ವಿದೇಶಿ ವರದಿಗಾರರ ಸುದ್ದಿಗೋಷ್ಠಿ ರದ್ದು ಮಾಡಿದ್ದಕ್ಕೆ ವಿವೇಕ್ ಅಗ್ನಿಹೋತ್ರಿ ಆಕ್ರೋಶ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ರಾಷ್ಟ್ರದಾದ್ಯಂತ ತೆರೆ ಕಂಡು ಭಾರೀ ಸದ್ದು ಮಾಡಿತ್ತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾಗೆ ರಾಜಕೀಯ ನಾಯಕರುಗಳೇ ಸಿನಿಮಾ ನೋಡುವಂತೆ ಪ್ರಚಾರ ನೀಡಿದ್ದರು. ಈ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ ಕತೆಯನ್ನು ಹೇಳಲಾಗಿತ್ತು.
ಸದ್ಯ ಈ ಸಿನಿಮಾ ಈಗ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಲೇ ಇದೆ. ಈಗ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭಾರತೀಯ ಪ್ರಸ್ ಕ್ಲಬ್ ಹಾಗೂ ವಿದೇಶಿ ವರದಿಗಾರರ ಪ್ರಸ್ ಕ್ಲಬ್ ಬಗ್ಗೆ ಕೆಂಡಮಂಡಲರಾಗಿದ್ದಾರೆ. ಇಂದು ಅಂದು ಮೇ 5 ರಂದು ನವದೆಹಲಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ವಿದೇಶಿ ವರದಿಗಾರರ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿರುವುದಕ್ಕೆ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಹಾಗೂ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಚರ್ಚಿಸಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಕೆಲವು ಪ್ರಬಲ ಮಾಧ್ಯಮಗಳ ಬೆದರಿಕೆಯಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ನಡೆ ಎಂದ ವಿವೇಕ್
'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇಂದು ನಡೆಯಬೇಕಿದ್ದ ಪತ್ರಿಕಾ ಗೋಷ್ಠಿಯನ್ನು ರದ್ದುಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿದೆ. ಕೆಲವು ಮಾಧ್ಯಮಗಳು ಗೋಷ್ಠಿಯನ್ನು ರದ್ದು ಮಾಡುವಂತೆ ಹೇಳಿದ್ದು, ಇಲ್ಲವಾದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವಿದೇಶಿ ವರದಿಗಾರರ ಕ್ಲಬ್‌ನ ಅಧ್ಯಕ್ಷರು ಕರೆ ಮಾಡಿ ಸುದ್ದಿಗೋಷ್ಠಿ ರದ್ದಾದ ಬಗ್ಗೆ ಮಾಹಿತಿ ನೀಡಿದರು. ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ, ದ್ವೇಷಪೂರಿತ ಅಭಿಯಾನದ ಪ್ರಭಾವ ಎಂದು ಹೇಳಿದ್ದಾರೆ. ಅಲ್ಲದೆ ಇಂದು ಮಾಧ್ಯಮ ಸಂವಾದವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಸುವುದಾಗಿ ಘೋಷಿಸಿದ್ದಾರೆ. ಮಾಧ್ಯಮಗಳು ಕೇಳುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ದ್ವೇಷದ ಅಭಿಯಾನಕ್ಕೆ ನಾನು ಬಲಿಪಶು-ವಿವೇಕ್
