ತುಂಬಾಡ್‌ನ ವಾಡೆ ನೋಡಲು ಜನ ಸಾಗರ, ಭಾರತದ ಅತ್ಯುತ್ತಮ ಹಾರರ್ ಚಿತ್ರದ ಸಿಕ್ವೆಲ್ ಘೋಷಣೆ..!
ಅದು 2018ರ ಆಸು ಪಾಸು. ಚಿತ್ರಮಂದಿರದಲ್ಲಿ ಚಿತ್ರವೊಂದು ತೆರೆಗೆ ಬಂದಿತ್ತು. ಆ ಚಿತ್ರದ ಹೆಸರು ತುಂಬಾಡ್. ನಿಜಾ. ಆ ಕಾಲದಲ್ಲಿ ಈ ಚಿತ್ರವನ್ನು ಹೊತ್ತು ಮೆರೆಸಿದವರ ಸಂಖ್ಯೆ ಕಡಿಮೆ. ಯಾಕೆಂದರೆ ಈ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್ ಇರಲಿಲ್ಲ. ಸಾಮಾನ್ಯವಾದ ಚಿತ್ರ ಕೂಡ ಇದಾಗಿರಲಿಲ್ಲ. ಚಿಂತನ ಶೀಲ ವಿಚಾರವನ್ನು ಹರವಿಡುತ್ತಾನೇ, ಚಿಕ್ಕ ವಯಸ್ಸಿನಲ್ಲಿ ನಾವೆಲ್ಲ ಕೇಳಿದ್ದ ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಯನ್ನು ನೆನಪಿಸಿದ್ದ ಈ ತುಂಬಾಡ್‌ನ ಆ ಕಾಲದಲ್ಲಿ ಕೆಲವೇ ಜನ ನೋಡಿದ್ದರಾದರೂ ಅವರೆಲ್ಲ ಚಿತ್ರಮಂದಿರದಿಂದ ಬೆವರುತ್ತಾನೇ ಹೊರ ಬಂದಿದ್ದರು.
ಇಂಥಾ ತುಂಬಾಡ್ ಮತ್ತೊಮ್ಮೆ ಅನೇಕರಿಗೆ ನೆನಪಾಗಿದ್ದು ಕಾಂತಾರ ಚಿತ್ರ ತೆರೆ ಬಂದಾಗ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಜನ ಮುಗಿ ಬಿದ್ದು ನೋಡುವ ಸಮಯದಲ್ಲಿ, ಅರೇ, ನಮ್ಮಲ್ಲಿ ಕೂಡ ಈ ತರಹದ ಅದ್ಭುತವಾದ ಕಲಾ ಕೃತಿ ಇದೆಯೆಲ್ಲ ಎಂದು ಹಿಂದಿ ಚಿತ್ರ ರಸಿಕರು ನೆನಪು ಮಾಡಿಕೊಂಡಿದ್ದರು. ಅಮೆಜಾನ್‌ನಲ್ಲಿ ತುಂಬಾಡ್ ಚಿತ್ರವನ್ನು ಕಣ್ತುಂಬಿಕೊಂಡಿದ್ದರು. ಇಷ್ಟೇ ಅಲ್ಲ ಈ ಚಿತ್ರವನ್ನು ಮರು ಬಿಡುಗಡೆ ಮಾಡುವಂತೆ ಚಿತ್ರದ ನಿರ್ಮಾಪಕ ಮತ್ತು ನಾಯಕ ಸೋಹಮ್ ಷಾ ಅವರಲ್ಲಿ ಅನೇಕರು ಮನವಿಯನ್ನೂ ಮಾಡಿದ್ದರು. ಬೆಳ್ಳಿತೆರೆಯ ಮೇಲೆ ತುಂಬಾಡ್ ನೋಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು.

