ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಬೆಳೆಯಲು ಮಲ್ಯ ಮ್ಯಾಜಿಕ್ ಕಾರಣ ; ಬಿಗ್ ಬಾಸ್ ಚೆಲುವೆಯ ಶಾಕಿಂಗ್ ಹೇಳಿಕೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ವಿಜಯ್ ಮಲ್ಯ ಹೆಸರು ಕೇವಲ ಹೆಸರಾಗಿರಲಿಲ್ಲ. ಬದಲಿಗೆ ಕಿಂಗ್ ಆಫ್ ಗುಡ್ ಟೈಮ್ಸ್ ಎಂದು ಅವರನ್ನು ಕರೆಯಲಾಗುತ್ತಿತ್ತು. ಭಾರತದ ವಿಮಾನ ಕ್ಷೇತ್ರದಲ್ಲಿ ಆರಂಭಿಕ ಕ್ರಾಂತಿ ಮಾಡಿದ್ದ ಮಲ್ಯ ಕೇವಲ ಲಿಕ್ಕರ್ ಬಿಸಿನೆಸ್ ಮಾತ್ರ ವಿಸ್ತರಿಸಲಿಲ್ಲ. ಬದಲಿಗೆ ಕ್ರಿಕೆಟ್‌ದಿಂದ ಹಿಡಿದು ಎಫ್ 1 ರೇಸ್‌ವರೆಗೆ ತಮ್ಮ ಸಾಮ್ರಾಜ್ಯ ಬೆಳೆಸಿದ್ದರು.
ಇನ್ನು ಮಲ್ಯ ಕೇವಲ ಉದ್ಯಮಿಯಾಗಿರಲಿಲ್ಲ. ಬದಲಿಗೆ ಗ್ಲಾಮರ್ ಲೋಕದ ಅಧಿಪತಿಯಾಗಿದ್ದರು. ಆದರೆ.. ಈ ಸಾಮ್ರಾಜ್ಯ ಮಲ್ಯ ಕಣ್ಮುಂದೆಯೇ ಹಂತ ಹಂತವಾಗಿ ಕುಸಿದು ಬಿತ್ತು. ಸ್ವಯಂ ಕೃತ ಅಪರಾಧಗಳಿಂದ ಆರ್ಥಿಕ ಅಪರಾಧಿಯಾದ ಮಲ್ಯ ಕೊನೆಗೆ ದೇಶದಿಂದ ಓಡಿ ಹೋಗಬೇಕಾಯ್ತು. ಭಾರತಕ್ಕೆ ಕಾಲಿಡಲು ಸಾಧ್ಯವಾಗದೇ ಲಂಡನ್‌ನಲ್ಲಿ ಕುಂತು ಸ್ಕಾಚ್ ಹೀರಬೇಕಾಯ್ತು.

ಮಲ್ಯ ಇಲ್ಲಿಂದ ಪೇರಿ ಕಿತ್ತು ಹತ್ತು-ಹನ್ನೊಂದು ವರ್ಷಗಳಾಗಿವೆ. ಆದರೂ ಕೂಡ ಹಲವರು ಇಂದು ಕೂಡ ಒಂದಿಲ್ಲೊಂದು ರೀತಿಯಲ್ಲಿ ಮಲ್ಯ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ವಿಜಯ್ ಮಲ್ಯ ಅವರಲ್ಲಿದ್ದ ಒಳ್ಳೆತನ ಮತ್ತು ದೂರದೃಷ್ಟಿಯನ್ನು ಕೊಂಡಾಡುತ್ತಾರೆ. ಉದಾಹರಣೆಗೆ ಸೋನಾಲಿ ರಾವತ್.
ಹೌದು, ಸೋನಾಲಿ ರಾವತ್.. ಹಿಂದಿ ಮತ್ತು ಮರಾಠಿಯ ''ಬಿಗ್ ಬಾಸ್'' ಬೆಡಗಿ. ಹಿಂದಿಯಲ್ಲಿ ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಿದ್ದ ಸೋನಾಲಿ, ಮೊನ್ನೆ ಮೊನ್ನೆ ಅಂತ್ಯವಾದ ಮರಾಠಿಯ ''ಬಿಗ್ ಬಾಸ್'' ಆರನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು.