ಕೆಲವು ಶಕ್ತಿಶಾಲಿ ವಿದೇಶಿ ಮಾಧ್ಯಮಗಳು ಭಾರತ ವಿರೋಧಿ, ಸತ್ಯ ವಿರೋಧಿ, ಮತ್ತು ವಾಕ್ ಸ್ವಾತಂತ್ರ್ಯದ ವಿರೋಧಿಯ ಭಾಗವಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕೆಲ ಮಾಧ್ಯಮಗಳು ನನ್ನ ಬಗ್ಗೆ ದ್ವೇಷವನ್ನು ಹರಡಲು ಬಳಸಿಕೊಳ್ಳುತ್ತಿದೆ. ಈ ಮೂಲಕ ನನ್ನನ್ನು ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ಹೇಳಿದರು. ಅಲ್ಲದೆ ಮೇ 5 ರಂದೇ ನವದೆಹಲಿಯಲ್ಲೇ ಓಪನ್ ಹೌಸ್ ಪತ್ರಿಕಾಗೋಷ್ಠಿ ನಡೆಸುವುದಾಗಿಯೂ ಘೋಷಿಸಿದರು. ಆದರೆ ಇದಕ್ಕೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರತಿಕ್ರಿಯಿಸಿದ್ದು, ಮೇ 5 ರಂದು ಯಾವುದೇ ವ್ಯಕ್ತಿ ಅಥವಾ ಯಾವುದೇ ಕಾರ್ಯಕ್ರಮವನ್ನು ನಡೆಸಲಾಗುತ್ತಿಲ್ಲ ಎಂದು ಹೇಳಿದೆ. ಸುದ್ದಿಗೋಷ್ಟಿ ಮಾಡುವ ಮೊದಲು ಕ್ಲಬ್ ಸದಸ್ಯರ ಮೂಲಕ ಬುಕಿಂಗ್ ಮಾಡಬೇಕಾಗುತ್ತದೆ. ಆದರೆ, ವಿವೇಕ್ ಅಗ್ನಿಹೋತ್ರಿ ಈ ಯಾವುದೇ ಪ್ರಕ್ರಿಯೆ ಮಾಡಿಲ್ಲ ಅಂತ ಪ್ರೆಸ್ ಕ್ಲಬ್ ಹೇಳಿಕೊಂಡಿದೆ.

ವಿವೇಕ್ ಆರೋಪಗಳನ್ನು ತಳ್ಳಿ ಹಾಕಿದ ಪ್ರೆಸ್ ಕ್ಲಬ್
ಯಾವುದೇ ಪತ್ರಿಕಾಗೋಷ್ಟಿ ನಡೆಸಲು ಬುಕಿಂಗ್ ಮಾಡಿಲ್ಲ ಎಂದು ಹೇಳಿದ್ದ ಪ್ರೆಸ್ ಕ್ಲಬ್ ಇಂಡಿಯಾ ಹೇಳಿಕೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟರ್‌ನಲ್ಲಿ ಪ್ರೆಸ್ ಕ್ಲಬ್ ನಲ್ಲಿ ಈ ಹಿಂದೆ ಮಾಡಿದ ಕಾರ್ಯಕ್ರಮಗಳಿಗಾಗಿ ತಾವು ಮಾಡಿದ ಪಾವತಿ ರಸೀದಿಗಳು, ಹಾಗೂ ಪ್ರೆಸ್ ಕ್ಲಬ್ ಅಧಿಕಾರಿಗೆ ಕಳಿಸಲಾದ ಸಂದೇಶಗಳು ಮತ್ತು ಪೋನ್ ಕರೆಗಳ ಸ್ಟ್ರೀನ್ ಶಾಟ್‌ಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದ್ದು, ನನ್ನನ್ನು ಅಪ್ರಜಾಸತಾತ್ಮಕವಾಗಿ ನಿಷೇಧಿಸಿರುವುದು ಮಾತ್ರವಲ್ಲದೆ, ಸುಳ್ಳು ಆರೋಪಗಳನ್ನು ನನ್ನ ಮೇಲೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರೆಸ್‌ಕ್ಲಬ್ ಇಂಡಿಯಾ ವಿವೇಕ್ ಅಗ್ನಿಹೋತ್ರಿಯವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಮೇ 5 ರಂದು ಯಾವುದೇ ಕಾರ್ಯಕ್ರಮ ನಡೆಸಲು ಪ್ರೆಸ್ ಕ್ಲಬ್ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಅಲ್ಲದೆ ಮಾರ್ಚ್ 25ರಂದು ಬುಕಿಂಗ್ ಮಾಡಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಪ್ರೆಸ್ ಕ್ಲಬ್ ಇಂಡಿಯಾ ವಿವೇಕ್ ಅಗ್ನಿಹೋತ್ರಿ ಆರೋಪವನ್ನು ತಳ್ಳಿ ಹಾಕಿದೆ.

