ಸಿಮ್ ಕಾರ್ಡ್ ಬಟ್ಟೆ ಧರಿಸಿದ ಉರ್ಫಿಗೆ ಪೊಲೀಸರ ಕಾಟ: ಇಲ್ಲಿದೆ ಅಸಲಿ ಕಥೆ
ಬಾಲಿವುಡ್ ನಟಿಯರು ಇತ್ತೀಚಿಗೆ ಹಲವು ವಿಚಿತ್ರ ವೇಷ-ಭೂಷಣದಲ್ಲಿ ನೋಡುಗರ ಗಮನ ಸೆಳೆಯುತ್ತಿರುತ್ತಾರೆ. ಒಮ್ಮೊಮ್ಮೆ ಅವರು ಧರಿಸುವ ಬಟ್ಟೆಗಳು ವಾವ್ ಎನಿಸಿದರೆ, ಕೆಲ ನಟಿಯರು ಧರಿಸುವ ಬಟ್ಟೆ ಹಾಸ್ಯಾಸ್ಪದ ವಾಗಿರುತ್ತದೆ. ಇನ್ನೂ ಕೆಲವೊಮ್ಮೆ ಬಾಲಿವುಡ್ ನಟಿಯರು ಧರಿಸುವ ಕಾಸ್ಟ್ಯೂಮ್ ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಅಂತಹ ವಿಚಿತ್ರ ಬಟ್ಟೆಗಳನ್ನು ಸಹ ನಟಿಯರು ಧರಿಸುತ್ತಾರೆ.
ಬಾಲಿವುಡ್ ನಟಿ ಉರ್ಫಿ ಜಾವೇದ್, ವಿವಿಧ ಬಗೆಯ ಕಾಸ್ಟ್ಯೂಮ್ ಧರಿಸುವುದರಲ್ಲಿ ಎತ್ತಿದ ಕೈ. ಉರ್ಫಿ ಧರಿಸುವ ಬಟ್ಟೆಗಳನ್ನು ನೋಡಿದ ಪ್ರೇಕ್ಷಕರು ಈಕೆಗೆ ಡಿಸೈನರ್ ಯಾರಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಹಿಂದಿ ಬಿಗ್ ಬಾಸ್ ಓಟಿಟಿಯ ಸ್ಫರ್ಧಿಯಾಗಿದ್ದ ಉರ್ಫಿ ಬಿಗ್ ಬಾಸ್ ಮನೆಯೊಳಗೂ ವಿಚಿತ್ರ ಬಟ್ಟೆಗಳನ್ನು ಧರಿಸುತ್ತಿದ್ದರು. ಬಿಗ್ ಬಾಸ್ ಸ್ಫರ್ಧಿಯಾಗಿ ಖ್ಯಾತಿ ಹೆಚ್ಚಿಸಿಕೊಂಡ ಉರ್ಫಿ ಇತ್ತೀಚಿಗೆ ಬಗೆ ಬಗೆಯ ಕಾಸ್ಟ್ಯೂಮ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೊಸ ಹೊಸ ವಿನ್ಯಾಸದ ಬಟ್ಟೆಯನ್ನು ಧರಿಸುವ ಉರ್ಫಿ, ಈ ಹಿಂದೆ ಚಿಟ್ಟೆ, ಗೋಣಿ ಚೀಲ, ಇತ್ಯಾದಿ ವಸ್ತುಗಳಿಂದ ಮಾಡಿದ ಬಟ್ಟೆ ಧರಿಸಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಉರ್ಫಿ ಧರಿಸಿದ ಬಟ್ಟೆ ಟ್ರೆಂಡ್ ಕೂಡ ಆಗಿದೆ. ಇನ್ನು ದಿನಕ್ಕೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಉರ್ಫಿಯನ್ನು ಪೊಲೀಸರು ಹುಡುಕಿ ಬಂದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದು, ಅದರ ಹಿಂದಿನ ಅಸಲಿ ಕತೆ ಇಲ್ಲಿದೆ.

ಇತ್ತೀಚಿಗೆ ಉರ್ಫಿ ಸಿಮ್ ಕಾರ್ಡ್‌ನಿಂದ ಮಾಡಿದ ಬಟ್ಟೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಉರ್ಫಿ ಧರಿಸಿದ ಬಟ್ಟೆ ನೋಡಿ ಪೊಲೀಸರು ತಲೆಕೆಡಿಸಿಕೊಂಡಿದ್ದು, ಆಕೆಯನ್ನು ಹುಡುಕಿ ಬಂದು ವಿಚಾರಣೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದರ ಹಿಂದಿನ ಅಸಲಿ ಕತೆಯೇ ಬೇರೆ ಇದೆ.