''ಬಿಗ್ ಬಾಸ್'' ಮನೆಯನ್ನು ಪ್ರವೇಶಿಸಿದ ತಪ್ಪಿಗೆ ತಮಗೆ 'ಸ್ಕ್ಯಾಬೀಸ್' ಎಂಬ ಚರ್ಮದ ಕಾಯಿಲೆ ಬಂದಿದೆ ಎಂದು ನೊಂದು ಬೆಂದು ಆರೋಪ ಮಾಡಿದ್ದ ಸೋನಾಲಿ, ಮರಾಠಿ ''ಬಿಗ್ ಬಾಸ್'' ಮನೆಯಲ್ಲಿ ದೊಡ್ಡ ದೊಡ್ಡ ಇಲಿಗಳು ಓಡಾಡುತ್ತಿದ್ದವು, ಆಹಾರದಲ್ಲಿ ಜಿರಳೆಗಳು ಇರುತ್ತಿದ್ದವು ಎಂದು ಹೇಳಿದ್ದರು. 17 ಜನ ಸ್ಪರ್ಧಿಗಳಿಗೆ ಒಂದೇ ವಾಶ್‌ರೂಮ್ ಬಳಸಲು ಒತ್ತಾಯ ಮಾಡಲಾಗಿತ್ತು ಎಂದಿದ್ದರು. ಸಾಲು ಸಾಲು ಆರೋಪ ಮಾಡಿ ಪರಿಹಾರ ಕೋರಿ ಬಿಗ್ ಬಾಸ್‌ಗೆ ನೋಟಿಸ್ ಕೂಡ ಕಳಿಸಿದ್ದರು.
ಇನ್ನು ಹೀಮೇಶ್ ರೇಶಮ್ಮಿಯಾ ಅವರ ''ದಿ ಎಕ್ಸ್‌ಪೋಸ್'' ಹಾಗೂ ರಿತೇಶ್ ದೇಶಮುಖ್ ಅಭಿನಯದ ''ಗ್ರೇಟ್ ಗ್ರ್ಯಾಂಡ್ ಮಸ್ತಿ'' ಸೋನಾಲಿ ರಾವುತ್ ಅವರ ಕೆಲ ಪ್ರಮುಖವಾದ ಚಿತ್ರಗಳು. ಇಂಥಾ ಸೋನಾಲಿ ರಾವತ್ ಒಂದ್ಕಾಲದ ''ಕಿಂಗ್ ಫಿಶರ್'' ಮಾಡೆಲ್ ಕೂಡ ಹೌದು.

ಇಂಥಾ ಸೋನಾಲಿ ರಾವತ್ ಸದ್ಯ ವಿಜಯ್ ಮಲ್ಯ ಅವರ ಕುರಿತು ಮಾತನಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಇವತ್ತು ಈ ಹಂತಕ್ಕೆ ಬೆಳೆಯಲು ವಿಜಯ್ ಮಲ್ಯ ಅವರೇ ನೇರ ಮತ್ತು ಪ್ರಮುಖ ಕಾರಣವೆಂದು ಹೇಳಿದ್ಧಾರೆ.
ನಿಮ್ಮ ''ಫಿಲ್ಮಿಬೀಟ್''ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸೋನಾಲಿ ರಾವತ್, ''ಕಿಂಗ್‌ಫಿಶರ್'' ಕ್ಯಾಲೆಂಡರ್ ಚಿತ್ರೀಕರಣದ ಸಮಯದಲ್ಲಿ ನಾನು ವಿಜಯ್ ಮಲ್ಯ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದೆ ಎಂದು ಹೇಳಿರುವ ಸೋನಾಲಿ, ಮೊದಲ ಭೇಟಿಯಲ್ಲೇ ಅವರ ವ್ಯಕ್ತಿತ್ವದಿಂದ ನಾನು ತುಂಬಾನೇ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.
