ಅಪ್ಪ, ಅಮ್ಮ ಆದ್ರು ವಿಕ್ಕಿ, ಕತ್ರೀನಾ; ಹೊಸ ಅತಿಥಿಯನ್ನು ಸ್ವಾಗತಿಸಿದ ದಂಪತಿ
ಬಾಲಿವುಡ್ ನಟ ವಿಕ್ಕಿ ಕೌಶಲ್ ದಂಪತಿ ಹಾಗೂ ನಟಿ ಕತ್ರೀನಾ ಕೈಫ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಮುದ್ದಾದ ಮಗುವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ನಟ ವಿಕ್ಕಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಕತ್ರೀನಾ ಗರ್ಭಿಣಿ ಆಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಇಂದು(ನವೆಂಬರ್ 7) ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ. "ನಮ್ಮ ಸಂತೋಷದ ದೊಡ್ಡ ಬುತ್ತಿ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯಿಂದ, ನಾವು ನಮ್ಮ ಮಗನನ್ನು ಸ್ವಾಗತಿಸಿದ್ದೇವೆ" ಎಂದು ನಟ ವಿಕ್ಕಿ ಕೌಶಲ್ ಬರೆದುಕೊಂಡಿದ್ದಾರೆ.

ವಿಕಿ ಕೌಶಲ್ ಅವರ ಸಹೋದರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪೋಸ್ಟ್ ಹಂಚಿಕೊಂಡು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. "ಮೇ ಚಾಚಾ ಬನ್ ಗಯಾ (ನಾನು ಚಿಕ್ಕಪ್ಪನಾದೆ)" ಎಂದು ಬರೆದಿಕೊಂಡಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್, ನಟಿ ಪರಿಣಿತಿ ಚೋಪ್ರಾ, ಮಾಧುರಿ ದೀಕ್ಷಿತ್, ತೆಲುಗು ನಟ ರಾಮ್‌ಚರಣ್ ಪತ್ನಿ ಉಪಾಸನಾ ಸೇರಿ ಹಲವು ಸೆಲೆಬ್ರೆಟಿಗಳು ವಿಕ್ಕಿ-ಕತ್ರೀನಾ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.
2021ರಲ್ಲಿ ರಾಜಸ್ಥಾನದಲ್ಲಿ ವಿಕ್ಕಿ-ಕತ್ರೀನಾ ಮದುವೆ ಅದ್ಧೂರಿಯಾಗಿ ನಡೆದಿತ್ತು. ಮದುವೆ ಬಳಿಕ ಕತ್ರೀನಾ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇದೇ ವರ್ಷ ಮಾರ್ಚ್‌ನಲ್ಲಿ ಕರ್ನಾಟಕದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕತ್ರೀನಾ ವಿಶೇಷ ಪೂಜೆ ನೆರವೇರಿಸಿದ್ದರು. ಮದುವೆ ಆಗದವರು, ಮಕ್ಕಳು ಆಗದವರು ಅಲ್ಲಿಗೆ ಭೇಟಿ ನೀಡಿ ಸರ್ಪ ಸಂಸ್ಕಾರ ಪೂಜೆ ಮಾಡಿಸುತ್ತಾರೆ. ಸ್ನೇಹಿತೆಯರ ಜೊತೆ ಕತ್ರೀನಾ ಬಂದು ಪೂಜೆ ಸಲ್ಲಿಸಿದ್ದರು.
