ಕೈ ಮುಗಿದು ಕ್ರಿಕೆಟಿಗ ರಿಷಬ್ ಪಂತ್ ಕ್ಷಮೆ ಯಾಚಿಸಿದ ನಟಿ ಊರ್ವಶಿ ರೌಟೇಲಾ!
ಸಿನಿಮಾಗಳಿಗಿಂತ ಫ್ಯಾಷನ್ ಶೋಗಳಲ್ಲೇ ಹೆಚ್ಚು ಮಿಂಚುವ ಬೆಡಗಿ ಊರ್ವಶಿ ರೌಟೇಲಾ. ರಜಪೂತರ ಮನೆ ಹುಡುಗಿ ಊರ್ವಶಿ ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ನಟ ದರ್ಶನ್ ಜೋಡಿಯಾಗಿ ನಟಿಸಿದ್ದರು. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ನಟಿ ಊರ್ವಶಿ ರೌಟೇಲಾ ಟ್ವಿಟ್ ವಾರ್ ಭಾರೀ ಸದ್ದು ಮಾಡಿತ್ತು. ಕೊನೆಗೂ ಈ ಬಗ್ಗೆ ನಟಿ ಕ್ಷಮೆ ಕೇಳಿದ್ದಾರೆ.
ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಊರ್ವಶಿ "ರಿಷಬ್ ಪಂತ್ ನನ್ನ ಹಿಂದೆ ಬಿದ್ದಿದ್ದಾರೆ. ಇನ್ನಿಲ್ಲದಂತೆ ನನ್ನನ್ನು ಕಾಡಿದ್ದರು" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಿಷಬ್ "ಬಿಟ್ಟಿ ಪ್ರಚಾರಕ್ಕಾಗಿ ಕೆಲವರು ಏನೆಲ್ಲಾಆ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಬೇಸರವಾಗುತ್ತದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ನನ್ನನ್ನು ಬಿಟ್ಟು ಬಿಡಿ ಅಕ್ಕ" ಎಂದು ಇನ್‌ಸ್ಟಾಗ್ರಾಂನಲ್ಲಿ ತಿರುಗೇಟು ನೀಡಿದ್ದರು.
ಇನ್ನು ಇತ್ತೀಚೆಗೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕ್ ಕ್ರಿಕೆಟ್ ಪಂದ್ಯದ ವೇಳೆಯ ಊರ್ವಶಿ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಊರ್ವಶಿನ ನೋಡಿ ಪಾಕಿಸ್ತಾನಿ ಬೌಲರ್ ನಸೀಮ್ ಶಾ ನಕ್ಕಂತೆ, ಅದಕ್ಕೆ ಊರ್ವಶಿ ಕೂಡ ಪ್ರತಿಕ್ರಿಯಿದಂತೆ ಹಿಂದಿ ಸಾಂಗ್ ಸೇರಿಸಿ ಯಾರೋ ವಿಡಿಯೋ ಎಡಿಟ್ ಮಾಡಿ ತೇಲಿ ಬಿಟ್ಟಿದ್ದರು. ಇದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಊರ್ವಶಿ ಯಡವಟ್ಟು ಮಾಡಿಕೊಂಡಿದ್ದರು. ಇದರಿಂದ ನಟಿ ಸಾಕಷ್ಟು ಟ್ರೋಲ್ ಎದುರಿಸುವಂತಾಗಿತ್ತು.

ಆಗ ಕೂಡ 'ನಿನಗೆ ಭಾರತದವರು ಯಾರು ಬೇಡವೇ, ಪಾಕಿಸ್ತಾನದವನೇ ಬೇಕಾ?' ಅಂತೆಲ್ಲಾ ಕೆಲವರು ಟ್ರೋಲ್ ಮಾಡಿದ್ದರು. ಭಾರತ ತಂಡದ ಆಟಗಾರ ರಿಷಬ್ ಪಂತ್, ಊರ್ವಶಿ, ನಸೀಮ್ ಶಾ ಮೂವರ ಫೋಟೊಗಳನ್ನು ಸೇರಿಸಿ ಬಗೆ ಬಗೆಯ ಮೀಮ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು.
ಸದ್ಯ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಅವರಿಗೆ ಏನಾದರೂ ಸಂದೇಶ ಕಳುಹಿಸಿ ಎಂದು ಊರ್ವಶಿ ಹೇಳಲಾಯ್ತು. ಇದನ್ನು ನಿರೀಕ್ಷಿಸದ ನಟಿ ಮೊದಲಿಗೆ ಅವಕ್ಕಾದರು. "ನಾನು ಏನು ಹೇಳಬೇಕೆಂದಿದ್ದೇನೆಂದರೆ, ಏನು ಹೇಳುವುದು ಗೊತ್ತಾಗುತ್ತಿಲ್ಲ ಕ್ಷಮಿಸಿ, ನನ್ನನ್ನು ಕ್ಷಮಿಸಿ" ಎಂದು ಕೈ ಮುಗಿದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಇದಕ್ಕೆ ರಿಷಬ್ ಪಂತ್ ಏನು ಹೇಳುತ್ತಾರೋ ಕಾದು ನೋಡಬೇಕು.


Click it and Unblock the Notifications