ಹೀಗೆ ಭಾರೀ ಜನಾಭಿಪ್ರಾಯದ ಮೇರೆಗೆ ಸೋಹಮ್ ಷಾ ನಿನ್ನೆ ತಮ್ಮ ಕೂಸು ತುಂಬಾಡ್‌ನ ಮತ್ತೊಮ್ಮೆ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶವನ್ನು ನೀಡಿದ್ದಾರೆ. ಇನ್ನೂ ವಿಶೇಷ ಅಂದರೆ 2018ರಲ್ಲಿ ಈ ಚಿತ್ರ ತೆರೆಗೆ ಬಂದಾಗ ಮೊದಲ ದಿನ ಈ ಚಿತ್ರ ಗಳಿಸಿದ್ದು ಕೇವಲ ಅರವತ್ಮೂರು ಲಕ್ಷ ಮಾತ್ರ. ಆದರೆ ನಿನ್ನೆ ಈ ಚಿತ್ರ ಗಳಿಸಿದ್ದು ಅಕ್ಷರಶಃ ಡಬಲ್ ಹಣವನ್ನು.
ಹೌದು, ಕೇವಲ ನಿನ್ನೆ ಒಂದೇ ದಿನ ತುಂಬಾಡ್ ಒಂದೂವರೆ ಕೋಟಿ ಹಣವನ್ನ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಈ ಮೂಲಕ ಮರು ಬಿಡುಗಡೆಯಲ್ಲಿ ತುಂಬಾಡ್ ದಾಖಲೆಯನ್ನೂ ಬರೆದಿದೆ. ಇನ್ನೂ ತುಂಬಾಡ್ ಅಬ್ಬರದಿಂದ ಕರೀನಾ ಕಪೂರ್ ಖಾನ್ ಅಭಿನಯದ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರ ಪ್ರೇಕ್ಷಕರ ಕೊರತೆಯನ್ನು ಅನುಭವಿಸುತ್ತಿದೆ. ಮೂವತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಮೊದಲ ದಿನ ಕೇವಲ ಒಂದು ಕೋಟಿ ಹದಿನೈದು ಲಕ್ಷವನ್ನಷ್ಟೇ ಗಳಿಸಿದೆ.

ಇನ್ನೂ ಇವತ್ತು ತುಂಬಾಡಿನ ವಾಡೆಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಂಡ ಪ್ರೇಕ್ಷಕರು, ಛೇ ಇಂತಹ ಚಿತ್ರವನ್ನು ನಾವು ಆಗ ಚಿತ್ರಮಂದಿರದಲ್ಲಿ ನೋಡಲಿಲ್ಲವಲ್ಲಾ ಎಂದು ಕೊರಗುತ್ತಿದ್ದಾರೆ. ಇನ್ನೂ ಕೆಲವರು 2018ರಲ್ಲಿಯೇ ತೆರೆಗೆ ಬಂದಿದ್ದ ಗಲ್ಲಿ ಭಾಯ್ ಚಿತ್ರದ ಬದಲು ಈ ಚಿತ್ರವನ್ನೂ ಆಸ್ಕರ್‌ಗೆ ಕಳಿಸಬೇಕಿತ್ತು ಎಂಬ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಸಹಜವಾಗಿ ಮರುಬಿಡುಗಡೆಯಯಾದರೂ ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ಚಿತ್ರದ ನಿರ್ಮಾಪಕ ಮತ್ತು ನಾಯಕ ಸೋಹಮ್ ಷಾ ಹೃದಯ ತುಂಬಿ ಬಂದಿದೆ. ಹೀಗಾಗಿಯೇ ಚಿತ್ರದ ಮುಂದುವರೆದ ಭಾಗವನ್ನು ಇಂದು ಸೋಹಮ್ ಷಾ ಘೋಷಿಸಿದ್ದಾರೆ. ಇನ್ನೂ ತುಂಬಾಡ್ ಚಿತ್ರದ ಮೊದಲ ಭಾಗವನ್ನು ರಾಹಿ ಅನಿಲ್ ಬರವೆ ನಿರ್ದೇಶನ ಮಾಡಿದ್ದರು. ಎರಡನೇ ಭಾಗವನ್ನು ಕೂಡ ಇವರೇ ನಿರ್ದೇಶನ ಮಾಡುವ ಸಾಧ್ಯತೆ ಇದೆ.
ಉಳಿದಂತೆ ಸೋಹಮ್ ಷಾ ಜೊತೆ ಈ ಬಾರಿ ಈ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಗಬೇಕಿದೆ. ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲಿ ಕೂಡ ಮಳೆ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ


Click it and Unblock the Notifications











