For Quick Alerts
  ALLOW NOTIFICATIONS  
  For Daily Alerts

  ಮೋಜುಗಾರ ಸೊಗಸುಗಾರ ನಟ ರಾಜೇಶ್ ಖನ್ನಾ

  By Rajendra
  |

  ಬಾಲಿವುಡ್‌ನ ಒಂದು ಕಾಲದ ಸೂಪರ್ ಸ್ಟಾರ್ ರಾಜೇಶ್ ಖನ್ನಾ (69) ಅವರ ಆರೋಗ್ಯ ಪರಿಸ್ಥಿತಿ ವಿಷಮಿಸಿದೆ. ಆಯಾಸದಿಂದ ಬಳಲುತ್ತಿದ್ದ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ವಿವರ ನೀಡಲು ವೈದ್ಯರು ನಿರಾಕರಿಸಿದ್ದು ಅವರ ಅಭಿಮಾನಿಗಳಲ್ಲಿ ಆತಂಕದ ಮೋಡ ಕವಿದಿದೆ.

  ಮುಂಬೈನ ಅವರ ಮನೆ ಮುಂದೆ ಜಮಾಯಿಸಿದ್ದ ಅಪಾರ ಸಂಖೆಯ್ಯ ಅಭಿಮಾನಿಗಳತ್ತ ಅವರು ಕೈಬೀಸುವ ಮೂಲಕ ಕವಿದಿದ್ದ ಆತಂಕದ ಮೋಡ ಚದುರಿಸಿ ಹೋಯಿತು. ಈ ಬಾಲಿವುಡ್‌ ಮೋಜುಗಾರ ಸೊಗಸುಗಾರನ ಬಗ್ಗೆ ಇನ್ನೂ ಗುಲಗಂಜಿಯಷ್ಟೂ ಕ್ರೇಜ್ ಕಮ್ಮಿಯಾಗಿಲ್ಲ ಅಂದರೆ ಆತನ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳಲೇಬೇಕಲ್ಲವೆ?

  ಅದು ಅರುವತ್ತರ ದಶಕದ ಕೊನೆ ಹಾಗೂ ಎಪ್ಪತ್ತರ ದಶಕದ ಆರಂಭ. ಒಂದರ ಹಿಂದೆ ಒಂದು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಸಿಕರ ಮನದಾಳದಲ್ಲಿ ಚಿರಮುದ್ರೆಯೊತ್ತಿದರು ರಾಜೇಶ್ ಖನ್ನಾ. ಅವರ ಅಭಿಮಾನಿಗಳಲ್ಲಿ ಹೆಂಗೆಳೆಯರದ್ದೇ ಮೇಲುಗೈ.

  ಬಾಲಿವುಡ್‌ನ ಮೊಟ್ಟ ಮೊದಲ ಸೂಪರ್ ಸ್ಟಾರ್ ಎಂದೇ ಖನ್ನಾ ಖ್ಯಾತರು. 1966ರಲ್ಲಿ 'ಆಖ್ರಿ ಕಥ್' (ನಿರ್ದೇಶನ ಚೇತನ್ ಆನಂದ್) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ರಾಜೇಶ್ ಬಳಿಕ 'ರಾಜ್', 'ಬಹರಾನ್ ಕೆ ಸಪ್ನೆ', 'ಇತ್ತೇಫಕ್' ಹಾಗೂ 'ಆರಾಧನ' ಚಿತ್ರಗಳ ಮೂಲಕ ಪ್ರವರ್ಧಮಾನಕ್ಕೆ ಬಂದರು.

  ರಾಜೇಶ್ ಖನ್ನಾ ಅಭಿನಯದ ಒಟ್ಟು 163 ಚಿತ್ರಗಳಲ್ಲಿ 106 ಚಿತ್ರಗಳು ಸೋಲೋ ಹೀರೋ ಆಗಿ ನಟಿಸಿದ್ದವಾದರೆ 22 ಚಿತ್ರಗಳು ಇಬ್ಬರು ಹೀರೋಗಳವು. ಕಾಲೇಜು ದಿನಗಳಲ್ಲೇ ಅಂಟಿಕೊಂಡಿದ್ದ ನಾಟಕದ ಗೀಳು ಚಿತ್ರರಂಗಕ್ಕೆ ಸೆಳೆಯಿತು. ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಂತೆ ಜತಿನ್ ಖನ್ನಾ ಆಗಿದ್ದ ಅವರ ಹೆಸರು ರಾಜೇಶ್ ಖನ್ನಾ ಎಂದು ಬದಲಾಯಿತು.

  "ಆರಂಭದಲ್ಲಿ ಕ್ಯಾಮೆರಾ ಎದುರಿಸಲು ಚಡಪಡಿಸಿದೆ. ಪಟ ಪಟ ಎಂದು ಸಂಭಾಷಣೆ ಹೇಳಲು ಸಾಧ್ಯವಾಗಲಿಲ್ಲ. ಆಗ ಚಿತ್ರದ ನಿರ್ದೇಶಕ ರವಿಂದ್ರ ದೇವ್ ನನ್ನ ಬಾಡಿ ಲಾಂಗ್ವೇಜ್‌ನಲ್ಲಿನ ಹುಳುಕುಗಳನ್ನು ಎತ್ತಿ ತೋರಿಸಿದರು" ಎಂದು 'ದಿ ಹಿಂದು' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖನ್ನಾ ತಮ್ಮ ಆರಂಭ ದಿನಗಳನ್ನು ನೆನೆದಿದ್ದಾರೆ.

