'ಹಲಾಲ್ ಕಟ್ ಹೆಸರಿನಲ್ಲಿ ತುಂಬಾ ಮೋಸ ಮಾಡ್ತಾರೆ,ನಿಮ್ದೇನು ಕಥೆ?ಹೋಟೆಲ್‌ನಲ್ಲಿ ಕಿರಿಕ್ ಮಾಡಿದ ಗಣೇಶ್ ಚಿತ್ರದ ನಾಯಕಿ!
ಪ್ರತಿಯೊಂದು ಧರ್ಮದಲ್ಲಿ ಮಾಡುವ ಕೆಲಸ ಸೇವಿಸುವ ಆಹಾರ ಮತ್ತು ವಸ್ತುಗಳಿಗೂ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆಹಾರ ಸೇವನೆಗೆ ಸಂಬಂಧಿಸಿದ ಶಾಸ್ತ್ರದ ನಿಯಮಗಳು ಕೂಡ ಸಾಕಷ್ಟಿವೆ. ಹೇಗೆ ಕುಳಿತು ನಾವು ಆಹಾರ ಸೇವನೆಯನ್ನು ಮಾಡಬೇಕು ? ಯಾವ ರೀತಿಯಲ್ಲಿ ಆಹಾರ ಸೇವನೆಯನ್ನು ಮಾಡಬೇಕು ಎಂಬುದರ ಕುರಿತು ನಿಯಮಗಳಿವೆ. ಆ ಪೈಕಿ ಮುಸ್ಲಿಮರ ಆಹಾರ ಪದ್ದತಿ ಮತ್ತು ನಿಯಮಗಳಲ್ಲಿ 'ಹಲಾಲ್ ' ಬಹುಮುಖ್ಯವಾದ ಭಾಗ. ಈ ನಿಯಮವನ್ನು ಸನಾ ಖಾನ್ ಪಾಲಿಸುತ್ತಿರುವ ವಿಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಸನಾ ಖಾನ್.. ಒಂದ್ಕಾಲದ ಗ್ಲಾಮರ್ ಗೊಂಬೆ. ಕೇವಲ ಬಾಲಿವುಡ್ ಮಾತ್ರ ಅಲ್ಲ ಬೇರೆ ಭಾಷೆಯಲ್ಲಿ ಕೂಡ ಬೇಡಿಕೆ ಹೊಂದಿದ್ದವರು ಇವರು. ಆದರೆ ಅದೇನಾಯ್ತೋ ಗೊತ್ತಿಲ್ಲ. ಚಿತ್ರರಂಗದಿಂದ ದೇವರಲ್ಲಿನ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ಏಕಾಏಕಿ ಬಣ್ಣದ ಪ್ರಪಂಚದಿಂದ ದೂರವಾದ ಸನಾ ಖಾನ್ ನವೆಂಬರ್ 21-2020ರಂದು ಮುಸ್ಲಿಂ ಧರ್ಮ ಗುರು ಮುಫ್ತಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಮದುವೆಯಾದರು. ಆ ನಂತರ ಮನೆ-ಗಂಡ-ಸಂಸಾರ ಎಂದು ಕಳೆದುಹೋದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸನಾ ಆಗಾಗ ತಮ್ಮ ಧರ್ಮ ಮತ್ತು ಜೀವನದ ಕುರಿತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇಂಥಾ ಸನಾ ಖಾನ್ ಹೋಟೆಲ್‌ನಲ್ಲಿ ಸಿಬ್ಬಂದಿಯ ಜೊತೆ ಮಾಂಸದೂಟದ ಕುರಿತು ಚರ್ಚೆ ಮಾಡಿದ್ದಾರೆ. ಇದು ಶುದ್ಧ ಹಲಾಲ್ ಮಾಂಸನಾ ಅನ್ನುವ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹೋಟೆಲ್ ಸಿಬ್ಬಂದಿ ಹೌದು ಎನ್ನುವ ಉತ್ತರವನ್ನು ನೀಡಿದ್ದಾರೆ. ಇಷ್ಟಕ್ಕೆ ಸಮಾಧಾನಗೊಳ್ಳದ ಸನಾ ಮುಂದುವರೆದು ಅಲ್ಲಾ ಹು ಅಕ್ಬರ್ ಎಂದು ಕೂಗಿಯೇ ಈ ಮಾಂಸವನ್ನು ಕಟ್ ಮಾಡಿದ್ದೀರಾ ತಾನೇ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಆ ನಂತರ ಕೆಲವರು ಹಲಾಲ್ ಕಟ್ ಎಂದು ಹೇಳುತ್ತಾರೆ ಆದರೆ ಅದು ನಿಜವಾದ ಹಲಾಲ್ ಆಗಿರುವುದಿಲ್ಲ ಹಾಗೇಯೇ ಕಟ್ ಮಾಡುತ್ತಾರೆ ಎಂದು ನನಗೆ ವ್ಯಕ್ತಿಯೊಬ್ಬರು ಹೇಳಿದರು. ಅಂದಿನಿಂದ ನನಗೆ ತಿನ್ನಲು ಭಯವಾಗುತ್ತೆ ಎಂದು ಹೇಳಿರುವ ಸನಾ ಈ ಕಾರಣಕ್ಕೆ ನಾನು ವೆಜ್ ತಿನ್ನುತ್ತೇನೆ ಎಂದು ಹೇಳಿದ್ಧಾರೆ. ಇದಕ್ಕೆ ಆ ಹೋಟೆಲ್‌ನ ಸಿಬ್ಬಂದಿ ಇಲ್ಲ ಇದು ನಿಜವಾದ ಹಲಾಲ್ ಕಟ್ ಎಂದು ಹೇಳಿದ್ದಾರೆ.
