ಆಟಿಕೆ ಬಂದೂಕು ತೋರಿಸಿದ ಕರೀನಾ ಪುತ್ರನ ಮೇಲೆ ಮುಗಿಬಿದ್ಧ ಆನ್‌ಲೈನ್ ಧರ್ಮಾಂಧರು
ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಮೇಲೆ ಮತ್ತೆ ಟ್ರೋಲರ್‌ಗಳು ಮುಗಿಬಿದ್ದಿದ್ದಾರೆ. ಇನ್ನೂ ಪುಟ್ಟ ಹುಡುಗನೆಂಬ ಕರುಣೆಯನ್ನೂ ತೋರದೆ ಮನಸ್ಸಿಗೆ ತೋಚಿದ ಹಾಗೆ ಕಮೆಂಟ್‌ಗಳನ್ನು ಎಸೆದಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಆಟಿಕೆ ಬಂದೂಕು!
ಕರೀನಾ ಕಪೂರ್ ಇಂದು ತಮ್ಮ ಇಬ್ಬರು ಮಕ್ಕಳಾದ ತೈಮೂರ್ ಹಾಗೂ ಜೆಹ್ ಅವರೊಟ್ಟಿಗೆ ತಂದೆ ರಣ್ದೀರ್ ಕಪೂರ್ ನಿವಾಸಕ್ಕೆ ಭೇಟಿ ನೀಡಿದ್ದರು. ಬಾಲಿವುಡ್ ಸೆಲೆಬ್ರಿಟಿಗಳ ಹಿಂದೆ ಸದಾ ಕ್ಯಾಮೆರಾ ಹಿಡಿದು ಪಾಪಾರಾಟ್ಜಿಗಳು ಸುತ್ತುವುದು ಸಾಮಾನ್ಯ. ಅಂತೆಯೇ ಕರೀನಾ ಹಿಂದೆಯೂ ಪಾಪರಾಟ್ಜಿಗಳು ಹೋಗಿದ್ದರು.
ಕಾರು ಇಳಿದು ರಣ್ದೀರ್ ಮನೆಗೆ ಹೋಗುವಾಗ ಐದು ವರ್ಷದ ಬಾಲಕ ತೈಮೂರ್ ತನ್ನ ಆಟಿಕೆ ಬಂದೂಕನ್ನು ಕ್ಯಾಮೆರಾ ಹಿಡಿದು ನಿಂತಿದ್ದ ಪಾಪರಾಟ್ಜಿಗಳ ಕಡೆಗೆ ಗುರಿ ಮಾಡಿದ್ದಾನೆ. ಈಗ ಇದರ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಟಿಕೆ ಬಂದೂಕು ಹಿಡಿದ ತೈಮೂರ್‌ನನ್ನು ಟ್ರೋಲಿಗರು ಭಯೋತ್ಪಾದಕರಿಗೆ ಹೋಲಿಸಿದ್ದಾರೆ.

'ಈಗಿನಿಂದಲೇ ಭಯೋತ್ಪಾದನೆಯ ತಾಲೀಮು ಶುರು ಮಾಡಿಕೊಂಡಿದ್ದಾನೆ' ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಬಾಲ ಜಿಹಾದ್' ಎಂದು ಕರೆದಿದ್ದಾರೆ.
''ದೊಡ್ಡವನಾದ ಮೇಲೆ ಇದೇ ಆಗಬೇಕಲ್ಲ'' ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ನೇರವಾಗಿ 'ಭಯೋತ್ಪಾದಕ' ಎಂದೇ ಕರೆದಿದ್ದಾರೆ. 'ಪಕ್ಕಾ ತಾಲಿಬಾನಿಯಂತೆ ಕಾಣುತ್ತಿದ್ದಾನೆ' ಎಂದು ಇನ್ನು ಕೆಲವರು ಹೇಳಿದ್ದಾರೆ. 'ಅಪ್ಪ ಜಿಹಾದಿಯವನ ಹೆಸರು ಇಟ್ಟಿದ್ದಾರೆ ಹಾಗಾಗಿ ಜಿಹಾದಿಯೇ ಆಗುತ್ತಿದ್ದಾನೆ' ಎಂದೊಬ್ಬರು ಕಮೆಂಟ್ ಮಾಡಿದ್ದಾರೆ.
ತೈಮೂರ್ ಪರವಾಗಿಯೂ ಕೆಲವರು ಟ್ವೀಟ್, ಕಮೆಂಟ್ ಮಾಡಿದ್ದು, 'ಅವನು ಇನ್ನೂ ಮಗು ಅವನನ್ನು ಅವನಷ್ಟಕ್ಕೆ ಬಿಟ್ಟುಬಿಡಿ' ಎಂದಿದ್ದಾರೆ. 'ಮಗುವಾಗಿದ್ದಾಗ ಎಲ್ಲರ ಬಳಿಯೂ ಅಂಥಹಾ ಗನ್ ಇರಲಿಲ್ಲವೇ?' ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಮಗುವನ್ನು ಭಯೋತ್ಪಾದಕ ಎಂದಿದ್ದಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.
ತೈಮೂರ್‌ಗೆ ಹೆಸರು ಇಟ್ಟಾಗಲೂ ತೀವ್ರ ಆಕ್ರೋಶವನ್ನು ಟ್ರೋಲಿಗರು ವ್ಯಕ್ತಪಡಿಸಿದ್ದರು. ಆ ಮಗುವಿನ ಮರಣವನ್ನೂ ಕೆಲವರು ಆಶಿಸಿದ್ದರು. ಯುದ್ಧ ಪೀಪಾಸು ದೊರೆಯಾಗಿದ್ದ ತೈಮೂರ್ ಗುರ್ಖನಿ ಹೆಸರನ್ನು ಆಧರಿಸಿ ಸೈಫ್ ಅಲಿ ಖಾನ್-ಕರೀನಾ ಕಪೂರ್ ಪುತ್ರನಿಗೆ ಹೆಸರಿಟ್ಟಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ರೋಶವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದರು.
ಟ್ರೋಲಿಗರ ಟ್ರೋಲ್‌ಗಳಿಂದ ತೀವ್ರ ಅಸಮಾಧಾನಗೊಂಡಿದ್ದ ಸೈಫ್-ಕರೀನಾ ದಂಪತಿ ತೈಮೂರ್ ಎಂದರೆ ಕಬ್ಬಿಣ ಅಥವಾ ಗಟ್ಟಿಯಾದವನು ಎಂದರ್ಥ ಹಾಗಾಗಿ ಆ ಹೆಸರನ್ನು ಇಟ್ಟಿದ್ದೇವೆ, ದೊರೆ ತೈಮೂರ್ ಹೆಸರು ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.


Click it and Unblock the Notifications











