'ತುಂಬಾಡ್'ನ ವಾಡೆಯಲ್ಲಿ ಝಣ ಝಣ ಕಾಂಚಾಣ, ಹತ್ತು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಕೋಟಿ..?
ಹೊಸದಾಗಿ ಬಿಡುಗಡೆಯಾದ ಅನೇಕ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತೆ. ಅಂತದ್ದರಲ್ಲಿ ಮರು ಬಿಡುಗಡೆಯಾದ ತುಂಬಾಡ್ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವುದಲ್ಲದೇ ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡುತ್ತಿದೆ. ಹಣ ಕೊಳ್ಳೆ ಹೊಡೆಯುತ್ತಿದೆ. ಹೌದು, ಹತ್ತು ದಿನದ ಹಿಂದೆ ಬಿಡುಗಡೆಯಾದ ತುಂಬಾಡ್ ಇಲ್ಲಿಯವರೆಗೆ ಇಪ್ಪತ್ತೊಂದು ಕೋಟಿಯನ್ನು ಗಳಿಸಿದೆ. ಅನೇಕ ಕಡೆ ಇನ್ನೂ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.
ಮರುಬಿಡುಗಡೆಯಾದ ಮೊದಲ ದಿನ ಒಂದೂವರೆ ಕೋಟಿಯನ್ನು ಗಳಿಸಿದ್ದ ತುಂಬಾಡ್, ಎರಡನೇ ದಿನ ಎರಡು ಕೋಟಿ ಇಪ್ಪತ್ತೈದು ಲಕ್ಷವನ್ನು ಗಳಿಸಿತ್ತು. ಮೂರನೇ ದಿನ ಮೂರು ಕೋಟಿಯನ್ನು ಗಳಿಸಿದ್ದ ತುಂಬಾಡ್ ನಾಲ್ಕು ಮತ್ತು ಐದನೇ ದಿನ ಒಂದೂವರೆ ಕೋಟಿಯ ಗಡಿಯನ್ನೂ ದಾಟಿತ್ತು. ಆರನೇ ದಿನ ಒಂದು ಕೋಟಿ ನಲವತ್ತು ಲಕ್ಷ ಗಳಿಸಿದ್ದ ತುಂಬಾಡ್ ಏಳನೇ ದಿನ ಒಂದು ಕೋಟಿ ಮೂವತ್ತು ಲಕ್ಷ ಗಳಿಸಿತ್ತು.

ಇನ್ನೂ ಮೊನ್ನೆ ರಾಷ್ಟ್ರೀಯ ಸಿನಿಮಾ ದಿನದಂದು ಚಿತ್ರದ ಟಿಕೆಟ್ ದರ 99 ರೂಪಾಯಿಗೆ ನಿಗದಿಯಾಗಿದ್ದಾಗ ತುಂಬಾಡ್ ಮೇಲೆ ಹಣದ ಮಳೆಯನ್ನು ಪ್ರೇಕ್ಷಕರು ಸುರಿಸಿದರು. ಅವತ್ತು ಚಿತ್ರ ಎರಡು ಕೋಟಿ ಅರವತ್ತು ಲಕ್ಷವನ್ನು ಗಳಿಸಿತ್ತು. ಆ ನಂತರ ಒಂಬತ್ತನೇ ದಿನ ಎರಡು ಕೋಟಿ ಹದಿನೈದು ಲಕ್ಷ ಗಳಿಸಿದ್ದ ಚಿತ್ರ ನಿನ್ನೆ ಭಾನುವಾರ ಎರಡು ಕೋಟಿ ಅರವತ್ತೈದು ಲಕ್ಷವನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಇನ್ನೂ ವಿಶೇಷ ಅಂದರೆ ಆರು ವರ್ಷದ ಹಿಂದೆ ತುಂಬಾಡ್ ಗಳಿಸಿದ್ದು ಕೇವಲ ಹನ್ನೆರಡುವರೆ ಕೋಟಿಯನ್ನಷ್ಟೇ. ಆದರೆ ಈಗ ಆ ಗಳಿಕೆಯನ್ನು ಹಿಂದಿಕ್ಕಿ ತುಂಬಾಡ್ ಮುನ್ನುಗ್ಗುತ್ತಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ತುಂಬಾಡ್ ಚಿತ್ರಮಂದಿರಗಳಿಂದ ಕಣ್ಮರೆಯಾಗುವ ಮುನ್ನ ಅನಾಯಾಸವಾಗಿ ಮೂವತ್ತು ಕೋಟಿಯನ್ನು