ಬಾಲಿವುಡ್‌ನ 'ಡಿಸ್ಕೋ ಡ್ಯಾನ್ಸರ್' ಮಿಥುನ್ ಚಕ್ರವರ್ತಿಗೆ ಒಲಿದ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'..!
ಮಿಥುನ್ ಚಕ್ರವರ್ತಿ, 80-90ರ ದಶಕದ ಸೂಪರ್ ಸ್ಟಾರ್. ಆ ಕಾಲದ ಅತ್ಯಂದ ದುಬಾರಿ ನಾಯಕ. ಕಂತೆ-ಕಂತೆಯ ಹಣ ಕೈಯಲ್ಲಿ ಹಿಡಿದು ಇವರ ಮನೆಯ ಮುಂದೆ ನಿಲ್ಲುತ್ತಿದ್ದ ನಿರ್ಮಾಪಕರು ಅದೆಷ್ಟೋ ಜನ. ಅನೇಕರ ಬಣ್ಣದ ಕನಸುಗಳಿಗೆ ಅಂದಕಾಲತ್ತಿಲ್ ತನ್ನ ಅಭಿನಯದಿಂದ ಚಿನ್ನದ ಸ್ಪರ್ಶವನ್ನ ನೀಡಿದವರು ಇವರು. ಇಂಥಾ ಮಿಥುನ್ ಚಕ್ರವರ್ತಿ ಈಗ ಭಾರತದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ,
ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಭಾರತ 1969ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು, ಮಿಥುನ್ ಚಕ್ರವರ್ತಿ ಅಕ್ಟೋಬರ್ 8ರಂದು ಸ್ವೀಕರಿಸಲಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನೂ ಮಿಥುನ್ ಚಕ್ರವರ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಇನ್ನೂ ಕಳೆದ ವರ್ಷ ವಹೀದಾ ರೆಹಮಾನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, 1995ರಲ್ಲಿ ಕನ್ನಡದ ವರ ನಟ ಡಾ.ರಾಜ್ ಕುಮಾರ್ ಅವರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಅಂದ್ಹಾಗೇ ಅಮಿತಾಬ್ ಬಚ್ಚನ್, ರಾಜೇಶ್ ಖನ್ನಾ, ದಿಲೀಪ್ ಕುಮಾರ್, ಅವರಂತಹ ದಿಗ್ಗಜರು ಇದ್ದ ಆ ಕಾಲದಲ್ಲಿ ತಮ್ಮದೇ ಸ್ಥಾನ-ಮಾನ ಹಾಗೂ ಅಭಿಮಾನಿ ಬಳಗವನ್ನ ಸಂಪಾದಿಸಿದ್ದ ಮಿಥುನ್ ಚಕ್ರವರ್ತಿ ಒಂದಾದ ಮೇಲೊಂದು 50 ಹಿಟ್ ಸಿನಿಮಾಗಳನ್ನ ನೀಡಿದ್ದಾರೆ . ಆ ಪೈಕಿ 03 ಬ್ಲಾಕ್ ಬಸ್ಟರ್ ಸಿನಿಮಾಗಳಾದರೆ, 09 ಸೂಪರ್ ಹಿಟ್ ಸಿನಿಮಾಗಳು ಇವರ ಹೆಸರಿನಲ್ಲಿವೆ. ಡಿಸ್ಕೋ ಡ್ಯಾನ್ಸರ್.. ಪ್ಯಾರ್ ಜುಕ್ತಾ ನಹೀ.. ಜಲ್ಲಾದ್.. ಕಸಮ್ ಪೈದಾ ಕರನೇ ವಾಲೇ ಕಿ.. ಪ್ಯಾರಿ ಬೆಹನಾ.. ಗುಲಾಮಿ..ಗಂಗಾ ಜಮುನಾ ಸರಸ್ವತಿ.. ಡ್ಯಾನ್ಸ್ ಡ್ಯಾನ್ಸ್.. ಅಗ್ನಿಪಥ್.. ಗುಲಾಮಿ.. ಮಿಥುನ್ ಚಕ್ರವರ್ತಿ ಅಭಿನಯದ ಕೆಲ ಜನಪ್ರಿಯ ಚಿತ್ರಗಳು.
ಇನ್ನೂ ಮಿಥುನ್ ಗೆಲುವನ್ನಷ್ಟೇ ಅಲ್ಲ ಸೋಲನ್ನು ಕಂಡಿದ್ದಾರೆ. ಸೋಲಿನಲ್ಲಿ ಕೂಡ ದಾಖಲೆ ಬರೆದಿದ್ದಾರೆ. ತಮ್ಮ ಇಲ್ಲಿವರೆಗಿನ ಸುಧೀರ್ಘವಾದ ಪ್ರಯಾಣದಲ್ಲಿ270 ಸಿನಿಮಾಗಳನ್ನ ಮಾಡಿರುವ ಮಿಥುನ್ ಚಕ್ರವರ್ತಿ, ಒಂದಲ್ಲ.. ಎರಡಲ್ಲ.. ಹತ್ತಲ್ಲ.. ಇಪ್ಪತ್ತಲ್ಲ.. ಬರೋಬ್ಬರಿ 180 ಪ್ಲಾಪ್ ಚಿತ್ರಗಳನ್ನು ಕೂಡ ನೀಡಿದ್ದಾರೆ. 1990ರ ನಂತರ ಒಂದಾದ ಮೇಲೊಂದು ಸೋಲನ್ನ ನೋಡಿದ ಮಿಥುನ್ ಚಕ್ರವರ್ತಿ, 1997ರಿಂದ 2000ನೇ ಇಸ್ವಿವರೆಗೆ ಕೇವಲ ನಾಲ್ಕೇ ವರ್ಷದಲ್ಲಿ 50 ಚಿತ್ರಗಳಿಗೆ ಬಣ್ಣ ಹಚ್ಚಿ ದಾಖಲೆಯನ್ನೂ ಬರೆದಿದ್ದಾರೆ.
ಹಿಂದಿ ಮತ್ತು ಬೆಂಗಾಲಿ ಭಾಷೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಿಥುನ್ ಚಕ್ರವರ್ತಿ 2018ರಲ್ಲಿ ಕನ್ನಡದಲ್ಲಿ ದಿ ವಿಲನ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.ಇನ್ನೂ ಇವರು ಅಭಿನಯಿಸಿದ ಮೊದಲ ಮೃಗಯಾ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ವಿಶೇಷ. ಸದ್ಯಕ್ಕೆ ಮಿಥುನ್ ಚಕ್ರವರ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