ಮಲ್ಯ ಅವರದ್ದು ಆಕರ್ಷಕ ಮತ್ತು ಉದಾರವಾದ ವ್ಯಕ್ತಿತ್ವ ಎಂದು ಹೇಳಿರುವ ಸೋನಾಲಿ, ಅವರು ಶಿಸ್ತಿನ ಸಿಪಾಯಿ ಎಂದು ಹೇಳಿದ್ದಾರೆ. ಹೃದಯವಂತ ಎಂದಿದ್ದಾರೆ. ಮಾತನಾಡುವ ನಾಲ್ಕು ಜನರ ಕುರಿತು ಅವರು ಯಾವತ್ತು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿರುವ ಸೋನಾಲಿ ಅವರಿಗೆ ಅವರಿಗೇನು ಬೇಕು ಎನ್ನುವುದು ಸ್ಪಷ್ಟವಾಗಿ ಗೊತ್ತಿರುತ್ತಿತ್ತು ಎಂದು ಹೇಳಿದ್ದಾರೆ. ತಮ್ಮ ಮನದ ಭಾವನೆಗಳನ್ನು ಅವರು ಇದ್ದಿದ್ದನ್ನು ಇದ್ದ ಹಾಗೇ ನೇರವಾಗಿಯೇ ಹಂಚಿಕೊಳ್ಳುತ್ತಾರೆ ಎಂದಿದ್ಧಾರೆ.
''ಕಿಂಗ್ ಫಿಶರ್'' ಕ್ಯಾಲೆಂಡರ್ ಹಲವರ ಬದುಕನ್ನು ಬದಲಿಸಿದೆ ಎಂದು ಹೇಳಿರುವ ಸೋನಾಲಿ, ದೀಪಿಕಾ ಪಡುಕೋಣೆ ಮತ್ತು ಕತ್ರಿಕಾ ಕೈಫ್ ಅವರ ಬದುಕು ರೂಪಿಸಿದ್ದೇ ವಿಜಯ್ ಮಲ್ಯ ಎಂದು ಹೇಳಿದ್ದಾರೆ. ಪ್ರತಿಭೆಗಳನ್ನು ಮಲ್ಯ ಹೆಕ್ಕಿ ತೆಗೆಯುತ್ತಿದ್ದರು ಎಂದು ಹೇಳಿರುವ ಸೋನಾಲಿ ಎಲ್ಲರಲ್ಲಿಯೂ ಅವರು ಪ್ರೋತ್ಸಾಹ ತುಂಬುತ್ತಿದ್ದರು ಎಂದು ಹೇಳಿದ್ದಾರೆ. ನನಗೆ ಬ್ರೇಕ್ ಸಿಕ್ಕಿದ್ದು ಕೂಡ ಅವರದ್ದೇ ವೇದಿಕೆಯಿಂದ ಎಂದಿದ್ದಾರೆ.

ಇನ್ನೂ ಬಿಕಿನಿ ಫೋಟೊಶೂಟ್ ಹಿಂದಿನ ಸಿದ್ಧತೆ ಕುರಿತು ಕೂಡ ಮಾತನಾಡಿರುವ ಸೋನಾಲಿ, ಬಿಕಿನಿ ಕ್ಯಾಲೆಂಡರ್ ನೋಡಲು ಸುಂದರ ಮತ್ತು ಆಕರ್ಷಕವಾಗಿ ಕಾಣಿಸುತ್ತೆ ಆದರೆ ಅದರ ಹಿಂದೆ ಪರಿಶ್ರಮ ತುಂಬಾ ಇತ್ತು ಎಂದು ಹೇಳಿದ್ಧಾರೆ.
