ಸಂಜಯ್ ದತ್ ದಿವ್ಯಮೌನ 257 ಜನರ ಪ್ರಾಣವನ್ನು ಬಲಿ ಪಡೆಯಿತು
ಟೆರೆರಿಸ್ಟ್‌ಗಳ ಟೆರರ್.. ಭಾರತವನ್ನ ಅದೆಷ್ಟೋ ಸಲ ರಕ್ತದ ಮಡುವಲ್ಲಿ ಮಲಗಿಸಿದೆ. ಮುಂಬೈ ಅಟ್ಯಾಕ್.. ಸಂಸತ್ ಮೇಲಿನ ದಾಳಿ.. ಹೈದ್ರಾಬಾದ್ ಬಾಂಬ್ ಬ್ಲ್ಯಾಸ್ಟ್.. ಒಂದಾ.. ಎರಡಾ..ಒಂದರ ಹಿಂದೊಂದು ದಾಳಿ ನಡೀತಾನೇ ಇದೆ. ಪ್ರತಿ ಬಾರಿ ಬ್ಲ್ಯಾಸ್ಟ್ ಆದಾಗ್ಲೂ ಪ್ರತಿಯೊಬ್ಬರೂ, ಒಬ್ಬರ ಮೇಲೆ ಇನ್ನೊಬ್ಬರ ತಪ್ಪುಗಳನ್ನು ಹೋರಿಸಿ ಕೈ ತೊಳೆದುಕೊಂಡ್ಬಿಡ್ತಾರೆ. ಇನ್ನೊಂದಷ್ಟ್ ಸಲಾ ಅಪರಾಧಿಯನ್ನು ಹಿಡಿಯೋವಲ್ಲಿ ನಮ್ಮ ಸಿಸ್ಟಮ್ ಯಶಸ್ವಿಯಾಗುತ್ತೆ.
ಇದಕ್ಕೆ ಕಸಬ್ ಮತ್ತು ಅಫ್ಜಲ್ ಗುರೂಗಾದ ಶಿಕ್ಷೆ ಸಾಕ್ಷಿ. ಆದ್ರೆ ಇದೆಲ್ಲದರ ಹಿಂದಿನ ವ್ಯಕ್ತಿ. ಭಾರತದ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ ದಾವೂದ್ ಎಲ್ಲಿದ್ದಾನೆ. ಇಷ್ಟ್ ದಿನಾ ಆದ್ರೂ ದಾವೂದ್ ಪೊಲೀಸರ ಕೈಗೆ ಯಾಕೆ ಸಿಕ್ಕಿಲ್ಲ ಸಿಕ್ತಿಲ್ಲ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

ಇಂಥ ದಾವೂದ್ ಅದೆಲ್ಲೋ ಕುಳಿತುಕೊಂಡು 1993ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದ. ಮಾರ್ಚ್ 12-1993ರಂದು ಮಾಯಾನಗರಿಯ ನಾನಾ ಕಡೆ ನಡೆದ ಈ ದಾಳಿಯಲ್ಲಿ 257 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. 700ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಇನ್ನು ಇದೇ ಪ್ರಕರಣದಲ್ಲಿ ಸಂಜಯ್ ದತ್ ಕೈವಾಡ ಕೂಡ ಇತ್ತು.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಹಿನ್ನೆಲೆ ಟಾಡಾ (Terrorist and Disruptive Activities (Prevention) Act) ಅಡಿಯಲ್ಲಿ ಏಪ್ರಿಲ್ 19-1993ರಲ್ಲಿ ಬಂಧಿಸಲಾಗಿತ್ತು. ಆ ನಂತರ ಹಲವು ಬಾರಿ ಜೈಲಿನ ಒಳ ಮತ್ತು ಹೊರ ಇದ್ದ ಸಂಜಯ್ ದತ್ ಮೇ 16-2013ರಲ್ಲಿ ನ್ಯಾಯಾಲಯಕ್ಕೆ ಶರಣಾದರು. ಫೆಬ್ರವರಿ 25-206ರಂದು ಬಿಡುಗಡೆಯಾದರು. ಇಡೀ ಪ್ರಕರಣದಲ್ಲಿ ಒಟ್ಟಾರೆಯಾಗಿ ಒಂದಲ್ಲ.. ಎರಡಲ್ಲ.. ಐದು ವರ್ಷ ಜೈಲುವಾಸವನ್ನು ಕೂಡ ಅನುಭವಿಸಿದರು.
ಇವತ್ತು ಕೂಡ ಮುಂಬೈ ಬ್ಲಾಸ್ಟ್ ವಿಚಾರ ಸದ್ದು ಮಾಡಿದಾಗೆಲ್ಲ ಸಂಜಯ್ ದತ್ ಹೆಸರು ಮುನ್ನೆಲೆಗೆ ಬರುತ್ತೆ. ಚರ್ಚೆಯಾಗುತ್ತೆ. ಹೀಗಿರುವಾಗ ಇದೀಗ ಸಂಜಯ್ ದತ್ ಮನಸ್ಸು ಮಾಡಿದ್ದರೆ ಅವತ್ತು 257ಜನರ ಪ್ರಾಣವನ್ನು ಉಳಿಸಬಹುದಿತ್ತು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ, ರಾಜ್ಯಸಭಾ ನಾಮನಿರ್ದೇಶಿತರೂ ಆಗಿರುವ ಮತ್ತು ಮುಂಬೈ ಬ್ಲ್ಯಾಸ್ಟ್ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದ ಉಜ್ವಲ್ ನಿಕಮ್ ಹೇಳಿದ್ದಾರೆ. ''NDTV''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಉಜ್ವಲ್ ನಿಕಮ್.
