"ಮೇಕಪ್ ರೂಮ್‌ನಲ್ಲಿ ಕೂಡಿಹಾಕಿದ್ರು, ಬಟ್ಟೆ ಬದಲಿಸಲು ಬಿಡಲಿಲ್ಲ, ನಿರ್ಮಾಪಕರ ವಿರುದ್ಧ ಕಿರುತೆರೆ ನಟಿ ಅಳಲು
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ಸಾಕಷ್ಟು ನಟಿಯರು ದನಿ ಎತ್ತಿದ್ದಾರೆ. ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಕೆಲವೊಮ್ಮೆ ಸಹ ಕಲಾವಿದರು ತಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡಿರುವ ಸಂಗತಿಯನ್ನು ಹೊರ ಹಾಕಿದ್ದಾರೆ. ನಿರ್ಮಾಪಕರು, ನಿರ್ದೇಶಕರು ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.
ಕೆಲ ನಟಿಯರು ಧೈರ್ಯವಾಗಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಕೆಲವರು ಕಿರುಕುಳಕ್ಕೆ ಒಳಗಾಗಿದ್ದರೂ ಹೇಳಲು ಧೈರ್ಯ ಇಲ್ಲದೇ ಇಷ್ಟೋ ವಿಚಾರಗಳು ಹೊರಗೆ ಬರುವುದೇ ಇಲ್ಲ. ಕಿರುತೆರೆ ನಟಿಯೊಬ್ಬರು ಮೇಕಪ್ ರೂಮ್‌ನಲ್ಲಿ ಕಿರುಕುಳ ಅನುಭವಿಸಿದ ಸಂಗತಿಯನ್ನು ಇದೀಗ ಭಯದಿಂದಲೇ ಹೇಳಿಕೊಂಡಿದ್ದಾರೆ. ತಮಗಾದ ಈ ಅನುಭವ ಮತ್ತೊಬ್ಬರಿಗೆ ಆಗುವುದು ಬೇಡ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

ಹಿಂದಿ ಜನಪ್ರಿಯ ಕಿರುತೆರೆ ನಟಿ ಕೃಷ್ಣ ಮುಖರ್ಜಿ ಕಿರುತೆರೆ ವೀಕ್ಷಿಕರಿಗೆ ಚಿರಪರಿಚಿತ ಹೆಸರು. 'ಯೇ ಹೈ ಮೊಹಬ್ಬತೇನ್' ಧಾರಾವಾಹಿಯಲ್ಲಿ ಆಲಿಯಾ ರಾಘವ್ ಭಲ್ಲಾ ಪಾತ್ರದಲ್ಲಿ ಆಕೆಯ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಹಲವು ವರ್ಷಗಳಿಂದ ಆಕೆ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಜನಪ್ರಿಯ 'ನಾಗಿಣ್-3' ಧಾರಾವಾಹಿಯಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ.
ನಟಿ ಕೃಷ್ಣ ಮುಖರ್ಜಿ ಇನ್‌ಸ್ಟಾ ಪೋಸ್ಟ್ ಈಗ ಸಖತ್ ಸದ್ದು ಮಾಡ್ತಿದೆ. ತಮಗಾದ ಕಹಿ ಕಿರುಕುಳದ ಬಗ್ಗೆ ಆಕೆ ಬರೆದುಕೊಂಡಿದ್ದಾರೆ. ಮೇಕಪ್ ರೂಮ್‌ನಲ್ಲಿ ನಿರ್ಮಾಪಕರು ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಒಂದೂವರೆ ವರ್ಷದಿಂದ ತಾವು ಈ ರೀತಿ ಕಿರುಕುಳ ಅನುಭವಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಇಷ್ಟು ದಿನ ಯಾಕೆ ಈ ಬಗ್ಗೆ ಮೌನವಾಗಿದ್ದೆ ಎನ್ನುವುದನ್ನು ತಿಳಿಸಿದ್ದಾರೆ.
