ಹಣಕ್ಕಾಗಿ ಅಡ್ಡದಾರಿ ; 'ರಾಝ್' ನಿರ್ದೇಶಕ ವಿಕ್ರಮ್ ಭಟ್ ಬಂಧನ-ಪತ್ನಿಯೂ ಜೈಲು ಪಾಲು!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹೆಜ್ಜೆ ಹೆಜ್ಜೆಗೂ....
ಮಹಾಮೋಸ ಮಾಡುತ್ತಾರೆ. ಇನ್ನೂ ಕೆಲವರು ಕಾನೂನು.. ಪೊಲೀಸ್‌ರಿಗೆ ಕೂಡ ಭಯವನ್ನು ಪಡದೇ ನಿರ್ಭೀತಿಯಿಂದ ಅಪರಾಧ ಎಸಗುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಈ ಸಾಲಿಗೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಕೂಡ ಸೇರಿಕೊಂಡಿದ್ದು ಈ ಕ್ಷಣದ ದುರಂತ.

ಹೌದು, ವಿಕ್ರಮ್ ಭಟ್.. ಬಾಲಿವುಡ್‌ನ ಸ್ಟಾರ್ ನಿರ್ದೇಶಕ. ಒಂದಲ್ಲ.. ಎರಡಲ್ಲ.. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ಇರುವವರು ಇವರು. ''ಫರೇಬ್''.. ''ಗುಲಾಮ್''.. ''ಕಸೂರ್''.. ''ಆಪ್ ಮುಝೇ ಅಚ್ಚೆ ಲಗನೇ ಲಗೇ''.. ''ಆವಾರಾ ಪಾಗಲ್ ದಿವಾನಾ''.. ''ದಿವಾನೆ ಹುಯೇ ಪಾಗಲ್''.. ಹೀಗೆ ಹಲವು ಸದಭಿರುಚಿ ಸಿನಿಮಾಗಳನ್ನು ಮಾಡಿದ ಕೀರ್ತಿ ಇವರದ್ದು. ಇಷ್ಟೇ ಅಲ್ಲ.. ಚಿತ್ರೋದ್ಯಮದಲ್ಲಿಯೇ ಹೊಸ ಅಲೆ ಎಬ್ಬಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ''ರಾಝ್''ನ ಹಿಂದಿರುವ ರೂವಾರಿ ಕೂಡ ಇವರೇ.
''ರಾಝ್''.. '''ರಾಝ್ 3D''.. ''ರಾಝ್ ರೀಬೂಟ್''.. ''1920''.. ''ಶಾಪಿತ್''.. ''ಹಾಟೆಂಡ್''.. ಹೀಗೆ ಹಲವಾರು ಪ್ರೇತಾತ್ಮದ ಕಥೆಯನ್ನೊಂದಿರುವ ಹಾರರ್ ಚಿತ್ರಗಳು ತೆರೆಗೆ ಬಂದಿದ್ದು ಇವರ ಬತ್ತಳಿಕೆಯಿಂದಲೇ.
ಇಂಥಾ ವಿಕ್ರಂ ಭಟ್ ಅವರನ್ನು ಸದ್ಯ ರಾಜಸ್ಥಾನದ ಪೊಲೀಸರು ಮುಂಬೈಗೆ ಬಂದು ಬಂಧಿಸಿದ್ದಾರೆ. ಮುಂಬೈನ ವೆರ್ಸೋವಾ, ಅಂಧೇರಿ ಪಶ್ಚಿಮದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ವಿಕ್ರಮ್ ಭಟ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೇವಲ ವಿಕ್ರಮ್ ಭಟ್ ಮಾತ್ರವಲ್ಲದೇ ಅವರ ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದು ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಉದಯಪುರಕ್ಕೆ ಕರೆದೊಯ್ದಿದ್ದಾರೆ.
30 ಕೋಟಿ ವಂಚನೆ ಪ್ರಕರಣ ವಿಕ್ರಮ್ ಭಟ್ ವಿರುದ್ಧ ದಾಖಲಾಗಿದ್ದು, ಉದಯಪುರದ ಇಂದಿರಾ ಗ್ರೂಫ್ ಆಫ್ ಕಂಪನಿಯ ಮಾಲೀಕ ಡಾ.ಅಜಯ್ ಮುರ್ದಿಯಾ ಅವರು ವಿಕ್ರಮ್ ಭಟ್ ವಿರುದ್ಧ ದೂರು ಸಲ್ಲಿಸಿದ್ದಾರೆ.

