ್ತಿ ಊಟ ಮಾಡುತ್ತಿದ್ದ ರೆಸ್ಟೋರೆಂಟ್ ಆಚೆ ಬಿಡಾರ ಹೂಡಿದ್ದರು. ಸ್ಯಾಮ್ ಮರ್ಚೆಂಟ್ ಜೊತೆ ಆಚೆ ತೃಪ್ತಿ ಹೊರಗಡೆ ಬರಲಿ ಎಂದೇ ಕಾಯುತ್ತಿದ್ದರು.
ಆದರೆ ಇದನ್ನರಿಯದ ತೃಪ್ತಿ ಹಾಗೇ ಹೊರ ಬಂದಿದ್ದಾರೆ. ಸುತ್ತ ನೆರೆದ ಪಾಪರಾಜಿಗಳನ್ನು ಕಂಡು ಬೆಕ್ಕಸ ಬೆರಗಾಗಿ ತಮ್ಮ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡಿದ್ದಾರೆ. ಕ್ಯಾಮರಾಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಸ್ಯಾಮ್ ಮರ್ಚೆಂಟ್ ಅವರ ಹೋಂಡಾ ಎಕ್ಸ್ ಎಡಿವಿ 750 ಬೈಕ್‍ನಲ್ಲಿ ತೃಪ್ತಿ ಹಿಂಬದಿಯಲ್ಲಿ ಕುಳಿತುಕೊಂಡು ಹೆಲ್ಮೆಟ್ ಹಾಕಿಕೊಳ್ಳುವುದನ್ನು ಮರೆತು ಆ ಜಾಗವನ್ನು ಖಾಲಿ ಮಾಡಿದ್ದಾರೆ.
ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೃಪ್ತಿ ದಿಮ್ರಿ ಮತ್ತು ಅವರ ಗೆಳೆಯ ಸ್ಯಾಮ್ ಮರ್ಚೆಂಟ್ ಹೆಲ್ಮೆಟ್ ಧರಿಸದೇ ಹೋಗಿರುವುದಕ್ಕೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇಂತಹ ವಿದ್ಯಾವಂತ ಜನರೇ ಹೆಲ್ಮೆಟ್ ಹಾಕಿಕೊಳ್ಳದಿರುವುದನ್ನು ನೋಡಿದರೆ ದುಃಖವಾಗುತ್ತೆ ಎನ್ನುವ ಅಭಿಪ್ರಾಯ ಕೂ ವ್ಯಕ್ತವಾಗುತ್ತಿದೆ.
ಅಂದ್ಹಾಗೇ ತೃಪ್ತಿ ದಿಮ್ರಿ ಹೃದಯ ಕದ್ದ ಸ್ಯಾಮ್ ಮರ್ಚೆಂಟ್ ಹೊಟೇಲ್ ಉದ್ಯಮಿ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಈ ವ್ಯಕ್ತಿ ಮಾಡೆಲ್ ಕೂಡ ಹೌದು. ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಆಧಾರಸ್ತಂಭವಾಗಿರುವ ಸ್ಯಾಮ್ ಮರ್ಚೆಂಟ್ 2002ರಲ್ಲಿ ನಡೆದ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿನ ವಿಜೇತ ಕೂಡ ಹೌದು. ಇಂತಹ ಸ್ಯಾಮ್ ಮರ್ಚೆಂಟ್ ಜೊತೆ ಸದ್ಯ ಪ್ರೇಮದ ಅಮಲನ್ನೇರಿಸಿಕೊಂಡಿರುವ ತೃಪ್ತಿ ದಿಮ್ರಿ ಈ ಹಿಂದೆ ಭಾರತದ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಶರ್ಮಾ ಜೊತೆ ಓಡಾಡಿದ್ದರು. ಕರ್ಣೇಶ್ ಶರ್ಮಾ ನಿರ್ಮಾಣದ ಬುಲ್ ಬುಲ್ ಮತ್ತು ಕಾಲಾ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಆ ನಂತರ ಏನಾಯ್ತೋ ಗೊತ್ತಿಲ್ಲ ಇವರಿಬ್ಬರ ಸಂಬಂಧ ಮುರಿದು ಬಿತ್ತು.


Click it and Unblock the Notifications










