ಲಾಪತಾ ಲೇಡೀಸ್ - ಶೈತಾನ್- ಯೋಧ-ಬಸ್ತರ್ ; ಮಾರ್ಚ್ ನಲ್ಲಿ ಬರುತ್ತಿರುವ ಬಾಲಿವುಡ್ ನ ನಿರೀಕ್ಷಿತ ಚಿತ್ರಗಳು..!
ಕಳೆದ ವರ್ಷ ದುಡ್ಡು ಎಣಿಸಿ ಸುಸ್ತಾಗಿದ್ದ ಬಾಲಿವುಡ್ ,ಈ ವರ್ಷ ಇನ್ನೂ ತೆವಳುತ್ತಿದೆ. ನಿಜಾ, ಹೃತಿಕ್ ರೋಷನ್ ಅಭಿನಯದ ಫೈಟರ್ 200 ಕೋಟಿಯನ್ನ ಗಳಿಸಿದೆ. ಆದರೆ ಅದರ ವಿಸ್ತಾರ ಹಾಗೂ ಅದಕ್ಕೆ ಸಿಕ್ಕ ಪ್ರಚಾರವನ್ನ ನೋಡಿದರೆ 200 ಕೋಟಿಯ ಗಳಿಕೆ ಏನೂ ಅಲ್ಲ. ಇನ್ನೂ ಶಾಹೀದ್ ಕಪೂರ್ ಅಭಿನಯದ ಚಿತ್ರದ ಕಥೆ ಕೂಡ ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ. ಯಾಮಿ ಗೌತಮ್ ಅಭಿನಯದ ಆರ್ಟಿಕಲ್ 370ಯ ಆರಂಭ ಉತ್ತಮವಾಗಿತ್ತಷ್ಟೇ.
ಈ ಚಿತ್ರದ ಕಥೆ ಕೂಡ ಮುಗಿದ ಅಧ್ಯಾಯ ಎಂಬ ಮಾತು ಈಗ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಹಿಂದಿ ಉದ್ಯಮದಲ್ಲಿ ವಾತಾವರಣ ಬಿಸಿಯಾಗಿದೆ. ಅಲ್ಲಿನ ಪಂಡಿತರ ಮುಖದಲ್ಲಿ ಚಿಂತೆಯ ಗೆರೆ ಮೂಡಿದೆ. ಇದರ ಜೊತೆಯಲ್ಲಿ ಮಾರ್ಚ್ ನಲ್ಲಿ ಪವಾಡ ನಡೆಯಬಹುದೆಂಬ ಭರವಸೆ ಕೂಡ ಅಲ್ಲಿನವರಲ್ಲಿದೆ. ಯಾಕೆಂದರೆ ನಿರೀಕ್ಷೆಯನ್ನ ಹುಟ್ಟಿಹಾಕಿರುವ ಒಂದಷ್ಟು ಸಿನಿಮಾಗಳು ಮಾರ್ಚ್ ನಲ್ಲಿ ಬಿಡುಗಡೆಯಾಗ್ತಿವೆ. ಆ ಪೈಕಿ ಲಾಪತಾ ಲೇಡಿಸ್ ಮೊದಲನೆಯದ್ದು.

ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಲಾಪತಾ ಲೇಡಿಸ್ ಚಿತ್ರಕ್ಕಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರದಲ್ಲಿ ಸ್ಟಾರ್ ಅಟ್ರ್ಯಾಕ್ಷನ್ ಇಲ್ಲ. ಬದಲಿಗೆ ಕಥೆಯೇ ಇಲ್ಲಿ ಹೀರೋ. ಕಿರಣ್ ರಾವ್ ಹಾಗೂ ಕಥೆಯ ಮೇಲೆ ನಂಬಿಕೆ ಇಟ್ಟು ಕಡಿಮೆ ಹಣವನ್ನ ಹೂಡಿ ಆಮೀರ್ ಖಾನ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಮಾಜಿ ಪತ್ನಿ ಮೇಲಿನ ಮನಸ್ತಾಪ ಮರೆತು, ಭಾರತದೆಲ್ಲೆಡೆ ಚಿತ್ರದ ಪ್ರಚಾರವನ್ನೂ ಮಾಡಿದ್ದಾರೆ. ಟ್ರೇಲರ್ ಮೂಲಕ ಕುತೂಹಲ ಕೆರಳಿಸಿರುವ ಈ ಚಿತ್ರ ಮಾರ್ಚ್ 01ಕ್ಕೆ ಬಿಡುಗಡೆಯಾಗಲಿದೆ
ಅಜಯ್ ದೇವಗನ್, ಆರ್ ಮಾಧವನ್ ಹಾಗೂ ಜ್ಯೋತಿಕಾ ಅಭಿನಯದ ಶೈತಾನ್, ಮಾರ್ಚ್ 08ಕ್ಕೆ ಬೆಳ್ಳಿ ತೆರೆಗೆ ಲಗ್ಗೆ ಇಡಲಿದೆ. ವಿಕಾಸ್ ಬಹ್ಲ್ ಈ ಚಿತ್ರದ ಸೂತ್ರಧಾರ. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಇವರದ್ದು.