'ಶುಬ್ ಶೋಗನ್' ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ನಟಿ ಕೃಷ್ಣ ಮುಖರ್ಜಿ ಈ ಪೋಸ್ಟ್ ಮಾಡಿದ್ದಾರೆ. ಆ ಪ್ರೊಡಕ್ಷನ್‌ನವರು ಹಾಗೂ ನಿರ್ಮಾಪಕರು ತನಗೆ ಚಿತ್ರಹಿಂಸೆ ನೀಡಿದ್ದಾಗಿ ವಿವರಿಸಿದ್ದಾರೆ. ಈ ಕಿರುಕುಳ ಹೇಳತೀರದಾಗಿದ್ದು, ಕೊನೆಗೆ ಸಹಿಸಲಾಗದೇ ಧೈರ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.
ನಟಿ ಕೃಷ್ಣ ಮುಖರ್ಜಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. "ನಾನು ಇದನ್ನು ಹೇಳಲು ಎಂದು ಧೈರ್ಯ ಮಾಡಿರಲಿಲ್ಲ. ಆದರೆ ಇನ್ನು ಮುಂದೆ ಸುಮ್ಮನಿರಬಾರದು ಎಂದು ನಿರ್ಧರಿಸಿದೆ. ನನಗೆ ಬಹಳ ಕಷ್ಟವಾಗುತ್ತಿದೆ. ಅದರಲ್ಲೂ ಕಳೆದ ಒಂದೂವರೆ ವರ್ಷದಿಂದ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೇನೆ , ಆತಂಕಕ್ಕೊಳಗಾಗಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿರುವಾಗ ಬಹಳ ಅತ್ತಿದ್ದೇನೆ. ನಾನು 'ದಂಗಲ್' ಟಿವಿಗಾಗಿ 'ಶುಭ್ ಶಗುನ್' ಧಾರಾವಾಹಿಯಲ್ಲಿ ನಟಿಸಲು ಆರಂಭಿಸದ ಬಳಿಕ ಇದೆಲ್ಲಾ ಶುರುವಾಯಿತು" ಎಂದು ಆಕೆ ಬರೆದುಕೊಂಡಿದ್ದಾರೆ.
"ಅದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ನಾನು ಅದನ್ನು ಮಾಡಲು ಎಂದಿಗೂ ಬಯಸಿರಲಿಲ್ಲ. ಆದರೆ ನಾನು ಇತರರ ಮಾತನ್ನು ಕೇಳಿ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ಕುಂದನ್ ಸಿಂಗ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ನಾನು ಅಸ್ವಸ್ಥನಾಗಿದ್ದರಿಂದ ಅವರು ಒಮ್ಮೆ ನನ್ನನ್ನು ಮೇಕಪ್ ರೂಮ್ ಒಳಗೆ ಕೂಡಿ ಹಾಕಿದ್ದರು. ನನ್ನ ಅವರು ಸಂಭಾವನೆ ನೀಡದ ಕಾರಣ ನಾನು ಚಿತ್ರೀಕರಣ ಮಾಡದಿರಲು ನಿರ್ಧರಿಸಿದೆ. ಅಲ್ಲದೇ ನನಗೆ ಹುಷಾರಿರಲಿಲ್ಲ. ಒಮ್ಮೆ ನಾನು ಬಟ್ಟೆ ಬದಲಿಸುವಾಗ ನನ್ನ ಮೇಕಪ್ ರೂಂ ಬಾಗಿಯುವುದಾಗಿ ಬಡಿಯುತ್ತಿದ್ದರು" ಎಂದು ನೋವು ತೋಡಿಕೊಂಡಿದ್ದಾರೆ.
"5 ತಿಂಗಳ ನನ್ನ ಸಂಭಾವನೆ ಕೊಟ್ಟಿರಲಿಲ್ಲ. ಇದು ನಿಜವಾಗಿಯೂ ದೊಡ್ಡ ಮೊತ್ತವಾಗಿತ್ತು. ನಾನು ಪ್ರೊಡಕ್ಷನ್ ಹೌಸ್ ಮತ್ತು ದಂಗಲ್ ಆಫೀಸ್‌ಗೆ ಹೋಗಿದ್ದೇನೆ ಆದರೆ ಅವರು ಕ್ಯಾರೆ ಅನ್ನಲಿಲ್ಲ. ಅಲ್ಲದೇ ಹಲವು ಬಾರಿ ಧಮ್ಮಿ ಹಾಕಿದ್ದರು. ನನಗೆ ಭಯವಾಗುತ್ತಿತ್ತು. ನನಗೆ ಅಸುರಕ್ಷಿತ ಭಾವ ಶುರುವಾಗಿತ್ತು. ನಾನು ಸಾಕಷ್ಟು ಜನರ ಸಹಾಯ ಕೇಳಿದೆ. ಆದರೆ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ."
