'ವಾರ್- 2' ಚಿತ್ರಕ್ಕೆ ಹೃತಿಕ್ ರೋಷನ್‌ಗಿಂತ ಜ್ಯೂ. ಎನ್‌ಟಿಆರ್ ಸಂಭಾವನೆ ಹೆಚ್ಚು!
ಅಯಾನ್ ಮುಖರ್ಜಿ ನಿರ್ದೇಶನದ 'ವಾರ್- 2' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಇತ್ತೀಚೆಗೆ ಬಂದ ರೊಮ್ಯಾಂಟಿಕ್ ಸಾಂಗ್ ಹಿಟ್ ಲಿಸ್ಟ್ ಸೇರಿದೆ. ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ತೆಲುಗು ನಟ ಜ್ಯೂ. ಎನ್‌ಟಿಆರ್ ಅಬ್ಬರಿಸಿರುವುದು ಗೊತ್ತೇಯಿದೆ. ಆಗಸ್ಟ್ 14ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಎದುರು 'ವಾರ್-2' ಸಿನಿಮಾ ಬಿಡುಗಡೆ ಆಗ್ತಿದೆ. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀರ್ಶಸ್ ಕ್ಲ್ಯಾಶ್ ಚರ್ಚೆ ಶುರುವಾಗಿದೆ. ಆದರೆ ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ ದೊಡ್ಡ ವೀಕೆಂಡ್ ಸಿಗುತ್ತಿದೆ. ಹಾಗಾಗಿ ಎರಡೂ ಬಹುನಿರೀಕ್ಷಿತ ಚಿತ್ರಗಳು ಬಂದರೂ ಗೆಲ್ಲುವ ಲೆಕ್ಕಾಚಾರ ಕೆಲವರದ್ದು.

'ವಾರ್- 2' ಸಿನಿಮಾ ಉತ್ತರ ಭಾರತದಲ್ಲಿ ಹಾಗೂ 'ಕೂಲಿ' ಸಿನಿಮಾ ದಕ್ಷಿಣದಲ್ಲಿ ಹೆಚ್ಚು ಸ್ಕ್ರೀನ್‌ಗಳನ್ನು ಆವರಿಸಿಕೊಳ್ಳಲಿದೆ. ಹಾಗಾಗಿ ಹೆಚ್ಚು ಸಮಸ್ಯೆ ಆಗುವುದಿಲ್ಲ ಎನ್ನುವ ವಾದವೂ ಇದೆ. ಆರೆ ಈಗಾಗಲೇ ಕೆಲವೆಡೆ ಸ್ಕ್ರೀನ್‌ಗಳ ಕಾರಣಕ್ಕೆ ಪೈಪೋಟಿ ಶುರುವಾಗಿದೆ. ವಿದೇಶಗಳಲ್ಲಿ ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. 'ವಾರ್- 2' ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಶೀಘ್ರದಲ್ಲೇ 'ಕೂಲಿ' ಟ್ರೈಲರ್ ಹೊರಬರಲಿದೆ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ಗೆ ಹೊಸ ಸೇರ್ಪಡೆ 'ವಾರ್- 2'. ಈ ಬಾರಿ ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಹೃತಿಕ್, ತಾರಕ್ ಜೊತೆಗೆ ಕಿಯಾರಾ ಅದ್ವಾನಿ, ಅಶುತೋಷ್ ರಾಣಾ, ಅನಿಲ್ ಕಪೂರ್ ಚಿತ್ರದ ತಾರಾಗಣದಲ್ಲಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ಇದಾಗಿದೆ.

6 ವರ್ಷಗಳ ಹಿಂದೆ ಬಂದಿದ್ದ 'ವಾರ್' ಸಿನಿಮಾ ಬ್ಲಾಕ್‌ಬ್ಲಸ್ಟರ್ ಹಿಟ್ ಆಗಿತ್ತು. ರಾ ಏಜೆಂಟ್ ಕಬೀರ್ ಧಲಿವಾಲ್ ಪಾತ್ರದಲ್ಲಿ ಹೃತಿಕ್ ಅಬ್ಬರಿಸಿದ್ದರು. ಅದೇ ಪಾತ್ರವನ್ನು ಸೀಕ್ವೆಲ್‌ನಲ್ಲಿ ಮುಂದುವರೆಸುತ್ತಿದ್ದಾರೆ. ವಿಕ್ರಂ ಆಗಿ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ತಾರಕ್ ಮಿಂಚಿದ್ದಾರೆ. ಇಬ್ಬರ ನಡುವಿನ ಹಣಾಹಣಿ ಕುತೂಹಲ ಮೂಡಿಸಿದೆ. ಹೇಳಿಕೇಳಿ ಹೈವೋಲ್ಟೇಜ್ ಆಕ್ಷನ್ ಸಿನಿಮಾ. ಸೂಪರ್ ಹಿಟ್ ಸಿನಿಮಾ ಸೀಕ್ವೆಲ್. 400 ಕೋಟಿ ರೂ. ಬಜೆಟ್. ಅಂದಮೇಲೆ ಚಿತ್ರದಲ್ಲಿ ಕೆಲಸ ಮಾಡಿರುವ ಕಲಾವಿದರು, ತಂತ್ರಜ್ಞರಿಗೆ ಭಾರೀ ಸಂಭಾವನೆ ಸಿಕ್ಕಿರುತ್ತದೆ.
ಸದ್ಯ 'ವಾರ್- 2' ಚಿತ್ರದ ಸ್ಟಾರ್‌ಕಾಸ್ಟ್ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಬಾಲಿವುಡ್ ಹಂಗಾಮಾ ವೆಬ್‌ಸೈಟ್ ವರದಿಯ ಪ್ರಕಾರ ಹೃತಿಕ್ ರೋಷನ್ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಈ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಜಿಗಿದಿರುವ ತಾರಕ್ 70 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣದಿಂದ ಬಾಲಿವುಡ್ ಎಂಟ್ರಿಗೆ ನಟನೊಬ್ಬ ಪಡೆಯುತ್ತಿರುವ ಭಾರೀ ಸಂಭಾವನೆ ಇದು ಎನ್ನುವ ಮಾತುಗಳು ಕೇಳಿಬರ್ತಿದೆ.
ಹೃತಿಕ್ ರೋಷನ್ ಸಂಭಾವನೆ ರೂಪದಲ್ಲಿ 50 ಕೋಟಿ ರೂ. ಮಾತ್ರ ಪಡೆಯುತ್ತಿದ್ದಾರೆ. ಅದರ ಜೊತೆಗೆ ಲಾಭದಲ್ಲಿ ಶೇರ್ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಒಟ್ಟಾರೆ ಸಂಭಾವನೆ 100 ರಿಂದ 200 ಕೋಟಿ ರೂ.ವರೆಗೂ ಸಿಗಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಇನ್ನು ನಾಯಕಿ ಕಿಯಾರಾ ಅದ್ವಾನಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಗುಲ್ಲಾಗಿದೆ. ಅನಿಲ್ ಕಪೂರ್ 10 ಕೋಟಿ ರೂ. ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ 30 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











