Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ನಿಧನ..!
ತಬಲಾ ನುಡಿಸುವ ಮೂಲಕವೇ ಅನೇಕರಿಗೆ ಹುಚ್ಚು ಹಿಡಿಸಿದವರು ಜಾಕಿರ್ ಹುಸೇನ್. ತಮ್ಮ ತಬಲಾದಿಂದನೇ ಎಲ್ಲರಿಂದ ವ್ಹಾ ಉಸ್ತಾದ್ ಎಂದು ಕರೆಸಿಕೊಳ್ಳುತ್ತಿದ್ದ ಸಂಗೀತ ಲೋಕದ ಮಾಂತ್ರಿಕ ಇಂದು ತಮ್ಮ 73ರ ಪ್ರಾಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜಾಕೀರ್ ಹುಸೇನ್ ಅವರಿಗೆ ರಕ್ತದೊತ್ತಡದ ಸಮಸ್ಯೆ ಕೂಡ ಇತ್ತು ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಜಾಕೀರ್ ಹುಸೇನ್ ಕಳೆದೆರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು ಎನ್ನುವ ಮಾಹಿತಿಯನ್ನು ಅವರ ವ್ಯವಸ್ಥಾಪಕಿ ನಿರ್ಮಲಾ ಬಚಾನಿ ಹೇಳಿದ್ದು ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

1998ರಲ್ಲಿ ಪದ್ಮಶ್ರೀ 2002ರಲ್ಲಿ ಪದ್ಮಭೂಷಭ ಆ ನಂತರ 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದ ಜಾಕೀರ್ ಹುಸೇನ್ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸಂಬಂಧಿ ಈ ಹಿಂದೆ ಹೇಳಿದ್ದರು. ಅಂದ್ಹಾಗೇ ಭಾರತೀತ ಮತ್ತು ವಿಶ್ವ ಮಟ್ಟದ ಸಂಗೀತಗಾರರಲ್ಲಿ ಖ್ಯಾತಿ ಪಡೆದಿದ್ದ ಜಾಕೀರ್ ಹುಸೇನ್ ತಬಲಾ ವಾದಕ್ ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರರಾಗಿದ್ದರು. ತಮ್ಮ 07ನೇ ವಯಸ್ಸಿನಲ್ಲಿಯೇ ತಬಲಾ ನುಡಿಸುವುದನ್ನು ಕಲಿತ ಜಾಕೀರ್ ಕೇವಲ 12ರ ಪ್ರಾಯದಲ್ಲಿ ಭಾರತದಾದ್ಯಂತ ತಮ್ಮ ತಬಲಾ ಪ್ರದರ್ಶನದ ಮೂಲಕ ಹೆಸರುವಾಸಿಯಾಗಿದ್ದರು. ಅದರಲ್ಲಿಯೂ ಇವರ ನೇತೃತ್ವದಲ್ಲಿ ಬಂದ ವ್ಹಾ ತಾಜ್ ಜಾಹೀರಾತು ಇವತ್ತು ಕೂಡ ಅನೇಕ ಭಾರತೀಯರ ಮನಸಿನಲ್ಲಿ ಹಸಿರಾಗಿದೆ.
ಇಂಥಾ ಜಾಕಿರ್ ಹುಸೇನ್ ತಮ್ಮ ಮೊದಲ ಸಂಗೀತ ಕಚೇರಿಯನ್ನು ಅಮೆರಿಕಾದಲ್ಲಿ ಪ್ರದರ್ಶಿಸಿದರು. ಅವರ ಚೊಚ್ಚಲ ಆಲ್ಬಂ 'ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್' 1973ರಲ್ಲಿ ಬಿಡುಗಡೆಯಾಗಿತ್ತು. ವಿಶಿಷ್ಟ ಪ್ರತಿಭೆಗೆ ಹೆಸರುವಾಸಿಯಾದ ಅವರು ಯಾವುದೇ ಸಮತಟ್ಟಾದ ಮೇಲ್ಮೈಯನ್ನು ಬಳಸಿ ಲಯವನ್ನು ರಚಿಸುತ್ತಿದ್ದರು. ಸಂಗೀತಕ್ಕೆ ತವಾ ಮತ್ತು ಥಾಲಿಯಂತಹ ಅಡುಗೆ ಪಾತ್ರೆಗಳನ್ನು ಸಹ ಬಳಸಿ ಗಮನ ಸೆಳೆದಿದ್ದರು.
ಅವರ ವೃತ್ತಿಜೀವನದುದ್ದಕ್ಕೂ ಭಾರತೀಯ ಶಾಸ್ತ್ರೀಯ ಮತ್ತು ವಿಶ್ವ ಸಂಗೀತ ಎರಡಕ್ಕೂ ವಿಶೇಷ ಕೊಡುಗೆಗಳನ್ನು ಜಾಕೀರ್ ಹುಸೇನ್ ನೀಡಿದ್ದಾರೆ. ತಮ್ಮ ಅಸಾಧಾರಣ ತಬಲಾ ಕೌಶಲ್ಯಗಳ ಮೂಲಕ ಹಲವಾರು ಮೆಚ್ಚುಗೆ ಪಡೆದಿರುವ ಅವರು ಭಾರತೀಯ ಮತ್ತು ಅಂತರಾಷ್ಟ್ರೀಯ ಸಿನಿಮಾಗಳಲ್ಲೂ ಸಂಗೀತ ಸಂಯೋಜಿಸಿ, ಪ್ರದರ್ಶನವೂ ನೀಡಿದ್ದರು. ಅವರು ನಾಲ್ಕು ದಶಕಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೇ ಹುಸೇನ್ ಅವರು ಜಾಗತಿಕ ಸಂಗೀತದತ್ತ ಚಿತ್ತ ಹರಿಸಿದ್ದರು. ತಬಲಾ ವಿದ್ವಾಂಸರಾಗಿದ್ದ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು.
ಹೀಗೆ ತಮ್ಮ ತಬಲಾ ಮೂಲಕ ಹತ್ತು ಹಲವು ದಾಖಲೆಗಳನ್ನು ಬರೆದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಜಾಕೀರ್ ಹುಸೇನ್ ಇಂದು ತಮ್ಮ ಬದುಕಿಗೆ ವಿದಾಯ ಹೇಳಿದ್ದಾರೆ. ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಅಗಲಿದ್ದಾರೆ. ಜಾಕೀರ್ ಹುಸೇನ್ ಅವರ ನಿಧನದ ಸುದ್ದಿಯನ್ನು ಕೇಳಿದ ಅನೇಕರು ಅಗಲಿದ ತಮ್ಮ ನೆಚ್ಚಿನ ತಬಲಾ ವಾದಕ ಜಾಕೀರ್ ಹುಸೇನ್ ಅವರಿಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ. ಜಾಕೀರ್ ಹುಸೇನ್ ಆತ್ಮಕ್ಕೆ ಶಾಂತಿಯನ್ನು ಕೋರುತ್ತಿದ್ದಾರೆ.


Click it and Unblock the Notifications