ಇನ್ನೂ ಅಭಿನಯದ ವಿಚಾರದಲ್ಲಿ ಅಜಯ್ ದೇವಗನ್, ಆರ್ ಮಾಧವನ್ ಹಾಗೂ ಜ್ಯೋತಿಕಾ ಮೂವರು ನಟ ಭಯಂಕರರು. ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತರುವ ಸಾಮರ್ಥ್ಯವನ್ನೂ ಹೊಂದಿರುವವರು. ಶೈತಾನ್ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ ಎಂಬ ಭವಿಷ್ಯವಾಣಿ ಕೇಳಿ ಬರಲು ಇವೆಲ್ಲವೂ ಕಾರಣ. ಫಲಿತಾಂಶ ಮಾರ್ಚ್ 08ಕ್ಕೆ ಗೊತ್ತಾಗಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಅಭಿನಯದ ಯೋಧ ಸಿನಿಮಾ ಕೂಡ ಇದೇ ಮಾರ್ಚ್ 15ಕ್ಕೆ ತೆರೆಗೆ ಬರಲಿದೆ. ಕರಣ್ ಜೋಹರ್ ನಿರ್ಮಾಣದಲ್ಲಿ ಸಿದ್ಧವಾದ ಯೋಧ ಚಿತ್ರವನ್ನ ಸಾಗರ್ ಅಂಬ್ರೆ ನಿರ್ದೇಶಿಸಿದ್ದಾರೆ. ಚಿತ್ರದ ಟೀಸರ್ ಒಂದು ಹಂತಕ್ಕೆ ಸದ್ದು ಮಾಡಿದೆ. ಹಾಡುಗಳು ಗಮನ ಸೆಳೆಯುತ್ತಿವೆ. ಇನ್ನೂ ಪ್ರಚಾರವನ್ನೂ ಕೂಡ ಅದ್ಧೂರಿಯಾಗಿ ಮಾಡಲಾಗ್ತಿದೆ. ಗೊತ್ತಿಲ್ಲ ಬಾಲಿವುಡ್ ಪಾಲಿಗೆ ಯೋಧ ಗೇಮ್ ಚೆಂಜರ್ ಆದರೂ ಆಗಬಹುದು
ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಚರಿತ್ರೆಯನ್ನ ಕೆತ್ತಿದ ಸುದೀಪ್ತೋ ಸೇನ್ ಹಾಗೂ ಅದಾ ಶರ್ಮಾ, ಮಾರ್ಚ್ 15ಕ್ಕೆ ಬಸ್ತರ್ ಕಥೆಯನ್ನ ನಿಮ್ಮ ಜೊತೆ ಹಂಚಿಕೊಳ್ಳಲಿದ್ದಾರೆ. ಅಲ್ಲಿ ಲವ್ ಜಿಹಾದ್ ಸ್ಟೋರಿ ಹೇಳಿದ್ದ ಸುದೀಪ್ತೋ ಸೇನ್ ಇಲ್ಲಿ ನಕ್ಸಲ್ ಕಥೆಯನ್ನ ಹೇಳ್ತಿದ್ದಾರೆ. ದಿ ಕೇರಳ ಸ್ಟೋರಿ ಚಿತ್ರವನ್ನ ನಿರ್ಮಾಣ ಮಾಡಿದ್ದ ವಿಪುಲ್ ಶಾ, ಈ ಚಿತ್ರಕ್ಕೂ ಕಾಸು ಹಾಕಿದ್ದಾರೆ