  ರಾಜೇಶ್ ಖನ್ನಾ ಹಾಗೂ ಕಿಶೋರ್ ಕುಮಾರ್ ಕಾಂಬಿನೇಷನ್ ಚಿತ್ರಗಳು ಬಾಲಿವುಡ್‌ನಲ್ಲಿ ಅದ್ಭುತ ಸೃಷ್ಟಿಸಿದವು. ನಮ್ಮ ರಾಜ್ ಕುಮಾರ್ ಹಾಗೂ ಪಿಬಿ ಶ್ರೀನಿವಾಸ್ ಅವರ ಜೋಡಿಯಷ್ಟೇ ಖನ್ನಾ ಹಾಗೂ ಕಿಶೋರ್ ಕಾಂಬಿನೇಷನ್ ಜನಪ್ರಿಯವಾಗಿತ್ತು. ಖನ್ನಾ ಶರೀರವಾದರೆ ಕಿಶೋರ್ ಶಾರೀರ ಎಂಬಂತಿದ್ದರು.

  ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಉನ್ನತ ಮಟ್ಟಕ್ಕೇರಿದ್ದಾಗ ಸಾರ್ವಜನಿಕವಾಗಿ ರಾಜೇಶ್ ಕಂಡರೆ ಅವರ ಅಭಿಮಾನಿಗಳು ಸಕ್ಕರೆಗೆ ಇರುವೆ ಮುತ್ತಿದಂತೆ ಸುತ್ತುವರಿಯುತ್ತಿದ್ದರು. ಅಭಿಮಾನಿಗಳು ಆತನ ಕಾರನ್ನು ಚುಂಬಿಸುತ್ತಿದ್ದರು. ರಕ್ತದಲ್ಲಿ ಬರೆದ ಅದೆಷ್ಟೋ ಪ್ರೇಮ ಪತ್ರಗಳು ರಾಜೇಶ್ ಮನೆಗೆ ಬಂದು ಬೀಳುತ್ತಿದ್ದವು.

  "ಸ್ಟುಡಿಯೋಗಳ ಹೊರಗೆ ಯುವತಿಯರು ಸಾಲುಗಟ್ಟಿ ನಿಲ್ಲುತ್ತಿದ್ದರು. ಅವರನ್ನು ಸ್ಪರ್ಶಿಸುವುದು, ಶರ್ಟ್ ಎಳೆಯುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಇದ್ದೇ ಇತ್ತು. ಮುಂಬೈ ಹುಡುಗಿಯರಿಗಿಂತಲೂ ದೆಹಲಿ ಹುಡುಗಿಯರಿಗೆ ಖನ್ನಾ ಮೇಲೆ ಕ್ರೇಜ್ ಜಾಸ್ತಿ ಇತ್ತು" ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಾರೆ ಶರ್ಮಿಳಾ ಠಾಗೋರ್ ನೆನೆದಿದ್ದಾರೆ.

  ರಾಜೇಶ್ ಖನ್ನಾ ಮೊದಲು ಇಷ್ಟಪಟ್ಟಿದ್ದು ಫ್ಯಾಷನ್ ಡಿಸೈನರ್ ಹಾಗೂ ನಟಿ ಆಗಿದ್ದ ಅಂಜು ಮಹೇಂದ್ರು ಅವರನ್ನು. ಅವರಿಬ್ಬರ ನಡುವಿನ ಸಂಬಂಧ ಬಹಳ ಕಾಲ ಉಳಿಯಲಿಲ್ಲ. ಬಳಿಕ 1973ರಲ್ಲಿ ಆಗಷ್ಟೇ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಡಿಂಪಲ್ ಖನ್ನಾ ಅವರ ಕೈಹಿಡಿದರು. ಇವರಿಬ್ಬರೂ ಸುದೀರ್ಘ ಕಾಲ ಬೇರ್ಪಟ್ಟಿದ್ದರಾದರೂ ವಿವಾಹ ವಿಚ್ಛೇದನ ಸಿಕ್ಕಿರಲಿಲ್ಲ. ಬದಲಾದ ಮನಸ್ಥಿತಿಗಳು ಮತ್ತೆ ಇಬ್ಬರನ್ನು ಒಂದು ಮಾಡಿತು. ರಾಜೇಶ್ ಇನ್ನೂ ನೂರ್ಕಾಲ ನಮ್ಮೊಂದಿಗಿರಲಿ ಅವರ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂಬುದು ಅವರ ಅಭಿಮಾನಿಗಳ ಮನದಾಳದ ಆಶಯ. (ಒನ್‍ಇಂಡಿಯಾ ಕನ್ನಡ)

  English summary
  Wish speedy recovery to Bollywoods Yesteryear superstar Rajesh Khanna, who was yesterday admitted to a private hospital in Mumbai, is recovering fast and likely to be discharged in a couple of days. Here is his brief profile. He appeared in 163 films of which 106 had him as the solo lead hero and 22 were two hero projects. Khanna is referred to as the "First Superstar" of Hindi cinema. He made his debut in 1966 with Aakhri Khat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X