ಎರಡೂವರೆ ತಿಂಗಳು ನರಕಯಾತನೆ, ಮಗಳಿಗೆ ಅಪರೂಪದ ಕಾಯಿಲೆ ; ವರುಣ್ ಧವನ್ ಭಾವುಕ
ಲೈಟ್ಸ್ ಕ್ಯಾಮೆರಾ ಆ್ಯಕ್ಷನ್ ಹೊರತಾಗಿಯೂ ಚಿತ್ರರಂಗದವರಿಗೆ ಅವರದ್ದೇ ಆದ ಪ್ರಪಂಚ ಇರುತ್ತೆ. ಅದು ವೈಯಕ್ತಿಕ ಪ್ರಪಂಚ. ಹಲವರು ತಮ್ಮ ಈ ಪ್ರಪಂಚವನ್ನು ತುಂಬಾನೇ ಖಾಸಗಿಯಾಗಿಡುತ್ತಾರೆ. ಕ್ಯಾಮರಾ ಕಣ್ಣು ತಮ್ಮ ಮನೆಯವರ ಮೇಲೆ ಬೀಳದಂತೆ ಎಚ್ಚರ ವಹಿಸುತ್ತಾರೆ. ಸುಖ ದುಃಖ ಏನೇ ಇರಲಿ ನಾಲ್ಕು ಗೋಡೆಯ ನಡುವೆಯೇ ಅನುಭವಿಸುತ್ತಾರೆ. ಉದಾಹರಣೆಗೆ ವರುಣ್ ಧವನ್.
ಹೌದು, ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಸ್ಟಾರ್‌ಗಳಲ್ಲಿ ವರುಣ್ ಧವನ್ ಕೂಡ ಒಬ್ಬರು. ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ತರಹದ ಕಥೆಗಳಲ್ಲಿ ಈಗಾಗಲೇ ಮಿಂಚಿ ಬಾಲಿವುಡ್‌ನಲ್ಲಿ ಮನೆ ಮಾತಾಗಿರುವ ವರುಣ್ ಧವನ್ ತಮ್ಮ ಮನದ ನೋವನ್ನು ಅಪರೂಪಕ್ಕೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಲಾರಾಗೆ ಇದ್ದ ಅಪರೂಪದ ಕಾಯಿಲೆ ಕುರಿತು ಮಾತನಾಡಿದ್ದಾರೆ. ಭಾವುಕರಾಗಿದ್ದಾರೆ.