ಸದ್ಯ ಸನಾ ಖಾನ್ ಅವರ ಈ ವಿಡಿಯೋ ವೈರಲ್ ಆಗಿದೆ. ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಕುರಿತು ಚರ್ಚೆಯನ್ನು ಕೂಡ ಇನ್ನೊಮ್ಮೆ ಹುಟ್ಟು ಹಾಕಿದೆ. ಇದರ ನಡುವೆ ಕೆಲವರು ತಿನ್ನಲು ಭಯ ಇದ್ದರೆ ನಿಮ್ಮ ಮನೆಯಲ್ಲಿ ನೀವೇ ಅಡುಗೆ ಮಾಡಿ ತಿನ್ನಬಹುದಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ತಿನ್ನುವ ಆಹಾರದ ಬಗ್ಗೆ ಈ ಚರ್ಚೆಗಳು ಯಾವತ್ತು ಮುಗಿಯುತ್ತಾವೆ ಈ ಅನುಮಾನಗಳೆಲ್ಲ ಯಾವತ್ತು ದೂರವಾಗುತ್ತಾವೆ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಹಲಾಲ್ ಅನ್ನುವುದು ಮೂಲತ ಅರೇಬಿಕ್ ಪದವಾಗಿದ್ದು, ಇದು ಮುಸ್ಲಿಂ ಸಮುದಾಯದ ಆಹಾರ ಪದ್ದತಿ ಮತ್ತು ನಿಯಮಗಳಲ್ಲಿ ಬಹುಮುಖ್ಯವಾದ ಭಾಗವಾಗಿದೆ. ಮುಸ್ಲಿಮರು ಯಾವುದೇ ಪ್ರಾಣಿಯ ಮಾಂಸವನ್ನು ತಿನ್ನುವ ಮೊದಲು ಆ ಪ್ರಾಣಿ ಜೀವಂತವಾಗಿ ಇರುವಾಗಲೇ ಅದರ ಕುತ್ತಿಗೆಯ ರಕ್ತನಾಳವನ್ನು ಅರ್ಧ ಕೊಯ್ಯಬೇಕು. ಅದು ನೋವಲ್ಲಿ ಒದ್ದಾಡುವಾಗ ಅದರ ದೇಹದಲ್ಲಿರುವ ರಕ್ತ ಪೂರ್ಣವಾಗಿ ಹೊರಗೆ ಬಂದು ಸಾವನ್ನಪ್ಪುತ್ತೆ. ಈ ಮೂಲಕ ರಕ್ತದಲ್ಲಿರುವ ವಿಷಕಾರಿ ರೋಗಾಣು ಹೊರ ಬರುತ್ತೆ, ಶುದ್ಧ ಮಾಂಸ ಲಭ್ಯ ಆಗುತ್ತೆ ಎನ್ನುವ ನಂಬಿಕೆ ಇದೆ. ಈ ನಂಬಿಕೆಯ ಆಧಾರದ ಮೇಲೆ ಸನಾ ಖಾನ್ ಹಲಾಲ್ ಮಾಂಸಕ್ಕೆ ಹೋಟೆಲ್‌ನಲ್ಲಿ ಬೇಡಿಕೆಯನ್ನಿಟ್ಟಿದ್ದಾರೆ.


Click it and Unblock the Notifications











