ಖ್ಯಾತ ನಿರ್ದೇಶಕನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ರಾಕುಲ್ ಪ್ರೀತ್ ಸಿಂಗ್ ಪತಿ...!
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಪಕ್ಕದ ಮುಂಬೈನಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಮನಸ್ತಾಪ ಭುಗಿಲೆದ್ದಿದೆ. ಜಗಳ ಬೀದಿಗೆ ಬಂದಿದೆ.

ಹೌದು, ನಿಮಗೆ ನೆನಪಿದ್ದರೆ ಈ ವರ್ಷ ಹಿಂದಿಯಲ್ಲಿ ಬಡೇ ಮಿಯಾ ಚೋಟೆ ಮಿಯಾ ಎಂಬ ಚಿತ್ರ ಬಂದಿತ್ತು. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯಿಸಿದ್ದ ಸಿನಿಮಾ ಇದು. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದ್ದ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ 60 ಕೋಟಿ ಹಣ ಮಾತ್ರ. ಆದರೆ, ಇದಕ್ಕೆ ಖರ್ಚಾಗಿದ್ದು ನೂರಲ್ಲ, ಇನ್ನೂರಲ್ಲ ಬದಲಿಗೆ 350 ಕೋಟಿ ಹಣ. ಇಷ್ಟೊಂದು ಹಣ ಹೂಡಿದ ನಿರ್ಮಾಪಕ ವಾಶು ಭಗ್ನಾನಿ ಕೈಗೆ ಹಾಕಿದ ಬಂಡವಾಳದ ಅರ್ಧ ಹಣ ಕೂಡ ಬರಲಿಲ್ಲ. ಇದರಿಂದ ಸಹಜವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ವಾಶು ಭಗ್ನಾನಿ ಈ ಹಿಂದೆ ತಮ್ಮ ಬಳಿ ಇರುವ ಕೆಲಸಗಾರರಿಗೆ ಹಣ ನೀಡಲು ಮತ್ತು ಸಾಲದ ಸುಳಿಯಿಂದ ಹೊರ ಬರಲು ಮುಂಬೈನಲ್ಲಿದ್ದ ತಮ್ಮ 07 ಅಂತಸ್ತಿನ ಬಿಲ್ಡಿಂಗ್ ಮಾರಿದ್ದರು.
ಇನ್ನೂ ವಾಶು ಭಗ್ನಾನಿಯ ಈ ಕಷ್ಟ ಮತ್ತು ನಷ್ಟವನ್ನು ನೋಡಲಾರದೇ ಅಕ್ಷಯ್ ಕುಮಾರ್, ಎಲ್ಲರಿಗೂ ನೀಡಬೇಕಾದ ಬಾಕಿ ಹಣವನ್ನೆಲ್ಲ ನೀಡಿದ ನಂತರವಷ್ಟೇ ನನಗೆ ಕೊಡಬೇಕಾದ ಹಣ ಕೊಡಿ ಎಂದು ಹೇಳಿದ್ದರು. ಈ ಮೂಲಕ ಉದಾರತೆಯನ್ನು ತೋರಿಸಿದರು. ಆದರೆ, ಇದೇ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹೃದಯ ಅಕ್ಷಯ್ ಕುಮಾರ್ ಅವರಷ್ಟು ವಿಶಾಲವಾಗಿಲ್ಲ. ಹೀಗಾಗಿಯೇ ವಾಶು ಭಗ್ನಾನಿ ಅವರನ್ನು ನಷ್ಟದ ಕೂಪಕ್ಕೆ ತಾವೇ ಖುದ್ದು ತಳ್ಳಿದ್ದರೂ, ಅಲಿ ಅಬ್ಬಾಸ್ ಜಾಫರ್ ಬಾಕಿ ಹಣ ನೀಡುವಂತೆ ವಾಶು ಭಗ್ನಾನಿ ಅವರ ದುಂಬಾಲು ಬಿದ್ದರು. ನೋಡುವರೆಗೆ ನೋಡಿ ನಿನ್ನೆ ವಾಶು ಭಗ್ನಾನಿ ನನಗೆ 07.30 ಕೋಟಿ ಹಣವನ್ನು ನೀಡಬೇಕೆಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಎಂಪ್ಲಾಯೀಸ್ (FWICE) ಗೆ ದೂರು ಸಲ್ಲಿಸಿದ್ರು.

ಈಗ ಅಲಿ ಅಬ್ಬಾಸ್ ಜಾಫರ್ ವಿರುದ್ಧ ವಾಶು ಭಗ್ನಾನಿ ಪ್ರತಿ ದೂರನ್ನು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದಾರೆ. ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲಿ ಅಬ್ಬಾಸ್ ಜಾಫರ್ ವಿರುದ್ಧ ವಂಚನೆಯ ಆರೋಪ ಮಾಡಿರುವ ವಾಶು ಭಗ್ನಾನಿ, ಚಿತ್ರದ ಖರ್ಚು-ವೆಚ್ಚವನ್ನು ಚಿತ್ರೀಕರಣದ ಸಮಯದಲ್ಲಿ ಅಲಿ ಅಬ್ಬಾಸ್ ಜಾಫರ್ ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ. ಸುಲಿಗೆ, ಬ್ಲ್ಯಾಕ್ ಮೇಲ್, ಬೆದರಿಕೆ, ಕಿರುಕುಳ, ಮಾನ ಹಾನಿಯ ಆರೋಪವನ್ನು ಮಾಡಿರುವ ವಾಶು ಭಗ್ನಾನಿ 9.50 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ನಮೂದಿಸಿದ್ದಾರೆ. ಅಬುಧಾಬಿಯ ಶೆಲ್ ಕಂಪನಿಯ ಮೂಲಕ ಈ ಹಣವನ್ನು ಅಲಿ ಅಬ್ಬಾಸ್ ಜಾಫರ್ ಬಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ದೂರು ಮತ್ತು ಈ ಪ್ರತಿ ದೂರು ಬಾಲಿವುಡ್‌ನ ತಲೆ ನೋವನ್ನು ಹೆಚ್ಚಿಸಿದೆ. ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ. ಥಳುಕು ಬಳುಕುಗಳಿಂದ ಕೂಡಿರುವ ಈ ಬಣ್ಣದ ಪ್ರಪಂಚದಲ್ಲಿರುವ ಹುಳುಕು ಕೂಡ ಈ ಮೂಲಕ ಹೊರ ಬಂದಿದೆ. ಮುಂದೆ ಈ ಪ್ರಕರಣ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ. ಅಂದ್ಹಾಗೇ ವಾಶು ಭಗ್ನಾನಿ ಬೇರೆ ಯಾರು ಅಲ್ಲ ಬದಲಿಗೆ ಜಾಕಿ ಭಗ್ನಾನಿಯ ತಂದೆ. ಈ ಜಾಕಿ ಭಗ್ನಾನಿ ಬೇರೆ ಯಾರು ಅಲ್ಲ ಬದಲಿಗೆ ರಾಕುಲ್ ಪ್ರೀತ್ ಸಿಂಗ್ ಅವರ ಗಂಡ ಎನ್ನುವುದು ನಿಮ್ಮ ಗಮನಕ್ಕಿರಲಿ.


Click it and Unblock the Notifications











