ಎಲ್ಲರೆದುರೇ ನಿನ್ನ 'ರೇಟ್' ಎಷ್ಟು ಅಂದ ಆಂಕರ್, ಚಪ್ಪಲಿ ಬಿಚ್ಚಿ ಬಾರಿಸಿದ ಖ್ಯಾತ ಗಾಯಕಿ
ಸಾಮಾನ್ಯರು ಚಿತ್ರರಂಗದ ತಾರೆಯರು ಅಂದರೆ ರಾಯಲ್ ಜೀವನ .. ಕಾರು .. ಕೈಗೊಬ್ಬರು, ಕಾಲಿಗೊಬ್ಬರು ಸೇವಕರು.. ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೇ ವಾಸ .. ದಿನ ನಿತ್ಯ ಪಾರ್ಟಿ ಎಂದು ಅಂದುಕೊಂಡಿರುತ್ತಾರೆ. ಆದರೆ, ಇದರ ನಡುವೆ ಅವರು ಅನುಭವಿಸುವ ಯಮಯಾತನೆಗಳು ಒಂದೆರಡಲ್ಲ. ಅಭಿಮಾನದ ಪರಾಕಾಷ್ಠೆ.. ಸೆಲ್ಫಿ ಸಮಸ್ಯೆ.. ತಮ್ಮ ವ್ಯೆಯಕ್ತಿಕ ಬದುಕಿನ ಕಷ್ಟ ನಷ್ಟ ಇವೆಲ್ಲವನ್ನೂ ಕೂಡ ಇವರು ಎದುರಿಸಬೇಕಾಗುತ್ತೆ.
ಇನ್ನೂ ಹೆಣ್ಣ್ ಮಕ್ಕಳ ಪಾಲಿಗೆ ಸಿನಿಮಾ ಅಂದರೆ ಕೇವಲ ಥಳುಕು ಬಳುಕಷ್ಟೇ ಅಲ್ಲ, ಅದು ಕೊಳಕು ಮತ್ತು ಹುಳುಕಿನ ಪ್ರಪಂಚವೂ ಹೌದು. ನಾಯಕಿ ಇರಲಿ, ಗಾಯಕಿ ಇರಲಿ, ಪೋಷಕ ಕಲಾವಿದೆಯೇ ಇರಲಿ, ಚಿತ್ರರಂಗದ ಹೆಣ್ಣು ಮಕ್ಕಳನ್ನು ಹಲವರು ಇಲ್ಲಿ ಕಾಮದ ಸರಕಿನಂತೆ ನಡೆಸಿಕೊಳ್ಳುತ್ತಾರೆ. ಎಲ್ಲರೆದುರೇ ಸಾರ್ವಜನಿಕ ಸ್ಥಳದಲ್ಲಿ ಅಸಹ್ಯ ಮತ್ತು ಅಸಭ್ಯವಾಗಿ ವರ್ತಿಸುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಖ್ಯಾತ ಗಾಯಕಿಯೊಬ್ಬರು ವೇದಿಕೆಯಲ್ಲಿಯೇ ನಿರೂಪಕನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ.

ಹೌದು, ಅಸಲಿಗೆ ಬಿಹಾರದ ಸಾರಣ್ ಜಿಲ್ಲೆಯಲ್ಲಿ ಸಂಗೀತ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಭೋಜ್‌ಪುರಿಯ ಪ್ರಖ್ಯಾತ ಗಾಯಕಿ ನಿಶಾ ಉಪಾಧ್ಯಾಯ್ ಬಂದಿದ್ದರು. ತಮ್ಮ ಚಿನ್ನದ ಕಂಠ ಕುಣಿಸಿದರು. ಹಾಡನ್ನು ಹಾಡಿ ಸಭಿಕರ ಮನ ತಣಿಸಿದರು. ಆದರೆ, ಇದೇ ಸಮಯದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕ ನಿಶಾ ಉಪಾಧ್ಯಾಯ್ ಅವರಿಗೆ ನಿಮ್ಮ ರೇಟ್ ಎಷ್ಟು ಎಂದು ಕೇಳಿದ್ದಾನೆ.