ಹೌದು, ಈ ಕುರಿತು ಮಾತನಾಡಿರುವ ಉಜ್ವಲ್ ನಿಕ್ಕಮ್, ಅವತ್ತು ಅಬು ಸಲೇಂನ ಬಲಗೈ ಭಂಟ ದಾವೂದ್ ಇಬ್ರಾಹಿಂನ ವ್ಯಾನ್‌ನ ಸಂಜಯ್ ದತ್ ಮನೆಗೆ ತಂದಿದ್ದ. ಆ ವ್ಯಾನ್ನಲ್ಲಿ ಹಲವಾರು ಬಾಂಬ್ಗಳು, ಎಕೆ 47 ಬಂದೂಕುಗಳು, ಹ್ಯಾಂಡ್ ಗ್ರನೇಡ್ಗಳು ಇದ್ದವು, ಈ ವಿಚಾರ ಸಂಜಯ್ ದತ್ ಗೆ ಕೂಡ ಗೊತ್ತಿತ್ತು ಹೀಗಾಗಿಯೇ ಕೆಲವು ಬಂದೂಕು, ಹ್ಯಾಂಡ್ ಗ್ರೆನೇಡ್ಗಳನ್ನು ಸಂಜಯ್ ದತ್ ಸಹ ತೆಗೆದುಕೊಂಡಿದ್ದರು ಎಂದು ಹೇಳಿದ್ಧಾರೆ.
ಮುಂದುವರೆದು ಆದರೆ ಆ ನಂತರ ತಾನು ತೆಗೆದುಕೊಂಡ ಹ್ಯಾಂಡ್ ಗ್ರೇನೇಡ್ ಮತ್ತು ಬಂಧೂಕನ್ನು ಮರಳಿಸಿದ್ದ ಸಂಜಯ್ ದತ್ ತನ್ನ ಬಳಿ ಒಂದು ಎಕೆ-47 ಬಂದೂಕನ್ನು ಮಾತ್ರ ಇಟ್ಟುಕೊಂಡಿದ್ದ ಎಂದಿರುವ ಉಜ್ವಲ್ ನಿಕ್ಕಮ್, ಒಂದು ವೇಳೆ ಮೌನಕ್ಕೆ ಶರಣಾಗದೇ ಆ ವ್ಯಾನ್‌ನ ಬಗ್ಗೆ ಪೊಲೀಸರಿಗೆ ಸಂಜಯ್ ದತ್ ಅವತ್ತೇ ಮಾಹಿತಿ ನೀಡಿದ್ದಿದ್ದರೆ ಮುಂಬೈ ಬ್ಲಾಸ್ಟ್ ಖಂಡಿತ ನಡೆಯುತ್ತಿರಲಿಲ್ಲ, 257 ಮಂದಿ ಸಾವನ್ನಪ್ಪುತ್ತಿರಲಿಲ್ಲ ಎಂದು ಹೇಳಿದ್ಧಾರೆ.
ಸುನಿಲ್ ದತ್ ಅವರ ರಾಜಕೀಯ ಭವಿಷ್ಯ ಇದಕ್ಕೆ ಅಡ್ಡಿಯಾಗಿರಬಹುದು ಎಂದು ಕೂಡ ಹೇಳಿರುವ ಉಜ್ವಲ್ ನಿಕ್ಕಮ್, ಸುನಿಲ್ ದತ್ ಸಹಾಯವನ್ನು ಬೇಡಿ ಬಾಳಾಸಾಹೇಬ್ ಠಾಕ್ರೆ ಅವರ ಬಳಿ ಹೋಗಿದ್ದರು ಅವರು ಸಹಾಯ ಮಾಡಲು ಕೂಡ ಬಯಸಿದ್ದರು ಆದರೆ ಸಂಜಯ್ ದತ್ ಒಪ್ಪಲಿಲ್ಲ ಎಂದಿರುವ ಉಜ್ವಲ್ ನಿಕ್ಕಮ್, ಸಂಜಯ್ ದತ್ ಆಗಿನ ಪರಿಸ್ಥಿತಿಯಲ್ಲಿ ಮುಗ್ಧರಾಗಿದ್ದರು. ಅವರಿಗೆ ಬಂದೂಕುಗಳ ಬಗ್ಗೆ ಆಕರ್ಷಣೆ ಇದ್ದಿದ್ದರಿಂದ ಆಯುಧವನ್ನು ಇಟ್ಟುಕೊಂಡಿದ್ದರು ಎಂದು ಹೇಳಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಅವರು ಅಪರಾಧ ಮಾಡಿದ್ದಾರೆ ಅದಕ್ಕೆ ಅವರು ಶಿಕ್ಷೆಯನ್ನು ಕೂಡ ಅನುಭವಿಸಿದ್ದಾರೆ. ಆದರೆ ಅವರದ್ದು ನೇರವಾದ ವ್ಯಕ್ತಿತ್ವ ನಾನು ಅವರನ್ನು ಮುಗ್ಧ ಎಂದು ಪರಿಗಣಿಸುತ್ತೇನೆ ಎಂದು ಕೂಡ ನಿಕ್ಕಮ್ ಹೇಳಿದ್ದಾರೆ.
ಸದ್ಯ ನಿಕ್ಕಮ್ ಅವರ ಈ ಹೇಳಿಕೆಯಿಂದ ಮುಂಬೈ ದಾಳಿಯಲ್ಲಿ ಸಂಜಯ್ ದತ್ ಅವರ ಪಾತ್ರದ ಕುರಿತು ಮತ್ತೆ ಚರ್ಚೆಗಳು ಶುರುವಾಗಿವೆ. ಸಂಜಯ್ ದತ್ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











