ಸ್ವಾತಂತ್ರ್ಯ ಯೋಧರಿಗೆ ಅಪಮಾನ: ಕಂಗನಾ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ
ಅದ್ಭುತ ನಟನಾ ಪ್ರತಿಭೆಯುಳ್ಳ ನಟಿ ಕಂಗನಾ ರನೌತ್ ಸಿನಿಮಾಗಳಿಗಿಂತಲೂ ಹೆಚ್ಚು ವಿವಾದಿತ ಹೇಳಿಕೆಗಳು, ಟ್ವೀಟ್‌ಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ.
ಬಿಜೆಪಿಯ ಪ್ರಶಂಸಕಿ, ಮೋದಿಯ ಆರಾಧಕಿ ಆಗಿರುವ ಕಂಗನಾ ತಮ್ಮ ಪಕ್ಷ ಪ್ರೀತಿ, ಮೋದಿ ಪ್ರೇಮವನ್ನು ಟ್ವೀಟ್‌ಗಳ ಮೂಲಕ ಹೊರಹಾಕುತ್ತಿರುತ್ತಾರೆ. ಅಷ್ಟೇ ಆಗಿದಿದ್ದರೆ ಸಮಸ್ಯೆಯೇನೂ ಇರುತ್ತಿರಲಿಲ್ಲವೇನೋ ಆದರೆ ಬಿಜೆಪಿ ಹಾಗೂ ಮೋದಿಯನ್ನು ಹೊಗಳುವ ಭರದಲ್ಲಿ ದೇಶದ ಗೌರವಾನ್ವಿತ ವ್ಯಕ್ತಿಗಳಿಗೆ ಅಪಮಾನ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಪದ್ಮ ಪ್ರಶಸ್ತಿ ಸ್ವೀಕರಿಸಿದ ಕಂಗನಾ, 'ಋಣ ಸಂದಾಯ'ಕ್ಕಾಗಿಯೋ ಏನೋ ಮೋದಿ ಅವರನ್ನು ಹೊಗಳಲು ಹೋಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಸ್ವಾತಂತ್ರ್ಯ ಸೇನಾನಿಗಳಿಗೆ ಅಪಮಾನ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಕಂಗನಾ ರನೌತ್, ''1947 ರಲ್ಲಿ ಬಂದ ಸ್ವಾತಂತ್ರ್ಯ ಅದು ಭಿಕ್ಷೆ, 2014 ರಲ್ಲಿ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು'' ಎಂದಿದ್ದಾರೆ. 2014ರಲ್ಲಿ ಮೋದಿ ಪ್ರಧಾನಿ ಆದಮೇಲೆ ದೇಶ ಸ್ವಾತಂತ್ರ್ಯವಾಯಿತು ಎಂಬರ್ಥದ ಕಂಗನಾ ರನೌತ್‌ರ ಈ ಹೇಳಿಕೆ ತೀವ್ರ ವಿವಾದ ಹುಟ್ಟುಹಾಕಿದೆ.
''ಸ್ವಾತಂತ್ರ್ಯ ಹೋರಾಟಕ್ಕೆ ಬಲಿಯಾದ ಲಕ್ಷಾಂತರ ಮಂದಿಯ ಬಲಿದಾನಕ್ಕೆ ಕಂಗನಾ ಅಪಮಾನ ಮಾಡಿದ್ದಾರೆ'' ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಕಂಗನಾರ ಹುಂಬತನವನ್ನು, ಹುಚ್ಚುತನವನ್ನು ಟೀಕಿಸಿದ್ದಾರೆ. ಬಿಜೆಪಿಯ ಕೆಲವು ಮುಖಂಡರೇ ಕಂಗನಾರ ಹೇಳಿಕೆಯನ್ನು ಖಂಡಿಸಿದ್ದಾರೆ.
ಕಂಗನಾ ಹೇಳಿಕೆ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ''ಮಹಾತ್ಮಾ ಗಾಂಧಿಯವರ ತ್ಯಾಗಕ್ಕೆ ಅಪಮಾನ, ಗಾಂಧಿಯವರ ಕೊಂದ ಹತ್ಯೆಕೋರನಿಗೆ ಗೌರವ. ಈಗ ಮಂಗಲ್ ಪಾಂಡೆಯಿಂದ ಹಿಡಿದು ರಾಣಿ ಲಕ್ಷ್ಮೀಭಾಯಿ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಇನ್ನೂ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ. ಇಂಥ ಯೋಚನೆಯನ್ನು ಹುಚ್ಚುತನ ಎನ್ನಬೇಕೆ ಅಥವಾ ದೇಶ ದ್ರೋಹ ಎನ್ನಬೇಕೆ'' ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಂಗನಾ ಹೇಳಿಕೆ ವಿರುದ್ಧ ಈಗಾಗಲೇ ದೂರು ಸಹ ದಾಖಲಾಗಿದೆ. ಕಂಗನಾರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುವ ಜೊತೆಗೆ ಹಲವರು ಬೆಂಬಲವನ್ನೂ ಸೂಚಿಸಿದ್ದಾರೆ!


Click it and Unblock the Notifications