ಬಾಲನಟನಾಗಿ, ನಟನಾಗಿ ಹೆಸರು ಮಾಡಿದ ಕುನಾಲ್ ಖೇಮು ಈಗ ನಿರ್ದೇಶಕನ ಕುರ್ಚಿಯನ್ನ ಅಲಂಕರಿಸಿದ್ದಾರೆ. ಮಡಗಾಂವ್ ಎಕ್ಸ್‌ಪ್ರೆಸ್ ಎಂಬ ಚಿತ್ರವನ್ನ ನಿರ್ದೇಶಿಸಿದ್ದಾರೆ. ಮಿರ್ಜಾಪುರನ ದಿವ್ಯೆಂದು, ಸ್ಕ್ಯಾಮ್ ನ ಪ್ರತೀಕ್ ಗಾಂಧಿ ಲೈಲಾ ಮಜ್ನುನ ಅವಿನೀಶ್ ತಿವಾರಿ ಈ ಚಿತ್ರದ ಕಥಾನಾಯಕರು. ಚಿತ್ರ ಮಾರ್ಚ್ 22ಕ್ಕೆ ಬಿಡುಗಡೆಯಾಗಲಿದೆ.

ರಣದೀಪ್ ಹೂಡಾ ನಿರ್ದೇಶನದ, ವೀರ್ ಸಾವರ್ಕರ್ ಅವರ ಜೀವನಾಧಾರಿತ ಚಿತ್ರ ಸಾವರ್ಕರ್ ಕೂಡ ಮಾರ್ಚ್ 22ಕ್ಕೆ ಬಿಡುಗಡೆಯಾಗಲಿದೆ. ಬಾಲಿವುಡ್ ನವರ ಪಾಲಿಗೆ ಈ ಚಿತ್ರ ಟ್ರಂಪ್ ಕಾರ್ಡ್ ಆದರೂ ಆಗಬಹುದು. ಆ ಎಲ್ಲ ಲಕ್ಷಣ ಸದ್ಯಕ್ಕೆ ಕಂಡು ಬರುತ್ತಿದೆ.
ಟಬು, ಕರೀನಾ ಕಪೂರ್ ಖಾನ್ ಮತ್ತು ಕೃತಿ ಸನೋನ್ ನಟಿಸಿರುವ ಕ್ರೂ ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆಯಾಗಲಿದೆ. ಏಕ್ತಾ ಕಪೂರ್ ಮತ್ತು ರಿಯಾ ಕಪೂರ್ ನಿರ್ಮಾಣದ ಈ ಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಟಾಕ್ ಆಫ್ ದಿ ಟೌನ್ ಆಗಿದ್ದು, ಚಿತ್ರ ಗೆಲ್ಲುತ್ತೆ ಎಂಬ ವಿಶ್ವಾಸ ಮುಂಬೈ ಮಂದಿಗೆ ಇದೆ.
ಹೀಗೆ ಸೋಲೇ ಗೆಲುವಿನ ಸೋಪಾನ ಎಂಬಂತೆ, ಎರಡು ತಿಂಗಳ ನಷ್ಟ-ಕಷ್ಟವನ್ನ ಮಾರ್ಚ್ ಮರೆಸುತ್ತೆ, ಗೆಲುವು ಸಿಕ್ಕೇ ಸಿಗುತ್ತೆ ಎಂದು ಹಿಂದಿ ಚಿತ್ರರಂಗದ ಖ್ಯಾತನಾಮರು ಆಸೆಗಣ್ಣಿನಿಂದ ಮಾರ್ಚ್ ನತ್ತ ನೋಡುತ್ತಿದೆ. ಎರಡು ತಿಂಗಳಿಂದ ಬರಗೆಟ್ಟು ಕುಳಿತಿರುವ ಬಾಲಿವುಡ್ ಗೆ ಮಾರ್ಚ್ ನಲ್ಲಾದರೂ ಬ್ಲಾಕ್ ಬಸ್ಟರ್ ಸಮಾಚಾರ ಸಿಗುತ್ತಾ..? ಲೆಟ್ಸ್ ಸೀ


Click it and Unblock the Notifications