ವಿಕಿಪೀಡಿಯ ವಿರುದ್ಧ ವಿವೇಕ್ ಅಗ್ನಿಹೋತ್ರಿ ಆಕ್ಷೇಪ
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ವಿಕಿಪಿಡಿಯಾದಲ್ಲಿ ಬಿತ್ತರವಾಗಿದ್ದ ಬರಹದ ಬಗ್ಗೆ ವಿವೇಕ್ ಅಗ್ನಿಹೋತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಕಿಪೀಡಿಯ ಲೇಖನದಲ್ಲಿ ಚಿತ್ರದ ಕಥೆಯನ್ನು ಕಾಲ್ಪನಿಕ ಎಂದು ಬರೆಯಲಾಗಿದೆ. ಇದರಿಂದ ಆಕ್ರೋಶಗೊಂಡ ವಿವೇಕ್ ವಿಕಿಪೀಡಿಯದ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಪ್ರಿಯ ವಿಕಿಪೀಡಿಯ ನಿಮ್ಮ ಬರಹದಲ್ಲಿ ಇಸ್ಲಾಮೋಪೋಬಿಯಾ, ಧರ್ಮಾಂಧ ಮೊದಲಾದ ಪದಗಳನ್ನು ಸೇರಿಸಲು ಮರೆತಿದ್ದೀರಿ. ನೀವು ಜಾತ್ಯತೀತ ನಿಲುವನ್ನು ಉಲ್ಲಂಘಿಸುತ್ತಿದ್ದೀರಿ. ಇನ್ನಷ್ಟು ಹೀಗೆ ಎಡಿಟ್ ಮಾಡಿ ಎಂದು ವಿಕಿಪೀಡಿಯ ಬರಹದ ವಿರುದ್ದ ಕಿಡಿಕಾರಿದ್ದರು.
ಮಾರ್ಚ್ 11 ರಂದು 'ದಿ ಕಾಶ್ಮೀರ್ ಫೈಲ್ಸ್' ರಾಷ್ಟ್ರದಾದ್ಯಂತ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಚಿತ್ರವನ್ನು ಹೆಣೆಯಲಾಗಿತ್ತು. ಈ ಸಿನಿಮಾ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದಲ್ಲದೆ, ಪಾರ್ಲಿಮೆಂಟ್‌ನಲ್ಲೂ ಈ ಚಿತ್ರದ ಕುರಿತಾಗಿ ಚರ್ಚೆಗಳು ನಡೆದಿದ್ದವು. ವಿರೋಧ ಹಾಗೂ ಆಡಳಿತ ಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು. ಅಲ್ಲದೆ ಹಲವು ರಾಜ್ಯಗಳಲ್ಲಿ ಸಿನಿಮಾ ನೋಡುವಂತೆ ಉಚಿತ ಟಿಕೆಟ್ ಕೂಡ ಹಂಚಲಾಗುತ್ತಿತ್ತು. ರಾಜಕೀಯ ನಾಯಕರು ಸಿನಿಮಾ ನೋಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 331 ಕೋಟಿ ರೂಗಳಷ್ಟು ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಮೊದಲಾದ ಖ್ಯಾತ ತಾರೆಯರು ಬಣ್ಣಹಚ್ಚಿದ್ದರು. ಈ ಚಿತ್ರ ಮೇ 1 ರಂದು ಜೀ ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು ಅಲ್ಲೂ ದಾಖಲೆ ಮಾಡುತ್ತಾ ನೋಡಬೇಕಿದೆ.


Click it and Unblock the Notifications











