ಮೈ ಜುಮ್ ಎನಿಸುವಂತಿದೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಟೀಸರ್; ಆದರೆ..
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸ್ವಾತಂತ್ರ್ಯ ದಿನಾರಚರಣೆ ಸಂಭ್ರಮದಲ್ಲಿ ಆಕೆ ನಟಿಸಿರುವ 'ಪುಷ್ಪ'-2 ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ.
ಡಿಸೆಂಬರ್ 6ಕ್ಕೆ ರಶ್ಮಿಕಾ ವರ್ಸಸ್ ರಶ್ಮಿಕಾ ಎನ್ನುವ ಚರ್ಚೆ ಶುರುವಾಗಿದೆ. ಕಾರಣ ಆ ದಿನ ಆಕೆ ನಟಿಸುತ್ತಿರುವ 2 ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಎರಡೂ ಕೂಡ ಬಹುನಿರೀಕ್ಷಿತ ಸಿನಿಮಾಗಳೇ. ಒಂದು ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಆಗಿದ್ದರೆ ಮತ್ತೊಂದು ಹಿಂದಿ ಸಿನಿಮಾ 'ಚಾವ'. ಲಕ್ಷ್ಮಣ್ ಉಟೇಕರ್ ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದಲ್ಲಿ ಛತ್ರಪತಿ ಮಹಾರಾಜರ ಹಿರಿಯ ಮಗ ಸಾಂಬಾಜಿ ಕಥೆಯನ್ನು ಹೇಳಲಾಗುತ್ತಿದೆ. ವಿಕ್ಕಿ ಕೌಶಲ್ ಚಿತ್ರದಲ್ಲಿ ಸಾಂಬಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಆತನ ಪತ್ನಿ ಯೇಸುಬಾಯಿ ಭೋನ್ಸಾಲೆ ಆಗಿ ರಶ್ಮಿಕಾ ಮಂದಣ್ಣ ನಟಿಸಿರುವುದು ವಿಶೇಷ. ಸದ್ಯ 'ಚಾವ' ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಸಾಂಬಾಜಿ ಮಹಾರಾಜನ ಆರ್ಭಟದ ಝಲಕ್ ಅನ್ನು ಅದರಲ್ಲಿ ನೋಡಬಹುದು.
ಮೊದಲ ನೋಟದಲ್ಲೇ 'ಚಾವ' ಟೀಸರ್ ಗಮನ ಸೆಳೆದಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ಸಿಂಹ ಎನ್ನುತ್ತಾರೆ. ನಾನು, ಅವರ ಮಗನನ್ನು ಸಿಂಹದ ಮರಿ ಎನ್ನುತ್ತಾರೆ" ಎನ್ನುವ ಖಡಕ್ ಡೈಲಾಲ್ ಹಿನ್ನೆಲೆಯಲ್ಲಿ 'ಚಾವ' ಟೀಸರ್ ಮೂಡಿ ಬಂದಿದೆ. ಸಾಂಬಾಜಿಯ ಶೌರ್ಯ, ಪರಾಕ್ರಮದ ದರ್ಶನ ಮಾಡಿಸುತ್ತಾ ಟೀಸರ್ ಸಾಗುತ್ತದೆ. ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಟ್ಟಿರುವುದು ಟೀಸರ್ ನೋಡಿದರೆ ಅರ್ಥವಾಗುತ್ತಿದೆ.
ಎದುರಾಳಿಗಳ ವಿರುದ್ಧ ಅಬ್ಬರಿಸಿ ಬೊಬ್ಬರಿಯುವ ಸಿಂಹದ ಮರಿ ಸಾಂಬಾಜಿಯನ್ನು ಟೀಸರ್‌ನಲ್ಲಿ ನೋಡಬಹುದು. ಇನ್ನು ಚಿತ್ರದಲ್ಲಿ ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಮಿಂಚಿದ್ದಾರೆ. ಸಣ್ಣ ಫ್ರೇಮ್‌ನಲ್ಲಿ ಅವರ ಪ್ರಸೆನ್ಸ್ ಹೈಲೆಟ್ ಆಗಿದೆ. ಟೀಸರ್‌ನಲ್ಲಿರುವ ಡೈಲಾಗ್ ರೀತಿಯಲ್ಲೇ ಛತ್ರಪತಿ ಮಗ ಎಷ್ಟು ಪರಾಕ್ರಮಿ ಎನ್ನುವುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಮರಾಠ ಸಾಮ್ರಾಜ್ಯದ ದೊರೆಯಾಗಿ ಛತ್ರಪತಿ ಮೆರೆದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆತನ ಶೌರ್ಯ ಪರಾಕ್ರಮದ ಬಗ್ಗೆಯೂ ಸಾಕಷ್ಟು ಉಲ್ಲೇಖಗಳಿವೆ. ಇನ್ನು ಆತನ ಬಳಿಕ ಮರಾಠ ಸಾಮ್ರಾಜ್ಯದ ಮತ್ತೊಬ್ಬ ಸಮರ್ಥ ದೊರೆಯಾಗಿ ಆಳ್ವಿಕೆ ನಡೆಸಿದ್ದು ಸಾಂಬಾಜಿ. ಚಿತ್ರದಲ್ಲಿ ಅಶುತೋಷ್ ರಾಣಾ, ದಿವ್ಯಾ ದತ್ತ, ನೈಲ್ ಭೂಪಾಲಂ, ಸಂತೋಷ್ ಜುವೆಕರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಸದ್ಯ ಬಂದಿರುವ ಟೀಸರ್‌ನಲ್ಲಿ ಸಾಂಬಾಜಿ ಪಾತ್ರ ಪರಿಚಯ ಮಾತ್ರ ಮಾಡಿಸಲಾಗಿದೆ. ಆತನ ಪತ್ನಿ ಯೇಸುಬಾಯಿಯಾಗಿ ರಶ್ಮಿಕಾ ಟೀಸರ್‌ನಲ್ಲಿ ಕಾಣಿಸಿಲ್ಲ. ಇದು ಆಕೆಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೂ ಟೀಸರ್ ನೋಡಿದವರು ಮೆಚ್ಚಿಕೊಂಡಿದ್ದಾರೆ. ಡಿಸೆಂಬರ್ 6ರಂದು ಪ್ಯಾನ್ ಇಂಡಿಯಾ 'ಪುಷ್ಪ-2' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಟಫ್ ಫೈಟ್ ಕೊಡುತ್ತದೆ ಎಂದು ಅಂದಾಜಿಸುತ್ತಿದ್ದಾರೆ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜಯ್ 'ಚಾವ' ಚಿತ್ರಕ್ಕೆ ಹಣ ಹೂಡಿದ್ದಾರೆ.
ಎ. ಆರ್ ರಹಮಾನ್ ಸಂಗೀತ 'ಚಾವ' ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿರುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಭರ್ಜರಿ ಯುದ್ಧದ ಸನ್ನಿವೇಶಗಳ ಜೊತೆಗೆ ಎಮೋಷನಲ್ ಅಂಶವನ್ನು ಸೇರಿಸಿ ಸಿನಿಮಾ ತೆರೆಗೆ ತರಲಾಗುತ್ತಿದೆ. 'ಮಿಷನ್ ಮಜ್ನು' ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ 'ಗುಡ್‌ಬೈ', 'ಅನಿಮಲ್' ಸಿನಿಮಾಗಳಲ್ಲಿ ಮಿಂಚಿದ್ದರು. ಅಂದಹಾಗೆ 'ಚಾವ' ಆಕೆಯ 4ನೇ ಹಿಂದಿ ಸಿನಿಮಾ.


Click it and Unblock the Notifications











