ದಕ್ಷಿಣ ಭಾರತ ಸಿನಿಮಾಕ್ಕೂ ತಟ್ಟಿದ ಬಾಯ್‌ಕಾಟ್ ಬಿಸಿ: ಆತಂಕದಲ್ಲಿ ವಿಜಯ್ ದೇವರಕೊಂಡ!
ಬಾಲಿವುಡ್ ಸಿನಿಮಾಗಳನ್ನು ಮಾತ್ರವೆ ಕಾಡುತ್ತಿದ್ದ 'ಬಾಯ್‌ಕಾಟ್' ಬಿಸಿ ಇದೀಗ ದಕ್ಷಿಣ ಭಾರತ ಸಿನಿಮಾಕ್ಕೂ ಹಬ್ಬಿದೆ.
'ಲಾಲ್ ಸಿಂಗ್ ಚಡ್ಡ', 'ರಕ್ಷಾ ಬಂಧನ್', ಹಿಂದಿಯ 'ವಿಕ್ರಂ ವೇದ', 'ದೊಬಾರ', 'ಜವಾನ್' ಸಿನಿಮಾಗಳಿಗೆ ಬಾಯ್‌ಕಾಟ್ ಬಿಸಿ ತಟ್ಟಿದೆ. ಆದರೆ ಬಹುತೇಕ ಹಿಂದಿ ಸಿನಿಮಾಗಳಿಗೆ ಮಾತ್ರವೇ ಅಂಟುತ್ತಿದ್ದ ಈ ಬಾಯ್‌ಕಾಟ್ ಬಿಸಿ ಇದೀಗ ದಕ್ಷಿಣ ಭಾರತ ಸಿನಿಮಾಕ್ಕೂ ತಗುಲಿದೆ.
ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ದೇಶದಾದ್ಯಂತ ತೆರೆಗೆ ಬರಲಿದೆ. ಹಿಂದಿ, ತೆಲುಗು ಸೇರಿದಂತೆ ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಬಾಯ್‌ಕಾಟ್ ಟ್ರೆಂಡ್ ಆರಂಭವಾಗಿದೆ.
'ಲಾಲ್ ಸಿಂಗ್ ಚಡ್ಡ', 'ಜವಾನ್', 'ರಕ್ಷಾ ಬಂಧನ್' ಇನ್ನಿತರೆ ಸಿನಿಮಾಗಳ ಬಾಯ್‌ಕಾಟ್‌ಗೆ ಕಾರಣವೊಂದಿತ್ತು, ಆದರೆ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಬಾಯ್‌ಕಾಟ್‌ಗೆ ಕಾರಣವೇನೆಂದು ದಕ್ಷಿಣದವರು ತಲೆ ಕೆಡಿಸಿಕೊಂಡಿದ್ದಾರೆ.

ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ
'ಲೈಗರ್' ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ವಿಜಯ್ ದೇವರಕೊಂಡ, 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮತ್ತು ಆಮಿರ್ ಖಾನ್ ಅನ್ನು ಬೆಂಬಲಿಸದ ಕಾರಣಕ್ಕೆ ವಿಜಯ್ ದೇವರಕೊಂಡ ಸಿನಿಮಾಕ್ಕೂ ಬಾಯ್‌ಕಾಟ್ ಬಿಸಿ ತಟ್ಟಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಬಹಿಷ್ಕಾರ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ. ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.

ಆಮಿರ್ ಖಾನ್ ಸಿನಿಮಾ ಬೆಂಬಲಿಸಿದ್ದ ವಿಜಯ್
ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, ''ಸಿನಿಮಾ ಎಂದರೆ ಒಬ್ಬರು ನಟರಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. 'ಲಾಲ್ ಸಿಂಗ್ ಚಡ್ಡ' ಆಮಿರ್ ಖಾನ್ ಒಬ್ಬರಿಗೇ ಸಂಬಂಧಿಸಿದ್ದಲ್ಲ. ಸಿನಿಮಾ ಒಂದು ಸಿನಿಮಾದ ಹಿಂದೆ ಸಾವಿರಾರು ಮಂದಿ ಕೆಲಸ ಮಾಡಿರುತ್ತಾರೆ. ಸಿನಿಮಾ ಒಂದನ್ನು ಬಹಿಷ್ಕರಿಸಿದರೆ ಆ ಎಲ್ಲ ಕುಟುಂಬಗಳಿಗೂ ಸಮಸ್ಯೆ ಆಗುತ್ತದೆ'' ಎಂದಿದ್ದರು. ಜೊತೆಗೆ ಆಮಿರ್ ಖಾನ್ ನಟನೆಯನ್ನು, ಅವರ ಸಿನಿಮಾಗಳನ್ನು ವಿಜಯ್ ದೇವರಕೊಂಡ ಹೊಗಳಿದ್ದರು.

ಆಮಿರ್ ಖಾನ್ ಬೆಂಬಲಿಸಿದವರಿಗೆ ಬಾಯ್‌ಕಾಟ್ ಬಿಸಿ
ಆಮಿರ್ ಖಾನ್ ಅವರನ್ನು ಅವರ ಸಿನಿಮಾವನ್ನು ಹೊಗಳಿರುವ ಕಾರಣಕ್ಕೆ ವಿಜಯ್ ದೇವರಕೊಂಡ ಸಿನಿಮಾಕ್ಕೆ ಬಾಯ್‌ಕಾಟ್ ಬಿಸಿ ತಗುಲುತ್ತಿದೆ. ಆಮಿರ್ ಖಾನ್ ಸಿನಿಮಾವನ್ನು ಬೆಂಬಲಿದ ಎಲ್ಲರ ಸಿನಿಮಾಕ್ಕೂ ಬಾಯ್‌ಕಾಟ್ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಸಹ ಆಮಿರ್ ಖಾನ್ ಸಿನಿಮಾವನ್ನು ಬೆಂಬಲಿಸಿದ್ದರು. ಹೃತಿಕ್ ರೋಷನ್ ಸಹ ಒಳ್ಳೆಯ ಮಾತಗಳನ್ನಾಡಿದ್ದರು. ಹಾಗಾಗಿ ಅವರ ಸಿನಿಮಾಗಳ ವಿರುದ್ಧವೂ ಬಾಯ್‌ಕಾಟ್ ಟ್ರೆಂಡ್ ಮಾಡಲಾಗುತ್ತಿದೆ.

ಆಗಸ್ಟ್ 25 ರಂದು ತೆರೆಗೆ ಬರಲಿದೆ
'ಲೈಗರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಕೃಷ್ಣ ನಟಿಸಿದ್ದು ವಿಶೇಷ ಪಾತ್ರವೊಂದರಲ್ಲಿ ಜಗತ್ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ ಪುರಿ ಜಗನ್ನಾಥ್. ಸಿನಿಮಾವು ಆಗಸ್ಟ್ 25 ರಂದು ಬಿಡುಗಡೆ ಆಗಲಿದೆ.


Click it and Unblock the Notifications











