ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ವಿರೋಧ ವ್ಯಕ್ತಪಡಿಸಿದ ಬಾಲಿವುಡ್.!
ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯವೆಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಆದ್ರೆ, ಇದನ್ನ ಬಾಲಿವುಡ್ ನ ಕೆಲವು ನಟ, ನಟಿಯರು ವಿರೋಧಿಸಿದ್ದಾರೆ.
ದೇಶಭಕ್ತಿಯನ್ನ ಒತ್ತಾಯಪೂರ್ವಕವಾಗಿ ತೋರಿಸುವುದು ಬೇಕಾಗಿಲ್ಲ. ರಾಷ್ಟ್ರಗೀತೆಯನ್ನ ಗೌರವಿಸಲು ಚಿತ್ರಮಂದಿರ ಸರಿಯಾದ ಸ್ಥಳವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ್ದ ಗಾಯಕ ಸೋನು ನಿಗಮ್ ''ನಾನು ಎಲ್ಲ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಗೌರವಿಸುತ್ತೇನೆ. ಒಂದು ವೇಳೆ ಪಾಕಿಸ್ತಾನದ ರಾಷ್ಟ್ರಗೀತೆ ಹೇಳುತ್ತಿದ್ದರೆ ನಾನು ಎದ್ದು ನಿಲ್ಲುತ್ತೇನೆ. ಈ ಮೂಲಕ ಆ ರಾಷ್ಟ್ರದ ಹಾಗೂ ಅಲ್ಲಿಯ ಜನರಿಗೆ ಗೌರವ ನೀಡುತ್ತೇನೆ. ಇದರಲ್ಲಿ ತಪ್ಪೇನು ಇಲ್ಲ. ಥಿಯೇಟರ್ ಹಾಗೂ ರೆಸ್ಟೋರೆಂಟ್ ಗಳು ರಾಷ್ಟ್ರಗೀತೆ ಹೇಳಲು ಸೂಕ್ತ ಸ್ಥಳವಲ್ಲ'' ಎಂದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ನಟಿ ವಿದ್ಯಾ ಬಾಲನ್ ''ನನ್ನ ಪ್ರಕಾರ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನ ಅಗತ್ಯವಿಲ್ಲ. ರಾಷ್ಟ್ರಗೀತೆಯೊಂದಿಗೆ ದಿನ ಆರಂಭಿಸಲು ಅದೇನೂ ಸ್ಕೂಲ್ ಅಲ್ಲ. ರಾಷ್ಟ್ರಭಕ್ತಿಯನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ'' ಎಂದು ನಟಿ ವಿದ್ಯಾ ಬಾಲನ್ ತಿಳಿಸಿದ್ದಾರೆ.

''ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ನಾನು ಎಷ್ಟೇ ದೂರ ಹೋದರೂ ನನ್ನ ರಾಷ್ಟ್ರ ಪ್ರೇಮವನ್ನು ಉಳಿಸಿಕೊಳ್ಳತ್ತೇನೆ. ಅದನ್ನು ನಾನು ಹೇಳುವ ಅವಶ್ಯಕತೆ ಇಲ್ಲ. ರಾಷ್ಟ್ರಗೀತೆ ನನಗೆ ಎಲ್ಲೇ ಕೇಳಿಸಲಿ, ನಾನು ಎಲ್ಲಿದ್ರೂ ಎದ್ದು ನಿಲ್ಲುತ್ತೇನೆ' ಎಂದು ವಿದ್ಯಾ ಬಾಲನ್ ತಿಳಿಸಿದ್ದಾರೆ.

ಈ ಬಗ್ಗೆ ಇತ್ತೀಚೆಗಷ್ಟೇ ತಮಿಳು ನಟ ಕಮಲ್ ಹಾಸನ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ''ಸಿಂಗಪೂರ್‌ನಲ್ಲಿ ಪ್ರತಿನಿತ್ಯ ನಡುರಾತ್ರಿ ಅವರ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುತ್ತಾರೆ. ಅದೇ ರೀತಿ ದೂರದರ್ಶನದಲ್ಲೂ ಪ್ರಸಾರ ಮಾಡಿ. ಎಲ್ಲೆಂದರಲ್ಲಿ ನಮ್ಮ ದೇಶಭಕ್ತಿಯನ್ನು ನಿರೂಪಿಸಿಕೊಳ್ಳಬೇಕೆಂದು ಒತ್ತಾಯ ಮಾಡಬೇಡಿ'' ಎಂದಿದ್ದರು.


Click it and Unblock the Notifications