ಆ ಪ್ರಕಾರ ಡಾ ಅಜಯ್ ಮುರ್ದಿಯಾ ಇಹಲೋಕ ತ್ಯಜಿಸಿದ ತಮ್ಮ ಪತ್ನಿಯ ಜೀವನಾಧಾರಿತ ಚಿತ್ರವನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಮೆಹಬೂಬ್ ಮತ್ತು ದಿನೇಶ್ ಕಠಾರಿಯಾ ನೆರವು ಪಡೆದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ವಿಕ್ರಂ ಭಟ್ ಅವರನ್ನು ಮುಂಬೈನ ವೃಂದಾವನ ಸ್ಟುಡಿಯೋದಲ್ಲಿ ಭೇಟಿಯಾಗಿದ್ದರು.
ಈ ಸಮಯದಲ್ಲಿ 200 ಕೋಟಿ ಲಾಭದ ಆಸೆ ತೋರಿಸಿದ್ದ ವಿಕ್ರಂ ಭಟ್, ಡಾ.ಅಜಯ್ ಮುರ್ದಿಯಾ ಅವರಿಂದ 30 ಕೋಟಿ ಹಣವನ್ನು ಪಡೆದಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿಯಷ್ಟೇ ಉಳಿಯಿತು.
ಈ ಹಿನ್ನೆಲೆ ಡಾ ಅಜಯ್ ಮುರ್ದಿಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ದೂರು ದಾಖಲಿಸಿದ್ದರು. ಡಾ ಅಜಯ್ ಮುರ್ದಿಯಾ ನೀಡಿದ ದೂರಿನ ಅನ್ವಯ ಉದಯಪುರ ಪೊಲೀಸರು ವಿಕ್ರಂ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಜನರ ವಿರುದ್ಧ ಏಳು ದಿನಗಳ ಹಿಂದೆಯೇ ಲೂಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಈಗ ಅರೆಸ್ಟ್ ಮಾಡಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆಯಷ್ಟೇ ವಿಕ್ರಂ ಭಟ್ ಪ್ರತಿಕ್ರಿಯೆ ನೀಡಿದ್ದರು. ಎಲ್ಲವೂ ಆಧಾರರಹಿತ ಎಂದು ಹೇಳಿದ್ದರು. ನಮ್ಮ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರ ನನಗೆ ಗೊತ್ತಾಗಿದೆ, ಪೊಲೀಸರಿಗೆ ತಪ್ಪು ಮಾಹಿತಿ ನೀಡಲಾಗಿದೆ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದರು. ಪೊಲೀಸರನ್ನು ನಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರಬೇಕು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಹೇಳಿದ್ದ ವಿಕ್ರಂ ಭಟ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು. ನನ್ನ ಹೇಳಿಕೆಗಳಿಗೆ ಪೂರಕವಾಗಿ ನನ್ನ ಬಳಿ ಸಂಪೂರ್ಣ ಪುರಾವೆಗಳಿವೆ. ಪೊಲೀಸರಿಗೆ ಸಾಕ್ಷಿಗಳು ಬೇಕಾದರೆ, ನಾನು ಎಲ್ಲವನ್ನೂ ತೋರಿಸುತ್ತೇನೆ ಎಂದು ಕೂಡ ಹೇಳಿದ್ದರು.


Click it and Unblock the Notifications