ಈ ಕುರಿತು ನಿಖಿಲ್ ತನೇಜಾ ಅವರ ''ಬೀ ಅ ಮ್ಯಾನ್, ಯಾರ್'' ಕಾರ್ಯಕ್ರಮದಲ್ಲಿ ಮಾತನಾಡಿರುವ ವರುಣ್ ಧವನ್ ತಮ್ಮ ಮಗಳು ಲಾರಾ ಎದುರಿಸಿದ ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್ (DDH) ಎಂಬ ಅಪರೂಪದ ಕಾಯಿಲೆಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಒಂದೂವರೆ ವರ್ಷದವಳಿದ್ದಾಗ ಅವಳಿಗೆ ಡಿಡಿಎಚ್ ಇರುವುದು ಪತ್ತೆಯಾಯಿತು ಎಂದು ಹೇಳಿರುವ ವರುಣ್ ಧವನ್, ಈ ಕಾಯಿಲೆಯು ಮಗುವಿನ ಸೊಂಟದ ಮೂಳೆಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಈ ಕಾಯಿಲೆ ಇದ್ದರೆ ಒಂದು ಕಾಲು ಇನ್ನೊಂದಕ್ಕಿಂತ ಚಿಕ್ಕದಾಗಿರುತ್ತೆ, ಮಗು ಸರಿಯಾಗಿ ನಡೆಯಲು ಅಥವಾ ಓಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಮಗು ಹೊರ ಜಗತ್ತು ಅನ್ವೇಷಿಸುವ ಮುನ್ನವೇ ಆಕೆಯ ಹೆಜ್ಜೆಗಳ ಮೇಲೆ ಈ ಕಾಯಿಲೆಯ ಕರಿನೆರಳು ಬಿದ್ದಾಗ ಆತಂಕವಾಗಿತ್ತು ಎಂದು ಹೇಳಿರುವ ವರುಣ್ ಧವನ್ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾನೇ ಕಠಿಣವಾದ ಸಮಯ ಅದು ಎಂದು ಹೇಳಿದ್ದಾರೆ. ಒಂದೂವರೆ ವರ್ಷದ ಲಾರಾ ಬರೋಬ್ಬರಿ 2.5 ತಿಂಗಳುಗಳ ಕಾಲ 'ಸ್ಪೈಕಾ ಕ್ಯಾಸ್ಟ್' ಚಿಕಿತ್ಸೆ ಪಡೆಯಬೇಕಾಯ್ತು ಎಂದಿದ್ದಾರೆ. ಸೊಂಟದಿಂದ ಪಾದದವರೆಗೆ ಭಾರವಾದ ಪ್ಲಾಸ್ಟರ್ ಹಾಕಿದ ಹಿನ್ನೆಲೆ ಎಪ್ಪತ್ತೈದು ದಿನಗಳ ಕಾಲ ಆ ಮಗು ಓಡಾಡಲಾಗದೆ ಒಂದೇ ಕಡೆ ಇರಬೇಕಾದ ಪರಿಸ್ಥಿತಿ ಇತ್ತು ಎಂದು ಭಾವುಕರಾಗಿದ್ದಾರೆ.
ಈ ಕಾಯಿಲೆಯಿಂದ ಬೇಗ ಸಂಧಿವಾತ ಬರುವ ಸಾಧ್ಯತೆ ಇರುತ್ತೆ, ಸ್ಲಿಪ್ ಡಿಸ್ಕ್ ಬೇಗ ಬರುತ್ತದೆ. ಈ ಸ್ಥಿತಿಯನ್ನು ಹುಟ್ಟಿನಿಂದಲೇ ಚೆನ್ನಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿರುವ ವರುಣ್ ಧವನ್, ಭಾರತದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇನ್ನೂ ಎಲ್ಲೆಡೆ ಲಭ್ಯವಿಲ್ಲ. ಆದರೆ ಇಲ್ಲಿ ಅದನ್ನು ನೋಡಿಕೊಳ್ಳುವ ಅನೇಕ ಅತ್ಯುತ್ತಮ ವೈದ್ಯರು ಇದ್ದಾರೆ.

ತಮ್ಮ ಮಗಳು ಅನುಭವಿಸಿದ ಕಿರಿಕಿರಿ ಮತ್ತು ನೋವಿಂದ ಜರ್ಜರಿತವಾಗಿರುವ ವರುಣ್ ಧವನ್, ನಾನು ಇದರ ಬಗ್ಗೆ ಒಂದು ಪುಸ್ತಕ ಬರೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಇಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರಿಗೆ ದಾರಿದೀಪವಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಆ ನೋವು, ಆತಂಕ ಮತ್ತು ಚಿಕಿತ್ಸೆಯ ಹಂತಗಳನ್ನು ಪುಸ್ತಕದಲ್ಲಿ ದಾಖಲಿಸುವ ಮೂಲಕ ಇತರ ಪೋಷಕರಲ್ಲಿ ಜಾಗೃತಿ ಮೂಡಿಸಲು ವರುಣ್ ನಿರ್ಧರಿಸಿದ್ದಾರೆ.
ಮುಂದುವರೆದು ಸಾಮಾನ್ಯವಾಗಿ ಈ ಕಾಯಿಲೆಯು ಮಗು ನಡೆಯಲು ಆರಂಭಿಸುವವರೆಗೂ ಹೊರಗಣ್ಣಿಗೆ ತಿಳಿಯುವುದಿಲ್ಲ ಎಂದು ಹೇಳಿರುವ ವರುಣ್ ಧವನ್, ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿದರೆ ಗುಣಪಡಿಸಬಹುದು ಎಂದು ಹೇಳಿದ್ಧಾರೆ.ನನಗೆ ಯಾರ ಸಹಾನುಭೂತಿಯೂ ಬೇಡ. ಭಾರತದಲ್ಲಿ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದಕ್ಕಾಗಿಯೇ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಬಗ್ಗೆ ಜಾಗೃತಿ ಮೂಡಿಸುವುದೇ ನನ್ನ ಉದ್ದೇಶ ಎಂದು ಖುಡ ಈ ಸಂದರ್ಶನದಲ್ಲಿ ಹೇಳಿದ್ದಾರೆ ವರುಣ್ ಧವನ್.


Click it and Unblock the Notifications