"ನೀನು ಯಾಕೆ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎಂದು ಕೆಲವರು ಕೇಳುತ್ತಾರೆ. ಅದಕ್ಕೆ ಕಾರಣ ಇದೇ. ಮತ್ತೆ ಇದೇ ರೀತಿ ಆದರೆ ಹೇಗೆ? ಎನ್ನುವ ಭಯ ನನಗೆ. ನನಗೆ ನ್ಯಾಯಬೇಕು" ಎಂದು ಕೃಷ್ಣ ಮುಖರ್ಜಿ ಬರೆದುಕೊಂಡಿದ್ದಾರೆ. ಆಕೆಯ ಪೋಸ್ಟ್‌ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಆಕೆಯ ಬೆಂಬಲಕ್ಕೆ ನಿಂತು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ತಮ್ಮ ಪೋಸ್ಟ್‌ಗೆ ಕೃಷ್ಣ ಮುಖರ್ಜಿ "ಇದನ್ನು ಬರೆಯುವಾಗ ನನ್ನ ಕೈ ನಡುಗುತ್ತಿದೆ. ಆದರೆ ನಾನು ಬರೆಯಲೇಬೇಕಿತ್ತು. ಇದರಿಂದ ನಾನು ಆಂತಕ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದೇನೆ. ನಾನು ನಮ್ಮ ಎಮೋಷನ್ ಮುಚ್ಚಿಟ್ಟು, ಸೋಶಿಯಲ್ ಮೀಡಿಯಾದಲ್ಲಿ ಚೆಂದವಾಗಿ ಕಾಣಿಸಿಕೊಳ್ಳುತ್ತೇವೆ. ಆದರೆ ಇದು ವಾಸ್ತವ. ನನ್ನ ಕುಟುಂಬ ಸದಸ್ಯರು ಇದನ್ನು ಪೋಸ್ಟ್ ಮಾಡಬೇಡ ಎನ್ನುತ್ತಿದ್ದಾರೆ. ಕಾರಣ ಅವರಿಗೂ ಭಯ. ಅವರೆಲ್ಲಾ ಏನಾದರೂ ಮಾಡುತ್ತಾರೆ ಅಂತ. ಆದರೆ ನಾನು ಯಾಕೆ ಹೆದರಬೇಕು. ಇದು ನನ್ನ ಹಕ್ಕು ಮತ್ತು ನನಗೆ ನ್ಯಾಯಬೇಕು" ಹೇಳಿಕೊಂಡಿದ್ದಾರೆ.
'ಸರ್ವದಾನ್ ಇಂಡಿಯಾ',' ಸಿಐಡಿ', 'ಹಸ್ರತ್ತೇನ್' ಹೀಗೆ ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಕೃಷ್ಣ ಮುಖರ್ಜಿ ನಟಿಸಿದ್ದಾರೆ. ಬ್ಲ್ಯಾಕ್, 'ಇತ್ ವಾರಿ' ಎನ್ನುವ ಮ್ಯೂಸಿಕ್ ಆಲ್ಬಮ್‌ಗಳಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ಕೃಷ್ಣ ಮುಖರ್ಜಿ ಬಳಿಕ ಮುಂಬೈಗೆ ಶಿಫ್ಟ್ ಆಗಿದ್ದರು. ಕಳೆದ ಚಿರಾಗ್ ಬಟ್ಲಿವಾಲಾ ಎಂಬುವವರ ಕೈ ಹಿಡಿದರು.


Click it and Unblock the Notifications