ಗಳಿಸಲಿದೆ. ಹಾಗೊಂದ್ವೇಳೆ ಅಂದುಕೊಂಡಂತೆ ಈ ಚಿತ್ರ ಮೂವತ್ತು ಕೋಟಿಯ ಗಡಿಯನ್ನು ತಲುಪಿದರೆ ತುಂಬಾಡ್ ಬಾಲಿವುಡ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಅಂದ್ಹಾಗೇ ಮರುಬಿಡುಗಡೆಯಯಾದರೂ ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ಚಿತ್ರದ ನಿರ್ಮಾಪಕ ಮತ್ತು ನಾಯಕ ಸೋಹಮ್ ಷಾ ಹೃದಯ ತುಂಬಿ ಬಂದಿದೆ. ಹೀಗಾಗಿಯೇ ಚಿತ್ರದ ಮುಂದುವರೆದ ಭಾಗವನ್ನು ಕೂಡ ಸೋಹಮ್ ಷಾ ಘೋಷಿಸಿದ್ದಾರೆ. ಇನ್ನೂ ತುಂಬಾಡ್ ಚಿತ್ರದ ಮೊದಲ ಭಾಗವನ್ನು ರಾಹಿ ಅನಿಲ್ ಬರವೆ ನಿರ್ದೇಶನ ಮಾಡಿದ್ದರು.
ಆದರೆ ಎರಡನೇ ಭಾಗದಿಂದ ರಾಹಿ ಅನಿಲ್ ಬರವೆ ಹೊರ ಬಂದಿದ್ದಾರೆ. ಸಿಕ್ವೆಲ್ ನಿರ್ಮಾಣ ಮಾಡುತ್ತಿರುವ ಸೋಹಮ್ ಷಾಗೆ ಅಭಿನಂದನೆ ಸಲ್ಲಿಸಿದ್ದಾರೆ. ತುಂಬಾಡ್ 2 ಅಭೂತಪೂರ್ವ ಗೆಲುವನ್ನು ಕಾಣಲಿ ಎಂದು ಶುಭ ಹಾರೈಸಿದ್ದಾರೆ. ತುಂಬಾಡ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಆದೇಶ್ ಈ ಎರಡನೇ ಭಾಗವನ್ನು ನಿರ್ದೇಶನ ಮಾಡುವ ಸಾಧ್ಯತೆ ಇದೆ.
ಉಳಿದಂತೆ ತುಂಬಾಡ್‌ನ ಎರಡನೇ ಭಾಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಇನ್ನೂ ತುಂಬಾಡ್ ಎದುರು ಬಿಡುಗಡೆಯಾದ ಕರೀನಾ ಕಪೂರ್ ಖಾನ್ ಅಭಿನಯದ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋಲನ್ನೊಪ್ಪಿಕೊಂಡಿದೆ. ಪ್ರೇಕ್ಷಕರ ಕೊರತೆಯನ್ನು ಈ ಚಿತ್ರ ಎದುರಿಸುತ್ತಿದೆ. ಮತ್ತೊಂದು ಕಡೆ ಸ್ತ್ರೀ 2 ಅಬ್ಬರ ಕೂಡ ಕಡಿಮೆಯಾಗಿದೆ. ಒಟ್ನಲ್ಲಿ ಸದ್ಯಕ್ಕೆ ತುಂಬಾಡ್ ಎಂಬ ತೂಫಾನ್ ಬಾಲಿವುಡ್‌ಗೆ ಅಪ್ಪಳಿಸಿದೆ.ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಜ್ಯೂ.ಎನ್.ಟಿ.ಆರ್ ಅಭಿನಯದ ದೇವರ ಮುಂದಿನ ವಾರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ತುಂಬಾಡ್ ಚಿತ್ರದ ಗಳಿಕೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಆದರೂ ಈ ಒಂದು ವಾರದಲ್ಲಿ ಚಿತ್ರ ಮೂವತ್ತು ಕೋಟಿಯ ಗಡಿಯನ್ನು ದಾಟುವ ನಿರೀಕ್ಷೆ ಬಾಲಿವುಡ್ ಪಂಡಿತರಿಗೆ ಇದೆ.


Click it and Unblock the Notifications











