ಒಲಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಕುಸ್ತಿಪಟು ವಿನೇಶ್ ಫೊಗಟ್; 'ದಂಗಲ್- 2' ಚಿತ್ರಕ್ಕೆ ವೇದಿಕೆ ಸಿದ್ಧ?
ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಇದೀಗ ಕುಸ್ತಿಯಲ್ಲಿ ಚಿನ್ನ ಗೆಲ್ಲುವ ಸುವರ್ಣಾವಕಾಶ ಸಿಕ್ಕಿದೆ. ಮಹಿಳಾ ಕುಸ್ತಿಪಟು ವಿನೇಶ್ ಫೊಗಟ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಒಂದು ಪದಕ ಖಾತ್ರಿಪಡಿಸಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿ ಗೆದ್ದರೆ ಚಿನ್ನಗ ಪದಕ ಗ್ಯಾರೆಂಟಿ.
ಈ ಬಾರಿ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕಗಳನ್ನು ಭಾರತದ ಕೀಡಾಪಟುಗಳನ್ನು ಗೆದ್ದಿದ್ದಾರೆ. ಬೆಳ್ಳಿ ಅಥವಾ ಚಿನ್ನ ಪದಕ ಇನ್ನು ಸಿಕ್ಕಿಲ್ಲ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ಹಂತಕ್ಕೇರಿ ಕುಸ್ತಿಪಟು ವಿನೇಶ್ ಫೊಗಟ್ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್‌ನಲ್ಲೂ ಆಕೆ ಯಶಸ್ಸು ಸಾಧಿಸಿದರೆ ಭಾರತಕ್ಕೆ ಚಿನ್ನಕ ಪದಕ ಧಕ್ಕಲಿದೆ. ವಿನೇಶ್ ಫೊಗಟ್ ತೀವ್ರ ಟೀಕೆ, ಆರೋಪ ಮತ್ತು ಹೋರಾಟ ಎಲ್ಲವನ್ನು ಮೀರಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

ಅತ್ತ ವಿನೇಶ್ ಫೊಗಟ್ ಒಲಂಪಿಕ್ಸ್‌ನಲ್ಲಿ ಎದುರಾಳಿಗಳನ್ನು ತಮ್ಮ ಪಟ್ಟುಗಳ ಮೂಲಕ ಕಟ್ಟಿಹಾಕಿ ಗೆದ್ದು ವಿಜಯೋತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಆ ದೃಶ್ಯಗಳನ್ನು ನೋಡುತ್ತಿದ್ದರೆ ಭಾರತೀಯರಿಗೆ ಆಮೀರ್ ಖಾನ್ ನಟನೆಯ 'ದಂಗಲ್' ಸಿನಿಮಾ ದೃಶ್ಯಗಳು ನೆನಪಾಗುತ್ತಿದೆ. ಚಿತ್ರದಲ್ಲಿ ಗೀತಾ ಫೊಗಟ್, ಬಬಿತಾ ಫೊಗಟ್ ವಿವಿಧ ಕ್ರೀಡಾಕೂಟಗಳಲ್ಲಿ ಗೆದ್ದು ಸಾಧಿಸಿದ ದೃಶ್ಯಗಳು ನೆನಪಾಗುತ್ತಿದೆ.
ವಿನೇಶ್ ಫೊಗಟ್ ಸಾಧನೆಗೆ ದೇಶವೇ ಬಹುಪರಾಕ್ ಎನ್ನುತ್ತಿದೆ. ಆಕೆಯ ಸಾಧನೆ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿ ಇಲ್ಲ. ಅದೇ ಕಾರಣಕ್ಕೆ ಅಭಿಮಾನಿಗಳು 'ದಂಗಲ್-2' ಸಿನಿಮಾ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ವಿನೇಶ್ ಫೊಗಟ್ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸೀಕ್ವೆಲ್ ಮಾಡಲು ಇದು ಸರಿಯಾದ ಸಮಯ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟ ಆಮೀರ್ ಖಾನ್ ಬಳಿ ಮನವಿ ಮಾಡುತ್ತಿದ್ದಾರೆ.
ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ವಿನೇಶ್ ಫೊಗಟ್ ಗೆಲುವಿಗೆ ಬಾಲಿವುಡ್ ತಾರೆಯರು ಬಹುಪರಾಕ್ ಎನ್ನುತ್ತಿದ್ದಾರೆ. ನಟರಾದ ರಿತೇಶ್ ದೇಶ್‌ಮುಖ್, ರಾಜ್‌ಕುಮಾರ್ ರಾವ್, ರಣ್‌ದೀಪ್ ಹೂಡಾ ಹಾಗೂ ನಟಿಯರಾದ ಟಾಪ್ಸಿ ಪನ್ನು, ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಬೇಗಂ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಸಾಧನೆಯನ್ನು ಕೊಂಡಾಡಿದ್ದಾರೆ.
ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಫೊಗಟ್ ಜೀವನವನ್ನಾಧರಿ ಆಮೀರ್ ಖಾನ್ 'ದಂಗಲ್' ಸಿನಿಮಾ ಮಾಡಿದ್ದರು. ಚಿತ್ರದಲ್ಲಿ ಮಹಾವೀರ್ ಸಿಂಗ್ ಫೊಗಟ್ ಪಾತ್ರದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ನಟಿಸಿದ್ದರು. ತಾನು ಸಾಧಿಸಲು ಸಾಧ್ಯವಾಗದೇ ಇದ್ದಿದ್ದನ್ನು ತನ್ನ ಹೆಣ್ಣುಮಕ್ಕಳ ಮೂಲಕ ಸಾಧಿಸಿ ತೋರಿಸುವ ಕಥೆ ಅದು. ವಿನೇಶ್ ಫೊಗಟ್ ಕೂಡ ಮಹಾವೀರ್ ಸಿಂಗ್ ಫೊಗಟ್ ಸೋದರಿ ಸಂಬಂಧಿ. ಅವರ ಇಡೀ ಕುಟುಂಬವೇ ಕುಸ್ತಿ ಪದಕಗಳನ್ನು ಗೆದ್ದ ಕುಟುಂಬ.
ವಿನೇಶ್ ಫೊಗಟ್ ತಂದೆ ರಾಜ್‌ಪಾಲ್ ಫೋಗಟ್ ಕೂಡ ಕುಸ್ತಿಪಟು. ಇನ್ನು ಗೀತಾ ಹಾಗೂ ಬಬಿತಾ ಇಬ್ಬರೂ ಆಕೆಯ ಕಸೀನ್ ಆಗಬೇಕು. ಕಳೆದ ವರ್ಷ ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಮಹಿಳಾ ಅಥ್ಲೀಟ್‌ಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕುಸ್ತಿ ಫೆಡರೇಷನ್ ಅಧ್ಯಕ್ಷ, ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಆತನನ್ನು ಬಂಧಿಸುವಂತೆ ಬೀದಿಗಿಳಿದು ವಿನೇಶ್ ಫೊಗಟ್ ಹೋರಾಟ ಮಾಡಿದ್ದರು. ಆ ಸಮಯದಲ್ಲಿ ಬಹಳ ಟೀಕೆ ಎದುರಿಸುವಂತಾಗಿತ್ತು. ಅದನ್ನೆಲ್ಲಾ ಮೀರಿ ಈಗ ಸಾಧಿಸಿ ತೋರಿಸಿದ್ದಾರೆ.


Click it and Unblock the Notifications