ಕತ್ರೀನಾ ಮಗುವಿಗೆ ಜನ್ಮ ನೀಡಿದ ವಿಷಯ ಗೊತ್ತಾಗುತ್ತಿದ್ದಂತೆ ಕುಕ್ಕೆ ಸುಬ್ರಮಣ್ಯದಲ್ಲಿ ಆಕೆ ಪೂಜೆ ಸಲ್ಲಿಸಿದ್ದನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ. ಹಾಂಗ್‌ಕಾಂಗ್‌ನಲ್ಲಿ ಹುಟ್ಟಿ ಬೆಳೆದ ಬ್ರಿಟೀಷ್ ನಟಿ ಕತ್ರೀನಾ ಬಾಲಿವುಡ್ ಅಂಗಳಕ್ಕೆ ಬಂದು ಇಲ್ಲೇ ಸೆಟ್ಲ್ ಆಗಿಬಿಟ್ಟರು. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಬಿಂದಾಸ್ ಪಾತ್ರಗಳಲ್ಲಿ ಮಿಂಚು, ಸ್ಪೆಷಲ್ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.
2003ರಲ್ಲಿ ಬಂದಿದ್ದ 'ಬೂಮ್' ಚಿತ್ರದ ಮೂಲಕ ಕತ್ರೀನಾ ಬಾಲಿವುಡ್ ಪ್ರವೇಶಿಸಿದ್ದರು. ಒಂದು ತೆಲುಗು ಹಾಗೂ ಒಂದು ಮಲಯಾಳಂ ಚಿತ್ರದಲ್ಲಿ ಕೂಡ ನಟಿಸಿದ್ದ ಆಕೆ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲೇ ಮಿಂಚಿದ್ದರು. ಕೈಫ್ ಅವರ ತಾಯಿ ಕ್ರಿಶ್ಚಿಯನ್ ಮತ್ತು ಆಕೆಯ ತಂದೆ ಮುಸ್ಲಿಂ ಆಗಿದ್ದರು. ಇದೀಗ ವಿಕ್ಕಿ ಕೈ ಹಿಡಿದು ಕತ್ರೀನಾ ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ.
ಆರಂಭದಲ್ಲಿ ಬರೀ ಗ್ಲಾಮರ್ ಬೊಂಬೆಯಾಗಿ ಮಿಂಚುತ್ತಿದ್ದ ಕತ್ರೀನಾ ಕೈಫ್ ಬಳಿಕ ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಗೆದ್ದರು. ವಯಸ್ಸು 40 ದಾಟಿದ್ರು ತಮ್ಮ ಚೆಲುವಿನಿಂದ ಮೋಡಿ ಮಾಡುತ್ತಿದ್ದರು. ಮದುವೆಯಾಗಿ 3 ವರ್ಷಗಳ ಬಳಿಕ ತಾಯಿಯಾಗಿದ್ದಾರೆ. ವಿಕ್ಕಿ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.
2019ರಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರವೊಂದರಲ್ಲಿ ವಿಕ್ಕಿ, ಕತ್ರೀನಾ ಭೇಟಿ ಆಗಿದ್ದರು. ಅದೇ ವೇದಿಕೆಯಲ್ಲಿ ತಮಾಷೆಯಾಗಿ ವಿಕ್ಕಿ ಪ್ರಪೋಸ್ ಮಾಡಿದ್ದರು. ಇಂತಹ ವ್ಯಕ್ತಿಯನ್ನು ಮದುವೆಯಾಗಲು ಧೈರ್ಯವಿಲ್ಲ ಎಂದು ಉತ್ತರಿಸಿದ್ದರು. ಆದರೆ ಬಳಿಕ ಸಭೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಜೋಡಿ ನಡುವೆ ಪ್ರೀತಿ ಮೂಡಿತ್ತು. 2021ರಲ್ಲಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.
'ಮೆರಿ ಕ್ರಿಸ್ಮಸ್' ಚಿತ್ರದಲ್ಲಿ ಕೊನೆಯದಾಗಿ ಕತ್ರೀನಾ ಕೈಫ್ ನಟಿಸಿದ್ದರು. 'ಉರಿ' ಹಾಗೂ 'ಛಾವ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ವಿಕ್ಕಿ ನಟಿಸಿದ್ದಾರೆ. 'ಲವ್ & ವಾರ್' ಸಿನಿಮಾ ಮೂಲಕ ಮುಂದಿನ ವರ್ಷ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.


Click it and Unblock the Notifications