ಕ್ಯಾಲೆಂಡರ್ ಗೆ ಫೋಸ್ ಕೊಡುವ ಮೂರು ತಿಂಗಳು ಮುನ್ನ, ಅಲ್ಲಿ ಮಿಲಿಟರಿಯ ವಾತಾವರಣ ನಿರ್ಮಾಣವಾಗುತ್ತಿತ್ತು ಎಂದು ಹೇಳಿರುವ ಸೋನಾಲಿ ಚರ್ಮದ ಆರೈಕೆ, ಕೂದಲಿನ ರಕ್ಷಣೆ, ಸೇರಿ ಹಲವು ವಿಷಯಗಳ ಕುರಿತು ನಾವು ಕಾಳಜಿ ವಹಿಸಬೇಕಿತ್ತು, ಎಲ್ಲದಕ್ಕೂ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ದೇಹದ ಕೊಬ್ಬ ಕರಗಿಸಲು ಕಠಿಣವಾದ ವ್ಯಾಯಾಮ ಮಾಡಿಸಲಾಗುತ್ತಿತ್ತು, ಆಹಾರ ಪದ್ದತಿ ಬೇರೆ ಇತ್ತು ಎಂದು ಹೇಳಿರುವ ಸೋನಾಲಿ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಕೂಡ ಅಲ್ಲಿ ಪಾಠ ಮಾಡಲಾಗುತ್ತಿತ್ತು ಎಂದು ಹೇಳಿದ್ಧಾರೆ. ಮಲ್ಯ ಸುಂದರ ಮುಖಗಳನ್ನು ಮಾತ್ರ ಹುಡುಕುತ್ತಿರಲಿಲ್ಲ ಬದಲಿಗೆ ಚಿತ್ರರಂಗಕ್ಕೆ ನಾಯಕಿಯರನ್ನು ತಯಾರು ಮಾಡುತ್ತಿದ್ದರು, ಅದು ಅವರು ಶಕ್ತಿ ಎಂದು ಹೇಳಿದ್ದಾರೆ.
ಮಾಡೆಲ್ ಗಳ ತರಬೇತಿ ಇರಲಿ ಅಥವಾ ಅವರ ನಡಿಗೆ ಇರಲಿ ಅಥವಾ ಅವರ ಲುಕ್ ಗಳಿರಲಿ ಎಲ್ಲವೂ ಮಲ್ಯ ಅವರ ಮೇಲ್ವಿಚಾರಣೆಯಲ್ಲೇ ನಡೆಯುತ್ತಿತ್ತು ಎಂದು ಹೇಳಿರುವ ಸೋನಾಲಿ, ಮಲ್ಯ ಅವರ ಪರ್ಫೆಕ್ಷನಿಸಂ ಮತ್ತು ಅವರ ಮೆಥಡ್‌ದಿಂದಾಗಿಯೇ ಚಿತ್ರರಂಗಕ್ಕೆ ದೀಪಿಕಾ ಮತ್ತು ಕತ್ರಿನಾ ಬಂದಾಗ ಅವರು ಹೊಸಬರಂತೆ ಕಾಣಿಸಲಿಲ್ಲ ಬದಲಿಗೆ ಪಳಗಿದ ನಟಿಯರಂತೆ ಕಾಣಿಸಿದರು ಎಂದು ಹೇಳಿದ್ದಾರೆ. ಇವರಿಬ್ಬರ ವಿಚಾರದಲ್ಲಿ ಕಿಂಗ್ ಫಿಶರ್ ಕ್ಯಾಲೆಂಡರ್ ಬಹುದೊಡ್ಡ ವೇದಿಕೆಯಂತೆ ಕಾರ್ಯ ನಿರ್ವಹಿಸಿತು ಎಂದಿದ್ದಾರೆ.
ನಾನು ಕಿಂಗ್ ಫಿಶರ್ ಕ್ಯಾಲೆಂಡರ್ ಗೆ ಮಾಡೆಲ್ ಆಗಿ ಆಯ್ಕೆಯಾದಾಗ ತುಂಬಾ ದಪ್ಪ ಇದ್ದೆ ಎಂದು ಹೇಳಿರುವ ಸೋನಾಲಿ, ಮೂರು ತಿಂಗಳಿನಲ್ಲಿ ನನ್ನೆಲ್ಲಾ ಕೊಬ್ಬು ಕರಗಿ ಹೋಯ್ತು ಎಂದು ಹೇಳಿದ್ದಾರೆ. ಅತ್ಯುತ್ತಮ ತರಬೇತುದಾರರು ನನಗೆ ತರಬೇತಿ ನೀಡಿದರು, ಇದೆಲ್ಲವೂ ಮಲ್ಯ ಅವರಿದ್ದಿದ್ದರಿಂದಲೇ ಸಾಧ್ಯವಾಯ್ತು ಎಂದು ಹೇಳಿರುವ ಸೋನಾಲಿ ಅಲ್ಲಿ ನಾನು ಶಿಸ್ತನ್ನು ಕಲಿತೆ ಎಂದಿದ್ಧಾರೆ.


Click it and Unblock the Notifications