ಇನ್ನೇನು ಕೆಲವೇ ದಿನಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ 'ಜಮ್ತಾರಾ ಸೀಸನ್ 2' ಆರಂಭ ಆಗುತ್ತಿದೆ. ಹೀಗಾಗಿ ಜಮ್ತಾರಾ ಸೀಸನ್ 2 ಪ್ರಚಾರಕ್ಕಾಗಿ ವಿಡಿಯೋವೊಂದನ್ನು ಮಾಡಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಸಿಮ್ ಕಾರ್ಡ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಡಿಯೋದಲ್ಲಿ ಆರಂಭದಲ್ಲಿ ಉರ್ಫಿ ಸ್ಟೈಲಿಶ್ ಬಟ್ಟೆಯಲ್ಲಿ ಮಿಂಚುತ್ತಿರುತ್ತಾರೆ. ಅಲ್ಲಿಗೆ ಬಂದ 'ಜಮ್ತಾರಾ ಸೀಸನ್ 2' ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೋನಿಕಾ ಪನ್ವಾರ್ ಹಾಗೂ ಸ್ಪರ್ಶ್ ಶ್ರೀವಾಸ್ತವ್ ಅವರು ಉರ್ಫಿ ಬಳಿ ಸಂಪೂರ್ಣ ಸಿಮ್ ಕಾರ್ಡ್‌ನಿಂದ ಮಾಡಿದ ಹೊಸ ಬಟ್ಟೆ ಹಿಡಿದು ಬರುತ್ತಾರೆ. ಈ ಬಟ್ಟೆಯನ್ನು ನೋಡಿ ಉರ್ಫಿ ಫುಲ್ ಖುಷಿಯಾಗಿ ಬಟ್ಟೆ ಖರೀದಿಸಲು ಮುಂದಾಗುತ್ತಾರೆ. ಈ ಬಟ್ಟೆಗೆ 5 ಲಕ್ಷ ರೂಪಾಯಿ ಎಂದು ಸ್ಪರ್ಶ್ ಹೇಳುತ್ತಾರೆ. ಹೊಸ ವಿನ್ಯಾಸದ ಬಟ್ಟೆ ನೋಡಿದ ಉತ್ಸಾಹದಲ್ಲಿದ್ದ ಉರ್ಫಿ ಅದನ್ನು 5.20 ಲಕ್ಷ ರೂಪಾಯಿ ನೀಡಿ ಅದನ್ನು ಖರೀದಿ ಮಾಡುತ್ತಾರೆ. ಬಳಿಕ ಆಕೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಮೋನಿಕಾ ಪನ್ವಾರ್ ಹಾಗೂ ಸ್ಪರ್ಶ್ ಶ್ರೀವಾಸ್ತವ್ ಅಲ್ಲಿಂದ ಪರಾರಿಯಾಗುತ್ತಾರೆ.
ಬಳಿಕ ಉರ್ಫಿ ಸಿಮ್‌ನಿಂದ ಮಾಡಿದ ಬಟ್ಟೆ ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ಪೊಲೀಸರು ನಟಿಯನ್ನು ಭೇಟಿಯಾಗುತ್ತಾರೆ. ಉರ್ಫಿಯನ್ನು ವಿಚಾರಣೆ ನಡೆಸಿದ ಪೊಲೀಸರು ಆಕೆ ಧರಿಸಿರುವ ಬಟ್ಟೆಯಲ್ಲಿನ ಸಿಮ್‌ಗಳ ಬಗ್ಗೆ ಮಾಹಿತಿ ಕೇಳುತ್ತಾರೆ. ಅಲ್ಲದೇ ಇದು ವಂಚನೆಯಲ್ಲಿ ಬಳಸಲಾದ ಸಿಮ್‌ಗಳು ಎಂದು ಹೇಳುತ್ತಾರೆ. ಇದನ್ನು ಕೇಳಿದ ಉರ್ಫಿ ಶಾಕ್ ಆಗುತ್ತಾರೆ. ಈ ವಿಡಿಯೋದಲ್ಲಿ ಮೋನಿಕಾ ಪನ್ವಾರ್ ಹಾಗೂ ಸ್ಪರ್ಶ್ ಶ್ರೀವಾಸ್ತವ್ ಉರ್ಫಿಗೆ ಮೋಸ ಮಾಡಿದ ರೀತಿಯಲ್ಲಿ ತೋರಿಸಲಾಗಿದೆ. 'ಜಮ್ತಾರಾ ಸೀಸನ್ 2' ಪ್ರಮೋಷನ್‌ಗಾಗಿ ಈ ವೀಡಿಯೋ ಮಾಡಲಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಉರ್ಫಿ ಧರಿಸಿದ್ದ ಬಟ್ಟೆಯಲ್ಲಿ ಬರೋಬ್ಬರಿ 2000 ಸಿಮ್ಕಾರ್ಡ್ಗಳನ್ನು ಬಳಕೆ ಮಾಡಲಾಗಿದೆ.


Click it and Unblock the Notifications











