ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿಕೊಂಡ ಬಾಲಿವುಡ್ ನಟಿ ನುಶ್ರತ್ ಭರುಚಾ; ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದ ತಂಡ
ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇಬ್ಬರ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಭಾರತದ ಚಿತ್ರರಂಗಕ್ಕೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನಟಿ ನುಶ್ರತ್ ಭರುಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ನುಶ್ರತ್ ಭರುಚಾ ತಂಡದ ಸದಸ್ಯರ ಹೇಳಿಕೆಯೊಂದರಲ್ಲಿ "ನುಶ್ರತ್ ದುರದೃಷ್ಟವಶಾತ್ ಇಸ್ರೇಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು. ನಾವು ಅವರೊಂದಿಗೆ ಕೊನೆಯ ಬಾರಿಗೆ ಶನಿವಾರ ಮಧ್ಯಾಹ್ನ ಸುಮಾರು 12.30 ಕ್ಕೆ ಮಾತನಾಡಿದ್ದೇವೆ" ಎಂದು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ 12.30 ರ ವರೆಗೂ ಅವರು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿದ್ದರು. ಸುರಕ್ಷತಾ ಕ್ರಮಗಳಿಗಾಗಿ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಆದರೆ, ಆದಾದ ಬಳಿಕ ಮತ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಉತ್ತಮ ಆರೋಗ್ಯ ಮತ್ತು ಯಾವುದೇ ಕಷ್ಟಕ್ಕೆ ಒಳಗಾಗದೆ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ
ಶನಿವಾರ, ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗಿದೆ. ಇದರಿಂದ ಕನಿಷ್ಠ 200 ಜನರು ಸಾವನ್ನಪ್ಪಿದ್ದು, 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲಿ ಸೇನೆಯ ಪ್ರಕಾರ ಹಮಾಸ್ ಉಗ್ರಗಾಮಿಗಳು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ. ಇದರ ಜೊತೆಗೆ ಗಡಿಯ ಬಳಿ ಕಾವಲಿಗೆ ಇದ್ದ ಹಲವಾರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ವೀಡಿಯೊ ಹೇಳಿಕೆ ನೀಡಿದ್ದು, ಇಸ್ರೇಲ್ ಯುದ್ಧದಲ್ಲಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿದ ಹಮಾಸ್ ಖಂಡಿತ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ನಾವು ಯುದ್ಧದಲ್ಲಿದ್ದೇವೆ, ಕಾರ್ಯಾಚರಣೆಯಲ್ಲ. ಹಮಾಸ್ ಇಸ್ರೇಲ್ ರಾಜ್ಯ ಮತ್ತು ಅದರ ನಾಗರಿಕರ ವಿರುದ್ಧ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ನಾನು ಈ ಮೊದಲು ನುಸುಳಿರುವ ಭಯೋತ್ಪಾದಕರ ಶಿಬಿರಗಳನ್ನು ನಾಶ ಮಾಡಲು ಆದೇಶಿಸಿದೆ. ಈಗ ದೊಡ್ಡ ಪ್ರಮಾಣದ ಮೀಸಲು ಪಡೆಯನ್ನು ಸಜ್ಜುಗೊಳಿಸಲು ಆದೇಶಿಸಲಾಗಿದೆ. ಶತ್ರುಗಳು ಇಷ್ಟು ದಿನ ಕಲಿಯದ ಹೊಸ ಪಾಠ ಕಲಿಯುತ್ತಾರೆ" ಎಂದು ಕಠಿಣ ಎಚ್ಚರಿಕೆ ನೀಡಿದ್ದರು.
ಇನ್ನು, ಇಸ್ರೆಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್‌ನಲ್ಲಿ, "ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಯುದ್ಧದಲ್ಲಿ ಬಲಿಯಾದ ಮುಗ್ಧ ಬಲಿಪಶುಗಳು ಮತ್ತು ಅವರ ಕುಟುಂಬಗಳ ಜೊತೆಗೆ ನಮ್ಮ ಸಂತಾಪ ಮತ್ತು ಪ್ರಾರ್ಥನೆ ಇರುತ್ತದೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಘೋಷಿಸಿದ್ದಾರೆ.


Click it and Unblock the Notifications