ಈ ಅನುಚಿತ ಪ್ರಶ್ನೆ ಕೇಳಿ ಕೆರಳಿದ ನಿಶಾ ಉಪಾಧ್ಯಾಯ್ ತಮ್ಮ ಕಾಲಲ್ಲಿದ್ದ ಚಪ್ಪಲಿ ತೆಗೆದು ನಿರೂಪಕನಿಗೆ ಹೊಡೆಯಲು ಮುಂದಾಗಿದ್ದಾರೆ. ಅಲ್ಲಿದ್ದ ಜನ ಗಾಯಕಿ ನಿಶಾ ಅವರನ್ನು ತಡೆಯುವ ಪ್ರಯತ್ನ ಮಾಡಿದರಾದರೂ ನಿಶಾ ಅವರ ಕೋಪ ಮಾತ್ರ ಕಡಿಮೆಯಾಗಲಿಲ್ಲ. ಬದಲಿಗೆ ನಿಶಾ ಜೋರು ಜೋರಾಗಿ ಕೂಗಾಡಿದ್ದಾರೆ. ನಿರೂಪಕನ ಮೇಲೆ ಕೆಂಡ ಕಾರಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ ನಿರೂಪಕ ಗಾಯಕಿ ನಿಶಾ ಅವರಲ್ಲಿ ಕಾರ್ಯಕ್ರಮವೊಂದಕ್ಕೆ ಅವರು ಪಡೆಯುವ ಸಂಭಾವನೆ ಎಷ್ಟು ಎಂದು ಕೇಳಲು ಬಯಸಿದ್ದ. ಆದರೆ, ಮಾತಿನ ಭರದಲ್ಲಿ ನಿಮ್ಮ ದರ ಎಷ್ಟು ಎಂದು ನಿರೂಪಕ ಕೇಳಿದ್ದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ.
ಅಂದ್ಹಾಗೇ ಭೋಜ್‌ಪುರಿಯ ಸಾರ್ವಜನಿಕ ಕಾರ್ಯಕ್ರಮಗಳು ಇತ್ತೀಚೆಗೆ ಸಾಫ್ಟ್ ಪೋ*ರ್ನ್ ಸ್ವರೂಪ ಪಡೆಯುತ್ತಿವೆ. ಅಶ್ಲೀಲತೆಯ ಸೀಮೆ ಮೀರುತ್ತಿವೆ. ಸರ್ಕಾರ ಡಿಜೆ ಕಾರ್ಯಕ್ರಮವನ್ನೇನೋ ಸ್ಥಗಿತಗೊಳಿಸಿದೆ. ಆದರೂ ಕೂಡ ಅಶ್ಲೀಲತೆ-ಅಸಭ್ಯತೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಸದ್ಯ ನಿಶಾ ಉಪಾಧ್ಯಯ್ ನಿರೂಪಕನ ಮೇಲೆ ಹಲ್ಲೆಗೆ ಮುಂದಾದ ವಿಡಿಯೋವನ್ನು '@thebiharoffice' ಎಂಬ ಹ್ಯಾಂಡಲ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. 88,000 ಕ್ಕೂ ಅಧಿಕ ವೀಕ್ಷಣೆಯನ್ನು ಈ ವಿಡಿಯೋ ಪಡೆದಿದ್ದು ಹಲವಾರು ಜನ ತಮ್ಮ ಆಕ್ರೋಶವನ್ನು ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ 29 ವರ್ಷದ ನಿಶಾ ಉಪಾಧ್ಯಯ್ 2016ರಲ್ಲಿ ಭೋಜ್‌ಪುರಿ ಚಿತ್ರರಂಗಕ್ಕೆ ಬಂದರು. ''ಲೇ ಲೇ ಆಯೆ ಕೋಕಾ ಕೋಲಾ''..''ನವಕರ್ ಮಂತ್ರ''.. ''ಧೋಲಿದಾ ಧೋಲ್ ರೇ ವಾಗಡ್''.. ''ಹಸಿ ಹಸಿ ಜಾನ್ ಮರೇಲಾ''.. ''ಸಖಿ ಕೇ ಯಾರ್ ಪಗ್ಲಾ ಗೈಲ್ ಬಾ''.. ''ಪ್ಯಾರ್ ಮೇ ಹೋಯಿ ಬದ್ನಾಮಿ''.. ಇವರ ಕೆಲ ಜನಪ್ರಿಯ ಹಾಡುಗಳು.
ಕೇವಲ ಸಿನಿಮಾ ಹಾಡು ಮಾತ್ರವಲ್ಲದೇ ಭಕ್ತಿಗೀತೆ ಮತ್ತು ಜನಪದ ಗೀತೆಗಳನ್ನು ಕೂಡ ನಿಶಾ ಹಾಡಿದ್ದಾರೆ. ಇನ್ನು 2023ರಲ್ಲಿ ಇದೇ ರೀತಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಿಶಾ ಹಾಡು ಹಾಡುತ್ತಿದ್ದಾಗ ಇವರ ಮೇಲೆ ಗುಂಡಿನ ದಾಳಿ ನಡೆದಿತ್ತು. ನಿಶಾ ಎಡಗಾಲಿನ ತೊಡೆಗೆ ಗುಂಡು ತಗುಲಿತ್ತು.


Click it and Unblock the Notifications











